ಶ್ರೀನಿವಾಸಪುರ ಕ್ಷೇತ್ರ: ಗೆಲ್ಲುವುದು ವರ್ಚಸ್ಸೊ, ಜಾತಿಬಲವೊ?

Update: 2023-01-23 08:05 GMT

ರಮೇಶ್ ಕುಮಾರ್ ವಿಚಾರದಲ್ಲಿ ಒಂದೆಡೆ ಪಕ್ಷದವರೇ ಮುನಿಸಿಕೊಂಡಿದ್ದರೆ, ಮತ್ತೊಂದೆಡೆಯಿಂದ ಆರೋಗ್ಯ ಸಚಿವ ಸುಧಾಕರ್ ಹೇಗಾದರೂ ಮಾಡಿ ಅವರನ್ನು ಸೋಲಿಸಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆಂಬ ಮಾತು ಕೇಳಿಬರುತ್ತಿದೆ. ಶ್ರೀನಿವಾಸಪುರದಲ್ಲಿ ಬ್ರಾಹ್ಮಣ ಮತಗಳು ತೀರಾ ಕಡಿಮೆ. ರಮೇಶ್ ಕುಮಾರ್ ತಮ್ಮ ಸ್ವಂತ ವರ್ಚಸ್ಸಿನ ಬಲದಿಂದ ಗೆದ್ದವರು ಎಂಬುದು ವಿಶೇಷ. 

ರಮೇಶ್ ಕುಮಾರ್ ಸಾಧಿಸುವರೆ ಏಳನೇ ಗೆಲುವು, ಹ್ಯಾಟ್ರಿಕ್ ಜಯ? ಐದನೇ ಬಾರಿ ಗೆಲ್ಲುವ ವೆಂಕಟಶಿವಾರೆಡ್ಡಿ ಕನಸಿಗೆ ಸಾಥ್ ನೀಡಲಿದೆಯೆ ಬಿಜೆಪಿ? ಕಮಲ ಲೆಕ್ಕಕ್ಕಿಲ್ಲದ ಕ್ಷೇತ್ರದಲ್ಲಿ ಈ ಬಾರಿ ಗೆಲ್ಲುವುದು ವರ್ಚಸ್ಸೊ, ಜಾತಿಬಲವೊ? ಗೆಲ್ಲುವುದೇ , ರಮೇಶ್ ಕುಮಾರ್ ಸೋಲಿಸಿ ಸೇಡು ತೀರಿಸಿಕೊಳ್ಳುವ ಸುಧಾಕರ್ ಹಠ?

ಆಂಧ್ರದ ಗಡಿಗೆ ಹೊಂದಿಕೊಂಡಿರುವ ಕೋಲಾರ ಜಿಲ್ಲೆಯ ಕ್ಷೇತ್ರ ಶ್ರೀನಿವಾಸಪುರ. ಹೆಚ್ಚಿನ ಸಲ ಕಾಂಗ್ರೆಸ್ ಗೆದ್ದುಕೊಂಡಿರುವ ಕ್ಷೇತ್ರ ಇದು. ಈಗ ಶಾಸಕರಾಗಿರುವವರು ಕಾಂಗ್ರೆಸ್‌ನ ರಮೇಶ್ ಕುಮಾರ್. 2018ರ ಚುನಾವಣೆ ಫಲಿತಾಂಶ ಗಮನಿಸುವುದಾದರೆ, ರಮೇಶ್ ಕುಮಾರ್ ಅವರು ಹತ್ತಿರದ ಪ್ರತಿಸ್ಪರ್ಧಿ ಜೆಡಿಎಸ್‌ನ ಜಿ.ಕೆ. ವೆಂಕಟಶಿವಾರೆಡ್ಡಿ ವಿರುದ್ಧ ಗೆದ್ದಿದ್ದು 12,920 ಮತಗಳ ಅಂತರದಿಂದ.

ಇಬ್ಬರದೇ ಅಖಾಡ

 ಶ್ರೀನಿವಾಸಪುರ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಮತ್ತೊಮ್ಮೆ ಗೆಲ್ಲುವುದಿಲ್ಲ ಎಂಬ ಮಾತು 2018ರವರೆಗೂ ಇತ್ತು. ಅದನ್ನು ಮುರಿದು ದಾಖಲೆ ಬರೆದವರು ಕಾಂಗ್ರೆಸ್‌ನ ರಮೇಶ್ ಕುಮಾರ್. ಕ್ಷೇತ್ರದಲ್ಲಿ ರಮೇಶ್ ಕುಮಾರ್ ಮತ್ತು ವೆಂಕಟಶಿವಾರೆಡ್ಡಿ ಇಬ್ಬರ ನಡುವೆಯೇ ಕದನ ನಡೆಯುವುದು ಶುರುವಾಗಿ ನಲ್ವತ್ತು ವರ್ಷಗಳೇ ಆಗುತ್ತಿವೆ. 1983ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ರಮೇಶ್ ಕುಮಾರ್, ಆಗ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಿ.ಕೆ.ವೆಂಕಟಶಿವಾರೆಡ್ಡಿಯವರೆದುರು ಸೋತರು. ಒಟ್ಟು 9 ಚುನಾವಣೆಗಳಲ್ಲಿ ಇಬ್ಬರೂ ಮುಖಾಮುಖಿಯಾಗಿದ್ದಾರೆ. ರಮೇಶ್ ಕುಮಾರ್ 5 ಬಾರಿ ಗೆದ್ದರೆ, ವೆಂಕಟಶಿವಾರೆಡ್ಡಿ 4 ಬಾರಿ ಗೆದ್ದಿದ್ದಾರೆ. 2013ರಲ್ಲಿ ಗೆದ್ದಿದ್ದ ರಮೇಶ್ ಕುಮಾರ್ 2018ರ ಚುನಾವಣೆಯಲ್ಲಿಯೂ ಗೆಲ್ಲುವುದರೊಂದಿಗೆ, ಸತತ ಎರಡನೇ ಗೆಲುವನ್ನು ಈ ಕ್ಷೇತ್ರದಲ್ಲಿ ಕಂಡ ಮೊದಲ ಶಾಸಕ ಎನ್ನಿಸಿಕೊಂಡರು. ಈ ಸಲ ರಮೇಶ್ ಕುಮಾರ್ ಗೆದ್ದರೆ 1978ರಲ್ಲಿ ಕ್ಷೇತ್ರದಲ್ಲಿ ಮೊದಲ ಗೆಲುವು ಕಂಡಿದ್ದ ಅವರಿಗೆ ಇದು ಏಳನೇ ಗೆಲುವಾಗಲಿದೆ ಮಾತ್ರವಲ್ಲ, ಹ್ಯಾಟ್ರಿಕ್ ಜಯದ ದಾಖಲೆಯೂ ಅವರದಾಗಲಿದೆ. ವೆಂಕಟಶಿವಾರೆಡ್ಡಿ ಗೆದ್ದರೆ ಅವರ ಪಾಲಿಗೆ ಐದನೇ ಗೆಲುವಾಗಲಿದೆ.

ಬದಲಾಗಿರುವ ಸನ್ನಿವೇಶ

ಆದರೆ ಕೆಲವು ವರ್ಷಗಳಲ್ಲಿ ಕ್ಷೇತ್ರದಲ್ಲಿ ರಾಜಕೀಯವಾಗಿ ಹಲವಾರು ಬದಲಾವಣೆಗಳಾಗಿದ್ದು, 2023ರ ಚುನಾವಣೆ ಇಬ್ಬರಿಗೂ ಸವಾಲು ಎಂಬ ಮಾತುಗಳಿವೆ. ಶ್ರೀನಿವಾಸಪುರ ಕ್ಷೇತ್ರದ ಮಟ್ಟಿಗೆ ಅಖಾಡದಲ್ಲೇನಿದ್ದರೂ ರಮೇಶ್ ಕುಮಾರ್ ಮತ್ತು ವೆಂಕಟಶಿವಾರೆಡ್ಡಿ ಎಂಬಂತಿದ್ದ ಸನ್ನಿವೇಶ ಈ ಸಲ ಬದಲಾಗಲಿದೆ. ಅದಕ್ಕೆ ಕಾರಣ ಇಬ್ಬರ ವಿಚಾರದಲ್ಲಿಯೂ ಪಕ್ಷದೊಳಗೇ ಎದ್ದಿರುವ ಅಸಮಾಧಾನ. ಕಾಂಗ್ರೆಸ್‌ನ ನವರೇ ಬಿಜೆಪಿಗೆ ಮತ ಹಾಕುವಂತೆ ಹೇಳಿದ ಸಂದರ್ಭಗಳೂ ಇವೆಯೆನ್ನಲಾಗುತ್ತಿದೆ ಮಾತ್ರವಲ್ಲ, ಜೆಡಿಎಸ್ ಅಭ್ಯರ್ಥಿಯಾಗಿರುವ ವೆಂಕಟಶಿವಾರೆಡ್ಡಿಯವರಿಗೆ ಬಿಜೆಪಿಯ ಬೆಂಬಲವಿರಲಿದೆ ಎಂದು ಹೇಳಲಾಗುತ್ತಿದೆ.

  ಇನ್ನೊಂದೆಡೆ, ಜೆಡಿಎಸ್‌ನ ವೆಂಕಟಶಿವಾರೆಡ್ಡಿ ವಿಚಾರದಲ್ಲಿಯೂ ಪಕ್ಷದೊಳಗೇ ವಿರುದ್ಧ ಕೆಲಸ ಮಾಡುವ ಬಣವೊಂದು ಹುಟ್ಟಿಕೊಂಡಿದೆ. ಜೆಡಿಎಸ್‌ನ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಜಶೇಖರ್ ರೆಡ್ಡಿ ತಂಡ ವೆಂಕಟಶಿವಾರೆಡ್ಡಿ ವಿರುದ್ಧ ತಿರುಗಿಬಿದ್ದಿದೆ ಎಂದು ಹೇಳಲಾಗುತ್ತಿದೆ. ಜೆಡಿಎಸ್‌ನ ಹಲವು ನಾಯಕರು ಪಕ್ಷ ತೊರೆದಿದ್ದಾರೆ. ರೆಡ್ಡಿ ಸಮುದಾಯದ ಗುಂಜೂರು ಶ್ರೀನಿವಾಸರೆಡ್ಡಿ ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ ಮತ್ತು ಅವರಿಗೆ, ವೆಂಕಟಶಿವಾರೆಡ್ಡಿ ವಿರುದ್ಧ ತಿರುಗಿಬಿದ್ದಿರುವ ರಾಜಶೇಖರ್ ರೆಡ್ಡಿ ಬೆಂಬಲವಿದೆಯೆನ್ನಲಾಗಿದೆ.

ರಮೇಶ್ ಕುಮಾರ್ ವಿಚಾರದಲ್ಲಿ ಒಂದೆಡೆ ಪಕ್ಷದವರೇ ಮುನಿಸಿಕೊಂಡಿದ್ದರೆ, ಮತ್ತೊಂದೆಡೆಯಿಂದ ಆರೋಗ್ಯ ಸಚಿವ ಸುಧಾಕರ್ ಹೇಗಾದರೂ ಮಾಡಿ ಅವರನ್ನು ಸೋಲಿಸಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆಂಬ ಮಾತು ಕೇಳಿಬರುತ್ತಿದೆ. ಶ್ರೀನಿವಾಸಪುರದಲ್ಲಿ ಬ್ರಾಹ್ಮಣ ಮತಗಳು ತೀರಾ ಕಡಿಮೆ. ರಮೇಶ್ ಕುಮಾರ್ ತಮ್ಮ ಸ್ವಂತ ವರ್ಚಸ್ಸಿನ ಬಲದಿಂದ ಗೆದ್ದವರು ಎಂಬುದು ವಿಶೇಷ. ಹಾಗಾಗಿ ಜಾತಿರಾಜಕಾರಣದ ಚಿಂತೆ ಅವರಿಗೆ ಅಷ್ಟಾಗಿ ಇಲ್ಲ. ಅವರಿಗೆ ತೊಂದರೆ ತರಲಿರುವುದು ಪಕ್ಷದೊಳಗೇ ಇರುವ ಅಸಮಾಧಾನ.

  ಕಳೆದ ಲೋಕಸಭಾ ಚುನಾವಣೆಯಲ್ಲಿ ತನ್ನ ಸೋಲಿಗೆ ಕಾರಣವಾಗಿರುವುದು ರಮೇಶ್ ಕುಮಾರ್ ಎಂಬ ಸಿಟ್ಟಿರುವ ಕಾಂಗ್ರೆಸ್ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ಅವರು ರಮೇಶ್ ಕುಮಾರ್ ವಿರುದ್ಧವಾಗಿದ್ದಾರೆ. 2018ರ ವಿಧಾನಸಭೆ ಚುನಾವ ಣೆಯಲ್ಲಿಯೂ ರಮೇಶ್ ಕುಮಾರ್ ಅವರು ಮುನಿಯಪ್ಪ ವಿರೋಧವನ್ನು ಎದುರಿಸಬೇಕಾಯಿತಾದರೂ ಗೆದ್ದಿದ್ದರು. ಈ ಸಲವೂ ಆ ವಿರೋಧ ಮುಂದುವರಿದಿದೆ.

ವೀಕ್ಷಿಸಿ: C T Ravi ಗೆ ಮುಳ್ಳಾಗಿ ಕಾಡಲಿವೆಯೆ ಹಲವರ ಅಸಮಾಧಾನ ? | THE BIG FIGHT 

ನೆಲೆಯಿರದ ಬಿಜೆಪಿ ಆಟವೇನು?

  ಬಿಜೆಪಿಗೆ ಇಲ್ಲಿ ನೆಲೆಯಿಲ್ಲವಾದರೂ, ಅದು ಕಣಕ್ಕಿಳಿಸುವ ಅಭ್ಯರ್ಥಿ ಒಂದಿಷ್ಟು ಮತಗಳನ್ನು ಒಡೆಯುವ ಕೆಲಸವನ್ನಂತೂ ಮಾಡುತ್ತಾರೆ. ಇದಲ್ಲದೆ ಬಿಜೆಪಿ ಈ ಸಲ ಜೆಡಿಎಸ್ ಅಭ್ಯರ್ಥಿ ಜೊತೆ ಕೈಜೋಡಿಸುವ ಮೂಲಕ ರಮೇಶ್ ಕುಮಾರ್ ರನ್ನು ಮಣಿಸುವ ಲೆಕ್ಕಾಚಾರದಲ್ಲಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿಗೆ ಪಕ್ಷಾಂತರವಾಗುವ ವೇಳೆ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ತೊಂದರೆ ಕೊಟ್ಟಿದ್ದರೆಂಬ ಸಿಟ್ಟಿನಲ್ಲಿರುವ ಸುಧಾಕರ್ ಕೂಡ ಇದಕ್ಕಾಗಿಯೇ ಕಾದಿದ್ದಾರೆ. ಡಮ್ಮಿ ಅಭ್ಯರ್ಥಿಯೊಬ್ಬರನ್ನು ಬಿಜೆಪಿಯಿಂದ ನಿಲ್ಲಿಸಿ, ವೆಂಕಟಶಿವಾರೆಡ್ಡಿಯವರನ್ನು ಬೆಂಬಲಿಸುವುದಕ್ಕೆ ತಯಾರಿ ನಡೆದಿದೆ ಎನ್ನಲಾಗುತ್ತಿದೆ.

2023ರ ಚುನಾವಣಾ ಕಣದಲ್ಲಿ ರಮೇಶ್ ಕುಮಾರ್ ಕಾಂಗೆಸ್‌ನಿಂದ ಮತ್ತು ವೆಂಕಟಶಿವಾರೆಡ್ಡಿ ಜೆಡಿಎಸ್‌ನಿಂದ ಕಣಕ್ಕಿಳಿಯುವುದರ ಜೊತೆಗೆ, ಬಿಜೆಪಿಯಿಂದ ಡಾ.ವೇಣುಗೋಪಾಲ್ ಅಥವಾ ಎಸ್.ಎಲ್.ಎನ್. ಮಂಜುನಾಥ್ ಹಾಗೂ ಆಮ್ ಆದ್ಮಿ ಪಕ್ಷದಿಂದ ಡಾ.ವೈ.ವಿ. ವೆಂಕಟಾಚಲಪತಿ ಮತ್ತು ಪಕ್ಷೇತರರಾಗಿ ಗುಂಜೂರು ಶ್ರೀನಿವಾಸರೆಡ್ಡಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ವೆಂಕಟಾಚಲಪತಿ ಒಕ್ಕಲಿಗ ಸಮುದಾಯದವರಾಗಿದ್ದು, 25 ವರ್ಷಗಳಿಂದ ವೈದ್ಯಕೀಯ ಸೇವೆ ಮೂಲಕವೇ ಕ್ಷೇತ್ರದಲ್ಲಿ ಮನ್ನಣೆ ಗಳಿಸಿದವರಾಗಿದ್ದಾರೆ. ಆದರೆ ಅವರಿಗಿರುವ ಈ ಜನಮನ್ನಣೆ ಚುನಾವಣೆಯಲ್ಲಿ ಹೇಗೆ ಕೆಲಸ ಮಾಡಲಿದೆ ಎಂಬುದನ್ನು ನೋಡಬೇಕು. ವೆಂಕಟಾಚಲಪತಿ ಮತ್ತು ಗುಂಜೂರು ಶ್ರೀನಿವಾಸರೆಡ್ಡಿ ಉಮೇದುವಾರಿಕೆ ಯಾರ ಮತಗಳಿಗೆ ಹೊಡೆತ ಕೊಡಲಿದೆ ಎಂಬುದನ್ನು ಕೂಡ ಹೇಳಲಿಕ್ಕಾಗದು.

 ಹೀಗೆ ಕಾಂಗ್ರೆಸ್ ಒಳಗಿನ ಅತೃಪ್ತಿ, ಅಸಮಾಧಾನಗಳು, ಸತತ ಸೋಲಿನ ಸೇಡು ತೀರಿಸಿಕೊಳ್ಳಲು ಶತಾಯ ಗತಾಯ ಯತ್ನದಲ್ಲಿರುವ ವೆಂಕಟಶಿವಾರೆಡ್ಡಿಯವರೊಡನೆ ರಮೇಶ್ ಕುಮಾರ್ ಅವರ ಶತ್ರುಗಳೆಲ್ಲ ಸೇರಿಕೊಳ್ಳುವುದು ರಮೇಶ್ ಕುಮಾರ್ ಗೆಲುವಿಗೆ ಅಡ್ಡಗಾಲಾದರೆ ಅಚ್ಚರಿಯಿಲ್ಲ. ಹಾಗೆಂದು ವೆಂಕಟಶಿವಾರೆಡ್ಡಿಯವರ ಪಾಲಿಗೂ ಗೆಲುವು ಸುಲಭದ ದಾರಿಯಲ್ಲಿ ದಕ್ಕುವ ಸಾಧ್ಯತೆಯೇನಿಲ್ಲ. ಸೇಡು ಗೆಲ್ಲುವುದೊ, ಜಾತಿಬಲ ಗೆಲ್ಲುವುದೊ, ವರ್ಚಸ್ಸು ಮಾತ್ರವೇ ಗೆಲ್ಲುವುದೋ ಕಾದು ನೋಡಬೇಕಿದೆ.

Full View