ಸಚಿವ ಅಶೋಕ್ ಕ್ಷೇತ್ರದಲ್ಲಿ ಅವ್ಯವಹಾರ: ರಮೇಶ್ ಬಾಬು ಆರೋಪ

Update: 2023-01-24 14:48 GMT

ಬೆಂಗಳೂರು, ಜ.24: ಕಂದಾಯ ಸಚಿವ ಆರ್.ಅಶೋಕ್ ಪ್ರತಿನಿಧಿಸುತ್ತಿರುವ ಪದ್ಮನಾಭ ನಗರ ಕ್ಷೇತ್ರದಲ್ಲಿ ಬಿಬಿಎಂಪಿ ವತಿಯಿಂದ ಕೈಗೊಳ್ಳುತ್ತಿರುವ ಕಾಮಗಾರಿಗಳಲ್ಲಿ ವ್ಯಾಪಕ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಚಿವರು ಲೋಕಾಯುಕ್ತ ತನಿಖೆಗೆ ಆದೇಶಿಸಲಿ ಎಂದು ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಆಗ್ರಹಿಸಿದ್ದಾರೆ.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿ 400ಕೋಟಿ ರೂ.ಗೂ ಹೆಚ್ಚು ಕಾಮಗಾರಿ ನಡೆದಿವೆ. ಒಬ್ಬ ವ್ಯಕ್ತಿ ಪ್ರಭಾವಕ್ಕೆ ಒಳಗಾಗಿ ಎಲ್ಲ ಕಾಮಗಾರಿ ಅಕ್ರಮವಾಗಿ ಹಂಚಿಕೆಯಾಗಿದೆ ಎಂದು ದೂರಿದರು.

ಒಂದೇ ಸಮುದಾಯ ಭವನ ದುರಸ್ತಿಗೆ 8 ಬಾರಿ ಖರ್ಚು ಮಾಡಿದ್ದಾರೆ. ಯಡಿಯೂರು ಮೈದಾನದಲ್ಲಿ ನಾಲ್ಕು ಕಾಮಗಾರಿ ಹೆಸರಲ್ಲಿ 4 ಕೋಟಿ ರೂ.ವೆಚ್ಚವಾಗಿವೆ. ಬಿಬಿಎಂಪಿ ಕಚೇರಿ 8 ಬಾರಿ ಕಾಮಗಾರಿ ಮಾಡಿ 1.22 ಕೋಟಿ ರೂ.ವೆಚ್ಚ ಮಾಡಿದ್ದಾರೆ. ಸೌಥ್ ಎಂಡ್ ಗಡಿಯಾರ ಕಾಮಗಾರಿಗೆ 3.21 ಕೋಟಿ ರೂ.ಗಳಿಗೆ 10 ಬಾರಿ ಬಿಲ್ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಯಡಿಯೂರು ಮಾರುಕಟ್ಟೆಯಲ್ಲಿ 5ವರ್ಷಗಳಲ್ಲಿ 10 ಬಾರಿ ಕಾಮಗಾರಿ ಮಾಡಿ 5ಕೋಟಿ ರೂ.ಖರ್ಚು ಮಾಡಿದ್ದಾರೆ. ಈ ರೀತಿ 500ಕೋಟಿ ರೂ.ಕಾಮಗಾರಿ ಒಂದು ವಾರ್ಡ್‍ನಲ್ಲಿ ನಡೆದಿದೆ. ಉಳಿದ ವಾರ್ಡ್‍ಗಳ ಮಾಹಿತಿಯನ್ನು ಕೇಳಿದ್ದೇವೆ. ಅಶೋಕ್ ಪದ್ಮನಾಭನಗರ, ಬೆಂಗಳೂರು, ರಾಜ್ಯದ ಹಿತದೃಷ್ಟಿಯಿಂದ ನಿಮ್ಮ ಕ್ಷೇತ್ರದ ಕಾಮಗಾರಿ ಬಗ್ಗೆ ಲೋಕಾಯುಕ್ತ ತನಿಖೆಗೆ ಆದೇಶ ನೀಡಬೇಕು ಎಂದು ರಮೇಶ್ ಬಾಬು ಆಗ್ರಹಿಸಿದರು.

ಒಂದು ವಾರದ ಹಿಂದೆ ಚಿತ್ರದುರ್ಗದ ಚಳ್ಳಕೆರೆಯಲ್ಲಿ ಅಧಿಕಾರಿಗಳ ಸಭೆಯಲ್ಲಿ ತಹಶೀಲ್ದಾರ್ ಕಾಂಗ್ರೆಸ್ ಶಾಸಕ ರಘುಮೂರ್ತಿ ಮೇಲೆ ನಿಂದನೆ ಮಾಡಿ ಸಭೆ ಬಹಿಷ್ಕರಿಸಿ ಹೋಗಿದ್ದಾರೆ. ಆ ತಹಶೀಲ್ದಾರ್ ಮೇಲೆ ಅಕ್ರಮ ಸಂಬಂಧ ದಾಳಿ ನಡೆದಿದೆ. ಅವರ ಮೇಲೆ ಆರೋಪವಿದ್ದರೂ ಈ ಸರಕಾರ ಅವರಿಗೆ ಮತ್ತೆ ಅಧಿಕಾರ ನೀಡಿದ್ದು ಯಾಕೆ? ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ಸರಕಾರ ಬಂದ ನಂತರ ಕ್ಲಾಸ್ 1 ಹುದ್ದೆ ತುಂಬುತ್ತಿಲ್ಲ. ತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿರುವವರಲ್ಲಿ ಶೇ.50ರಷ್ಟು ಭಡ್ತಿ ಮೂಲಕ ಬಂದಿದ್ದರೆ, ಉಳಿದವರು ಆರೋಪ ಹೊತ್ತಿರುವವರನ್ನು ಕಂದಾಯ ಇಲಾಖೆ ಮೂಲಕ ತಹಶೀಲ್ದಾರ್ ಹುದ್ದೆ ನೀಡಿ ದಂಧೆ ಮಾಡಲಾಗುತ್ತಿದೆ. ಚಳ್ಳಕೆರೆ ತಹಶೀಲ್ದಾರ್‍ರನ್ನು ಅಮಾನತು ಮಾಡಬೇಕು ಎಂದು ರಮೇಶ್ ಬಾಬು ಒತ್ತಾಯಿಸಿದರು. 

ಬಿಜೆಪಿಯಲ್ಲಿ ಗುಂಪುಗಾರಿಕೆ ಹೆಚ್ಚಾಗಿದ್ದು, ಯಡಿಯೂರಪ್ಪ, ಬೊಮ್ಮಾಯಿ ನಾನೊಂದು ತೀರಾ ನೀನೊಂದು ತೀರದಂತಾಗಿದ್ದಾರೆ. ದಿಲ್ಲಿಯ ಕಾರ್ಯಕಾರಣಿ ಸಭೆಯಲ್ಲಿ ಯಡಿಯೂರಪ್ಪ ಬೆಂಬಲಿಗ 30 ಶಾಸಕರು ಸಹಿ ಮಾಡಿ ಬೊಮ್ಮಾಯಿ ನಾಯಕತ್ವ ಬದಲಾಗಬೇಕು ಎಂದು ಪತ್ರ ಬರೆದಿದ್ದಾರೆ. ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ಮುಗಿಲು ಮುಟ್ಟಿದೆ ಎಂದು ಅವರು ಹೇಳಿದರು.

ಇದೇ ಕಾರಣಕ್ಕೆ ಅಮಿತ್ ಶಾ ಮಂಡ್ಯಕ್ಕೆ ಬಂದಾಗ ಯಡಿಯೂರಪ್ಪ ತಪ್ಪಿಸಿಕೊಂಡರು.  ನಳೀನ್ ಕುಮಾರ್, ಸಿ.ಟಿ.ರವಿ ಅವರದ್ದು ಒಂದು ತಂಡ, ಯತ್ನಾಳ್ ಅವರದ್ದು ಮತ್ತೊಂದು ತಂಡ, ಬೊಮ್ಮಾಯಿ, ಯಡಿಯೂರಪ್ಪನವರದ್ದು ಮತ್ತೊಂದು ತಂಡವಾಗಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‍ಗೆ ನಾಯಕರ ಜತೆ ವ್ಯವಹಾರ ಮಾಡಲು ಸಮಯ ಸಾಲುತ್ತಿಲ್ಲ ಎಂದು ರಮೇಶ್ ಬಾಬು ಟೀಕಿಸಿದರು.

Similar News