ಮದ್ದೂರು: ತಾಲೂಕು ಕಚೇರಿಯಲ್ಲೇ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ

ಆರೋಪಿಗೆ ಸಾರ್ವಜನಿಕರಿಂದ ಥಳಿತ

Update: 2023-01-24 16:40 GMT

ಮಂಡ್ಯ, ಜ.24: ವ್ಯಕ್ತಿಯೊಬ್ಬರ ಮೇಲೆ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹಾಡಹಗಲೇ ಮದ್ದೂರು ಪಟ್ಟಣದ ತಹಶೀಲ್ದಾರ್ ಕಚೇರಿ ಕಟ್ಟಡದಲ್ಲಿ ನಡೆದಿರುವ ಬಗ್ಗೆ ಮಗಳವಾರ ವರದಿಯಾಗಿದೆ. 

ಮದ್ದೂರು ತಾಲೂಕು ಮರಳಿಗ ಗ್ರಾಮದ ಚನ್ನರಾಜು(45) ಅಲಿಯಾಸ್ ಚನ್ನೇಶ ಅಲಿಯಾಸ್ ಚಾಟಿ ಭೀಕರ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಅದೇ ಗ್ರಾಮದ ನಂದನ್ ಎಂಬಾತ ಈ ಕೃತ್ಯ ಎಸಗಿದ್ದಾನೆ.

ಜಮೀನು ವಿವಾದ ಸೇರಿದಂತೆ ಇತರೆ ವಿಷಯಗಳಲ್ಲಿ ಚನ್ನರಾಜು ಮತ್ತು ನಂದನ್ ಕುಟುಂಬಗಳ ನಡುವೆ ಹಳೇದ್ವೇಷ ಇದ್ದು, ಈ ಹಿನ್ನೆಲೆಯಲ್ಲಿ ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ.

ಚನ್ನರಾಜು ಮತ್ತು ನಂದನ್ ಎದುರು ಬದುರು ಮನೆಯವರು. ಇವರ ನಡುವೆ ಜಮೀನು ವ್ಯಾಜ್ಯವಿದ್ದು, ಇತ್ತೀಚೆಗೆ ಮದ್ದೂರು ನ್ಯಾಯಾಲಯದಲ್ಲಿ ತೀರ್ಪು ಚನ್ನರಾಜು ಪರವಾಗಿ ಬಂದಿತ್ತು ಎನ್ನಲಾಗಿದೆ. ಇದರಿಂದ ಕುಪಿತಗೊಂಡಿದ್ದ ನಂದನ್ ಸೇಡಿಗಾಗಿ ಕಾಯುತ್ತಿದ್ದನೆಂದು ತಿಳಿದು ಬಂದಿದ್ದು, ಇಂದು ಚನ್ನರಾಜು ದಂಪತಿ ಕಾರ್ಯನಿಮಿತ್ತ ಮದ್ದೂರು ತಹಶೀಲ್ದಾರ್ ಕಚೇರಿಗೆ ಬಂದಿದ್ದ ಸಮಯದಲ್ಲಿ ಈ ಕೃತ್ಯ ನಡೆದಿದೆ.

ವಿಡಿಯೋ  ವೈರಲ್: ಮಂಗಳವಾರ ಸಂಜೆ 4:00 ಗಂಟೆ ಸಮಯದಲ್ಲಿ ಕಚೇರಿ ಕಟ್ಟಡದ ಮೇಲಂತಿಸ್ತಿನಲ್ಲಿದ್ದ ಚನ್ನರಾಜು ಮೇಲೆ ನಂದನ್ ಕುಡುಗೋಲಿನಿಂದ ಏಕಾಏಕಿ ಹಲ್ಲೆ ನಡೆಸಿದ್ದಾನೆ. ತಪ್ಪಿಸಿಕೊಳ್ಳಲು ಕೆಳಗೆ ಓಡಿ ಬಂದ ನಂತರವೂ ನಂದನ್, ಚನ್ನರಾಜು ಮೇಲೆ ಪದೇ ಪದೇ ಹಲ್ಲೆ ನಡೆಸಿರುವುದು ವಿಡೀಯೋದಲ್ಲಿ ಸೆರೆಯಾಗಿದೆ.

ಈ ಸಂದರ್ಭ ನೆರೆದಿದ್ದ ಜನರು ಆರೋಪಿ ನಂದನ್ ಗೆ ಥಳಿಸಿದ್ದಾರೆನ್ನಲಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನೂ ಸ್ಥಳೀಯ ತಾಲೂಕು ಆಸ್ಪತ್ರೆಗೆ ಸಾಗಿಸಿದ್ದು, ಚನ್ನರಾಜು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಚನ್ನರಾಜು ತೀವ್ರ ರಕ್ತಸ್ರಾವವಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆಂದು ತಿಳಿದು ಬಂದಿದೆ.  ಮದ್ದೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


“ಹಲ್ಲೆಗೊಳಗಾದ ಚನ್ನರಾಜು ಮೂರುವರೆ ಎಕರೆ ಜಮೀನನ್ನು ತನ್ನ ಹೆಂಡತಿ, ಮಗಳ ಹೆಸರಿಗೆ ಬರೆದಿದ್ದು, ಇಂದು ಅದನ್ನು ಖಾತೆ ಮಾಡಿಸಿಕೊಳ್ಳಲು ತಾಲೂಕು ಕಚೇರಿಗೆ ಬಂದಿರುತ್ತಾನೆ. ಈ ಸಂಬಂಧ ಆಕ್ಷೇಪಣೆ ಸಲ್ಲಿಸಿದ್ದ  ಆರೋಪಿ ನಂದನ್ ಕೂಡ ಬಂದಿದ್ದು, ವಿಚಾರಣೆ ನಡೆದ ನಂತರ, ಕುಡುಗೋಲಿನಿಂದ ತಾಲೂಕು ಕಚೇರಿ ಆವರಣದಲ್ಲೇ ಚನ್ನರಾಜು ಮೇಲೆ ಹಲ್ಲೆ ಮಾಡಿದ್ದಾನೆ. ಜನರು ಆತನ ಕೈಯಿಂದ ಕುಡುಗೋಲು ಕಿತ್ತುಕೊಂಡಿದ್ದಾರೆ. ಇದೇ ವೇಳೆ ಆತನಿಗೂ ಗಾಯವಾಗಿದೆ. ಚನ್ನರಾಜುವನ್ನು ಜಿಲ್ಲಾಸ್ಪತ್ರೆಗೆ ಮತ್ತು ಆರೋಪಿ ನಂದನ್‍ನನ್ನು ಮದ್ದೂರು ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ. ಇದು ಪ್ರಮುಖವಾಗಿ ಜಮೀನು ವಿವಾದದಿಂದ ಆಗಿದೆ ಎಂದು ಸದ್ಯಕ್ಕೆ ಮಾಹಿತಿ ಇದೆ. ತನಿಖೆಯಿಂದ ಹೆಚ್ಚಿನ ವಿಚಾರ ಹೊರಬರಲಿದೆ.”

- ಎನ್.ಯತೀಶ್, ಎಸ್ಪಿ ಮಂಡ್ಯ.


 

Similar News