×
Ad

ಸಿಎಂ ಬೊಮ್ಮಾಯಿ ಕಾರ್ಯಕ್ರಮದ ಸ್ವಾಗತ ಕಮಾನಿನಲ್ಲಿ PSI ಹಗರಣದ ಆರೋಪಿಗಳ ಚಿತ್ರ!

ಬಿಜೆಪಿ ಟಿಕೆಟ್ ಖಚಿತ ಎಂದ ಕಾಂಗ್ರೆಸ್

Update: 2023-01-24 17:07 IST

ಬೆಂಗಳೂರು, ಜ.24: ಕಲಬುರಗಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸುವ ಕಾರ್ಯಕ್ರಮ ಒಂದಕ್ಕೆ ಸ್ವಾಗತಕೋರಿ ಹಾಕಲಾಗಿದ್ದ ಕಮಾನಿನಲ್ಲಿ ಪಿಎಸ್‌ಐ ಹಗರಣದ ಪ್ರಮುಖ ಆರೋಪಿ ರುದ್ರಗೌಡ ಪಾಟಿಲ್ ಹಾಗೂ  ಮತ್ತೋರ್ವ ಆರೋಪಿ ಆತನ ಸಹೋದರ ಮಹಾಂತೇಶ್ ಪಾಟೀಲ್ ಚಿತ್ರ ಕಾಣಿಸಿಕೊಂಡಿದ್ದು, ಸ್ವಾಗತ ಕಮಾನಿನ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, 'PSI ಹಗರಣದ ಆರೋಪಿ ಆರ್.ಡಿ ಪಾಟೀಲ್ ಸಿಎಂ ಸ್ವಾಗತಿಸುವ ಫ್ಲೆಕ್ಸ್ ಹಾಕಿದ್ದಾನೆ. ಈ ಮೂಲಕ ಆತನಿಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶ್ರೀರಕ್ಷೆ ಇದೆ ಎನ್ನುವುದು ಸ್ಪಷ್ಟವಾಗಿದೆ. ಚುನಾವಣೆಗೂ ಸ್ಪರ್ದಿಸುತ್ತಾನಂತೆ, ಬಿಜೆಪಿ ಟಿಕೆಟ್ ನೀಡುವುದು ಖಚಿತವಿರಬಹುದು! ಆತ ಬಿಜೆಪಿಗರ ಹೆಸರು ಬಾಯಿ ಬಿಡದಿರುವುದಕ್ಕೆ 'ಟಿಕೆಟ್' ಉಡುಗೊರೆಯೇ?' ಎಂದು ಪ್ರಶ್ನೆ ಮಾಡಿದೆ. 

ಇಂದು (ಮಂಗಳವಾರ) ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲ್ ಗಾಣಗಾಪುರ್ ನಲ್ಲಿ ದಿ. ವಿಠ್ಠಲ ಹೇರೂರ್ ಕಂಚಿನ ಪ್ರತಿಮೆ ಆನಾವರಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸಿದ್ದಾರೆ. 

► ನ್ಯಾಯಾಲಯಕ್ಕೆ ಶರಣಾದ ಆರೋಪಿ:  

ಇನ್ನು ಸಿಐಡಿ ಅಧಿಕಾರಿಗಳ ದಾಳಿ ವೇಳೆ ಮನೆಯಿಂದ ಪರಾರಿಯಾಗಿದ್ದ  ಆರೋಪಿ ಆರ್​ಡಿ ಪಾಟೀಲ್ ಸೋಮವಾರ ಕಲಬುರಗಿ ಐದನೇ ಹೆಚ್ಚುವರಿ ಮತ್ತು ಜಿಎಂಎಫ್ ಸಿ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಆತನನ್ನು ಫೆ.6 ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಕಲಬುರಗಿ 5ನೇ ಜೆ.ಎಂ.ಎಫ್.ಸಿ ನ್ಯಾಯಾಲಯವು ಆದೇಶಿಸಿದೆ.

ವಿಡಿಯೊ ಹರಿಬಿಟ್ಟಿದ್ದ ಆರೋಪಿ: 'ಮತ್ತೊಂದೆಡೆ ರಾಜಕೀಯ ಕುತಂತ್ರ ಮಾಡಿ ಪಿಎಸ್ಸೈ ನೇಮಕಾತಿ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ. ಕೆಲ ಸಿಐಡಿ ಅಧಿಕಾರಿಗಳು ರಾಜಕೀಯ ಮುಖಂಡರ ಕೈಗೊಂಬೆಯಾಗಿ, ನನ್ನ ಮೇಲೆ ಕುತಂತ್ರ ಹೆಣೆದಿದ್ದಾರೆ. ಅಫಜಲಪುರ ಕ್ಷೇತ್ರದ ಜನರು ಬಯಸಿದರೆ, ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವೆ' ಎಂದು ಈತ  ನ್ಯಾಯಾಲಯಕ್ಕೆ ಶರಣಾಗುವುದಕ್ಕೂ ಮುನ್ನ ವಿಡಿಯೊವೊಂದನ್ನು ಆಜ್ಞಾತ ಸ್ಥಳದಿಂದ ಬಿಡುಗಡೆ ಮಾಡಿದ್ದ. 

Similar News