ಕಳವಳಕಾರಿ ಮಟ್ಟ ಮುಟ್ಟಿರುವ ನಿರುದ್ಯೋಗ ಪ್ರಮಾಣ

Update: 2023-01-23 05:59 GMT

ಕೋಟಿ ಕೋಟಿ ಉದ್ಯೋಗ. ಅಧಿಕಾರಕ್ಕೆ ಬರುವ ಮೊದಲೇ ಮೋದಿ ಕೊಟ್ಟ ಆಶ್ವಾಸನೆ ಅಲ್ಲೇ ಉಳಿಯಿತು. ಈ ಎಂಟು ವರ್ಷಗಳಲ್ಲಿ ಅವರದೇ ಮಾತಿನ ಪ್ರಕಾರ ಕೆಲವು ಕೋಟಿ ಉದ್ಯೋಗಗಳು ಸೃಷ್ಟಿಯಾಗಬೇಕಿತ್ತು. ದುರಂತವೆಂದರೆ, ಹೊಸ ಉದ್ಯೋಗ ಸೃಷ್ಟಿ ಹಾಗಿರಲಿ, ಇರುವ ಉದ್ಯೋಗಗಳೂ ಇಲ್ಲವಾಗಿವೆ. ಉನ್ನತ ಪದವಿ ಪಡೆದ ಯುವಕರು ಕೂಲಿ ಕೆಲಸಕ್ಕೆ, ಡ್ರೈವರ್ ಕೆಲಸಕ್ಕೆ ಅರ್ಜಿ ಹಾಕುತ್ತಿರುವ, ಟೀ ಪಕೋಡ ಅಂಗಡಿ ಇಡುವ ಕಟು ವಾಸ್ತವವನ್ನು ಈ ದೇಶ ನೋಡಬೇಕಾಗಿದೆ.

ಈಗಿನ ಆಘಾತಕಾರಿ ಸಂಗತಿಯೇನೆಂದರೆ, ಕಳೆದ 16 ತಿಂಗಳುಗಳಲ್ಲೇ ದೇಶದಲ್ಲಿ ನಿರುದ್ಯೋಗ ಪ್ರಮಾಣ ಗರಿಷ್ಠ ಏರಿದೆ ಎಂಬುದು. ಹೊಸ ಅಂಕಿಅಂಶಗಳ ಪ್ರಕಾರ, ಭಾರತದ ನಿರುದ್ಯೋಗ ದರವು ಕಳೆದ ಡಿಸೆಂಬರ್‌ನಲ್ಲಿ ಶೇ. 8.30ಕ್ಕೆ ಏರಿದೆ, ಇದು 16 ತಿಂಗಳುಗಳಲ್ಲಿಯೇ ಅತ್ಯಧಿಕವಾಗಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (CMIE) ವರದಿ ತೋರಿಸಿರುವಂತೆ, ನವೆಂಬರ್ ತಿಂಗಳಲ್ಲಿ ಶೇ.8 ಇದ್ದದ್ದು, ತಿಂಗಳ ಅಂತರದಲ್ಲಿಯೇ ಮತ್ತಷ್ಟು ಹೆಚ್ಚಿದೆ.

ನಗರ ಪ್ರದೇಶದ ನಿರುದ್ಯೋಗ ದರವು ನವೆಂಬರ್ ತಿಂಗಳಲ್ಲಿ ಶೇ.8.96 ಇತ್ತು. ಅದು ಡಿಸೆಂಬರ್‌ನಲ್ಲಿ ಶೇ. 10.09ಕ್ಕೆ ಏರಿದೆ, ಇದೇ ವೇಳೆ ಗ್ರಾಮೀಣ ನಿರುದ್ಯೋಗ ದರ ಶೇ. 7.55 ಇದ್ದದ್ದು ಡಿಸೆಂಬರ್‌ನಲ್ಲಿ ಕೊಂಚ ತಗ್ಗಿದೆ. ಅಂದರೆ ಶೇ. 7.44ಕ್ಕೆ ಇಳಿದಿದೆ ಎಂದು AJMC ಅಂಕಿಅಂಶಗಳು ಹೇಳುತ್ತಿವೆ.

ಇದನ್ನು ಸ್ವಲ್ಪ ವಿವರವಾಗಿ ಕೆಲವು ರಾಜ್ಯಗಳ ಉದಾಹರಣೆಗಳೊಂದಿಗೆ ನೋಡುವುದಾದರೆ,

ಹರಿಯಾಣವು ಶೇ. 37.4ರಷ್ಟು ಅಂದರೆ ಅತ್ಯಧಿಕ ನಿರುದ್ಯೋಗ ದರವನ್ನು ದಾಖಲಿಸಿದೆ. ಒಡಿಶಾದಲ್ಲಿ ಕಳೆದ ತಿಂಗಳು ಶೇ. 0.9ರಷ್ಟು ಅಂದರೆ ಅತಿ ಕಡಿಮೆ ನಿರುದ್ಯೋಗ ಪ್ರಮಾಣ ಕಂಡುಬಂದಿದೆ. ಹರಿಯಾಣವನ್ನು ಹೊರತುಪಡಿಸಿ, ದಿಲ್ಲಿ ಸೇರಿದಂತೆ ಇನ್ನೂ ಏಳು ರಾಜ್ಯಗಳು ಎರಡಂಕಿಯ ನಿರುದ್ಯೋಗ ದರ ಇರುವುದನ್ನು ಅಂಕಿಅಂಶಗಳು ತೋರಿಸುತ್ತಿವೆ.

ಇದೇ ವೇಳೆ, ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಬಿಡುಗಡೆ ಮಾಡಿರುವ ತ್ರೈಮಾಸಿಕ ದತ್ತಾಂಶದ ಪ್ರಕಾರ, ನಿರುದ್ಯೋಗ ದರವು ಜುಲೈ-ಸೆಪ್ಟ್ಟಂಬರ್ ತ್ರೈಮಾಸಿಕದಲ್ಲಿ ಶೇ. 7.2ರಷ್ಟಿತ್ತು. ಇದು ಹಿಂದಿನ ತ್ರೈಮಾಸಿಕದ ನಿರುದ್ಯೋಗ ದರಕ್ಕೆ ಹೋಲಿಸಿಕೊಂಡರೆ ಸ್ವಲ್ಪ ಕಡಿಮೆ. ಹಿಂದಿನ ತ್ರೈಮಾಸಿಕದಲ್ಲಿ ನಿರುದ್ಯೋಗ ದರ ಶೇ. 7.6 ಇತ್ತು. ಆದರೆ, ನಿರುದ್ಯೋಗ ಪ್ರಮಾಣದಲ್ಲಿ ಕಂಡಿರುವ ಈ ಇಳಿಕೆಯು ತಾತ್ಕಾಲಿಕ ಎಂಬಂತೆ ಕಾಣಿಸುತ್ತಿದೆ ಎಂಬುದು ತಜ್ಞರ ವಿಶ್ಲೇಷಣೆ.

2022ರ ಮಧ್ಯಭಾಗದಿಂದ ಈಚೆಗೆ ನಿರುದ್ಯೋಗ ಪ್ರಮಾಣ ಕಡಿಮೆಯಾಗುತ್ತ ಬಂದಿದೆ ಎಂಬ ಭಾವನೆಯಿತ್ತು. ಆದರೆ ಈಗ CMIE ವರದಿಯಲ್ಲಿನ ಅಂಕಿಅಂಶಗಳು ಕಳವಳ ಹುಟ್ಟಿಸುವಂತಿವೆ. ನಿರುದ್ಯೋಗ ಏರಿಕೆ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿದೆ. ಈ ಹಿಂದಿನ CMIE ವರದಿಗಳನ್ನು ಗಮನಿಸಿದರೆ ಈ ಅಂಶ ಮನದಟ್ಟಾಗುತ್ತದೆ. ನಿರುದ್ಯೋಗ ದರವು 2017-18ರಲ್ಲಿ 45 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಅಂದರೆ ಶೇ. 6.1ಕ್ಕೆ ಏರಿತ್ತು. ಆ ಬಳಿಕ ಈ ಪ್ರಮಾಣ ಹೆಚ್ಚು ಕಡಿಮೆ ದ್ವಿಗುಣಗೊಂಡು ದಾಖಲಾಗಿದೆ. ಇದು ನಿಜಕ್ಕೂ ಆಘಾತಕಾರಿ.

ದೇಶದಲ್ಲಿ ಇಲ್ಲಿಯವರೆಗೂ 45 ಕೋಟಿ ಜನರು ಈ ಹಿಂದೆ ಇದ್ದ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. 2021ರ ಆರಂಭದಿಂದ ಈವರೆಗಿನ ಅವಧಿಯಲ್ಲೇ 2.5 ಕೋಟಿಗೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಮತ್ತು 7.5 ಕೋಟಿಗಿಂತಲೂ ಹೆಚ್ಚು ಮಂದಿ ಆರ್ಥಿಕ ನಷ್ಟಕ್ಕೊಳಗಾಗಿ ಬಡತನದ ಸ್ಥಿತಿಗೆ ಮರಳಿದ್ದಾರೆ. ಇವರಲ್ಲಿ 10 ಕೋಟಿ ಮಧ್ಯಮ ವರ್ಗದ ಮೂರನೇ ಒಂದರಷ್ಟು ಮಂದಿಯೂ ಸೇರಿದ್ದಾರೆ. ಸಂಶೋಧನೆಯೊಂದರ ಅಂದಾಜುಗಳ ಪ್ರಕಾರ, ಅವರು ಕಳೆದ ಅರ್ಧ ದಶಕದಲ್ಲಿ ಗಳಿಸಿದ್ದನ್ನು ಕಳೆದುಕೊಂಡಿದ್ದಾರೆ. ಭಾರತದ ಆರ್ಥಿಕತೆಗೆ ವರ್ಷಕ್ಕೆ ಕನಿಷ್ಠ 2 ಕೋಟಿ ಉದ್ಯೋಗಗಳ ಅಗತ್ಯವಿದೆ. ಆದರೆ, ಅದನ್ನೇ ಹೇಳಿಕೊಂಡು ಅಧಿಕಾರಕ್ಕೇರಿದ್ದ ಮೋದಿ ಸರಕಾರ ತೋರಿಸುತ್ತಿರುವುದು ಮಾತ್ರ ದೊಡ್ಡ ಸೊನ್ನೆ. ದೇಶದಲ್ಲಿ ಕಳೆದ 10 ವರ್ಷಗಳಿಂದ ವರ್ಷವೂ ಕೆಲವೇ ಲಕ್ಷ ಉದ್ಯೋಗಗಳಷ್ಟೇ ಹೆಚ್ಚುವರಿಯಾಗಿ ಸೇರುತ್ತಿವೆ. ಮೋದಿ ನೀಡಿದ್ದ ಆಶ್ವಾಸನೆ ಮತ್ತೇನನ್ನೂ ಹೊಸದಾಗಿ ಮಾಡಿಲ್ಲ ಎಂಬುದನ್ನು ಈ ಅಂಕಿಅಂಶಗಳೇ ಹೇಳುತ್ತಿವೆ.

ಇದರ ಅರ್ಥ, ಆರ್ಥಿಕ ಪ್ರಗತಿಗೆ ತಕ್ಕಂತೆ ಉದ್ಯೋಗಗಳ ಸೃಷ್ಟಿಯಾಗುತ್ತಿಲ್ಲ. NSO ದತ್ತಾಂಶದ ಪ್ರಕಾರ, 2005ರಿಂದ 2012ರ ಅವಧಿಯಲ್ಲಿ ಪ್ರತಿವರ್ಷ 75 ಲಕ್ಷ ಕೃಷಿಯೇತರ ಉದ್ಯೋಗಗಳು ಸೃಷ್ಟಿಯಾಗಿದ್ದವು .ಆದರೆ 2013ರಿಂದ 2019ರ ಅವಧಿಯಲ್ಲಿ ಪ್ರತೀ ವರ್ಷ ಸೃಷ್ಟಿಯಾಗಿರುವ ಉದ್ಯೋಗಳು 29 ಲಕ್ಷ ಮಾತ್ರ. ಪ್ರತಿವರ್ಷವೂ ಲಕ್ಷಾಂತರ ಯುವಕರು ನಿರುದ್ಯೋಗಿಗಳ ಸಾಲನ್ನು ಸೇರುತ್ತಲೇ ಇದ್ದಾರೆ.

ಮಾತೆತ್ತಿದರೆ ಬಿಜೆಪಿ ಮತ್ತು ಅದರ ನೇತೃತ್ವದ ಕೆಂದ್ರ ಸರಕಾರ ಕೋವಿಡ್ ವಿಚಾರವನ್ನು ಮುಂದೆ ಮಾಡುತ್ತದೆ. ಆದರೆ, ನಿರುದ್ಯೋಗಕ್ಕೆ ಕೋವಿಡ್ ಮಾತ್ರವೇ ಕಾರಣವಲ್ಲ ಎಂಬುದನ್ನೂ ಅಂಕಿಅಂಶಗಳೇ ಹೇಳುತ್ತವೆ. ಉತ್ಪಾದನಾ ಉದ್ಯೋಗ ದತ್ತಾಂಶ ವಲಯವು ಹೇಳುವಂತೆ, ಉದ್ಯೋಗ ಪ್ರಮಾಣವು ಎರಡು ಹಂತಗಳಲ್ಲಿ ಅತಿದೊಡ್ಡ ಕುಸಿತವನ್ನು ಕಂಡಿದೆ. ಮೊದಲನೆಯದು 2016-17 ಮತ್ತು 2017-18ರ ಮಧ್ಯದ ಅವಧಿಯಲ್ಲಾದರೆ, ಎರಡನೆಯದು 2019-20 ಮತ್ತು 2020-21ರ ಅವಧಿಯಲ್ಲಿ. 2016ರಲ್ಲಿ ಸರಕಾರವು 500 ಮತ್ತು 1,000 ರೂಪಾಯಿ ನೋಟುಗಳನ್ನು ದಿಢೀರನೇ ರದ್ದುಗೊಳಿಸಿತು. ಇದು ಉತ್ಪಾದನಾ ವಲಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಿತು. 2020ರ ಎಪ್ರಿಲ್-ಜೂನ್ ಅವಧಿಯಲ್ಲಿ ಕೋವಿಡ್ ಕಾರಣದಿಂದಾಗಿ ದೇಶವ್ಯಾಪಿ ಲಾಕ್‌ಡೌನ್ ಆದಾಗ ಎರಡನೇ ಹಂತದ ಕುಸಿತ ಸಂಭವಿಸಿತು. ಭಾರತದ ಉತ್ಪಾದನಾ ವಲಯದಲ್ಲಿನ ಕುಸಿತ, ಭಾರತದ ಯುವಜನರಿಗೆ ಔಪಚಾರಿಕ ಉದ್ಯೋಗದಲ್ಲಿನ ಕುಸಿತ ಮತ್ತು ನಂತರದಲ್ಲಿ, ನಿರುದ್ಯೋಗಿಗಳಾಗಿದ್ದು ಉದ್ಯೋಗಕ್ಕಾಗಿ ಹುಡುಕಾಡಿ ಸೋತುಹೋದ ಯುವಕರ ದೊಡ್ಡ ಪ್ರಮಾಣ ?ಇವೆಲ್ಲವೂ ಭಾರತದಲ್ಲಿನ ತೀವ್ರ ಉದ್ಯೋಗ ಬಿಕ್ಕಟ್ಟನ್ನು ಸೂಚಿಸುವ ಅಂಶಗಳಾಗಿವೆ.

ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಕೊರತೆ ಕಡಿಮೆಯಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡರೂ ಅದರ ಒಳಮರ್ಮವು ಪರಿಣಿತರ ಪ್ರಕಾರ ಬೇರೆಯೇ ಇದೆ. ಏನೆಂದರೆ, ಆರ್ಥಿಕ ಪ್ರಗತಿಯು ನಗರ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸಬೇಕು. ಆದರೆ, ಆ ಪ್ರಮಾಣದಲ್ಲಿ ನಗರ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಯಾಗದೆ, ಜನರು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಕಂಡುಕೊಂಡಿರುವ ಸಾಧ್ಯತೆ ಇದೆ. ಹಾಗಾಗಿ ಅಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆಯಾದಂತೆ ತೋರುತ್ತದೆಯೇ ಹೊರತು ಅದರಲ್ಲಿ ಬೆನ್ನು ತಟ್ಟಿಕೊಳ್ಳಬೇಕಾದದ್ದೇನೂ ಇಲ್ಲ.

ಉತ್ಪಾದನಾ ವಲಯ ಮತ್ತು ಕೃಷಿಯೇತರ ಕ್ಷೇತ್ರದಲ್ಲಿನ ಉದ್ಯೋಗ ಪ್ರಮಾಣ ಹೆಚ್ಚಳ ಈಗಿನ ಅಗತ್ಯವಾಗಿದೆ. ವಿಶೇಷವಾಗಿ ಕಡಿಮೆ ಕೌಶಲ್ಯದ ಉದ್ಯೋಗ ಸೃಷ್ಟಿಯ ಕಡೆಗೆ ಸರಕಾರ ಪ್ರಾಥಮಿಕ ಗಮನ ಹರಿಸಬೇಕಿರುವುದು ಅವಶ್ಯ. ಜಿಡಿಪಿ ಬೆಳವಣಿಗೆಯ ಮೇಲೆ ಗಮನ ಕೊಡುವುದಷ್ಟೇ ಸಾಲದು. ಉದ್ಯೋಗ, ಯುವಕರ ಕೌಶಲ್ಯ ಮತ್ತು ರಫ್ತು ನಿರೀಕ್ಷೆಗಳೊಂದಿಗೆ ಉತ್ಪಾದನಾ ಸಾಮರ್ಥ್ಯಗಳನ್ನು ಸೃಷ್ಟಿಸುವ ಮೂಲಕ ಬೆಳವಣಿಗೆಯನ್ನು ಸಾಧಿಸುವತ್ತಲೂ ಕಣ್ಣು ಹಾಯಿಸಬೇಕಾಗಿದೆ. ಹೆಚ್ಚಿನ ಹಣದುಬ್ಬರವನ್ನು ತಡೆದುಕೊಳ್ಳುವುದು ಮತ್ತು ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುವ ಲಕ್ಷಾಂತರ ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿಸುವುದು 2024ರ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ಮೋದಿ ಆಡಳಿತಕ್ಕೆ ದೊಡ್ಡ ಸವಾಲಾಗಿದೆ ಎಂಬುದಂತೂ ನಿಜ. ಅದಕ್ಕಾಗಿಯೇ ಈ ದೇಶದ ಯುವಕರ ಮನಸ್ಸಿನಲ್ಲಿ ಮತೀಯ ವಿಷ ಬಿತ್ತಿ, ಹಿಂಸೆಯ ಬೆಂಕಿ ಹೊತ್ತಿಸಿ, ಅದರಲ್ಲಿ ಚಳಿ ಕಾಯಿಸಿಕೊಳ್ಳುವ ತಂತ್ರವನ್ನೇ ನೆಚ್ಚಿಕೊಂಡು ಬರಲಾಗಿದೆ. ಮೋದಿಯನ್ನು ಎರಡೆರಡು ಬಾರಿ ಬೆಂಬಲಿಸಿ ಈ ರಕಾರವನ್ನು ತಂದ ಈ ದೇಶದ ಕೋಟ್ಯಂತರ ಯುವಕರ ಪಾಲಿಗೆ ಎಲ್ಲಿಯವರೆಗೆ ಈ ದ್ರೋಹ ಮುಂದುವರಿಯಲಿದೆ ಹಾಗಾದರೆ?

Full View