ಕೇಸರಿ ಶಾಲು, ದತ್ತಪೀಠದ ಹೋರಾಟದಿಂದ ಅನ್ನ ಸಿಗುವುದಿಲ್ಲ: ಶಾಸಕ ಟಿ.ಡಿ.ರಾಜೇಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್

Update: 2023-01-24 05:56 GMT

ಚಿಕ್ಕಮಗಳೂರು: "ಅಯೋಧ್ಯೆ ಹೋರಾಟದಲ್ಲಿ ಲಕ್ಷಾಂತರ ಜನರನ್ನು ಬಲಿ ಕೊಟ್ಟರು, ಬಾಬ್ರಿ ಮಸೀದಿ ಕೆಡವಲು ಹೋಗಿ ಲಕ್ಷಾಂತರ ಜನರು ಬಲಿಯಾದರು. ನಾನು ಬೈಯುತ್ತೇನೆ... ಜನರನ್ನು ಕರೆದುಕೊಂಡು ಹೋಗುವವರು ಮನೆಹಾಳರು...” ಎಂದು ಬಿಜೆಪಿ ಹಾಗೂ ಸಂಘಪರಿವಾರವನ್ನು ಟೀಕಿಸಿರುವ ಕಾಂಗ್ರೆಸ್ ಮುಖಂಡ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ.

"ಅವರು ಮನೆ ಹಾಳರು.. ರೆಕಾರ್ಡ್ ಮಾಡಿಕೊಳ್ಳಬೇಡಿ.. ಜನರಿಗೆ ದತ್ತಮಾಲೆ ಹಾಕಿಸಿ, ಕುಂಕುಮವನ್ನು ಹಾಕಿ ಕರೆದುಕೊಂಡು ಹೋಗುತ್ತಾರೆ. ಕೇಸರಿ ಶಾಲು, ಕುಂಕುಮ ಹಾಕಿಕೊಂಡು ದತ್ತಮಾಲೆ ಹಾಕಿದರೆ ಹೊಟ್ಟೆ ತುಂಬುವುದಿಲ್ಲ. ದತ್ತಪೀಠದ ಹೋರಾಟದಿಂದ ಅನ್ನ ಸಿಗುವುದಿಲ್ಲ. ದತ್ತಪೀಠ ಸೌಹಾರ್ದದ ಕೇಂದ್ರ, ಎಲ್ಲ ಧರ್ಮದವರೂ ಅಲ್ಲಿ ಪೂಜೆ ಮಾಡಬಹುದು. ಅದನ್ನು ಒಂದು ಧರ್ಮದ್ದೆಂದು ಶಾಂತಿಭಂಗ ಮಾಡಲು‌ ಅಮಾಯಕರನ್ನು ಬಳಸಿಕೊಳ್ಳುತ್ತಾರೆಂದು ಬಿಜೆಪಿ ಹಾಗೂ ಸಂಘಪರಿವಾರವನ್ನು ಟೀಕಿಸಿರುವ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ.

ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್ ಆದ ಬೆನ್ನಲ್ಲೇ ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಬಿಜೆಪಿ ವತಿಯಿಂದ ಜಿಲ್ಲಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು, ಟಿ.ಡಿ.ರಾಜೇಗೌಡ ಬಹಿರಂಗ ಕ್ಷಮೆಯಾಚನೆಗೆ ಒತ್ತಾಯಿದೆ.

Similar News