×
Ad

ತಿಪಟೂರು: ಸ್ವಚ್ಛಗೊಳಿಸಲು ಪೆಟ್ರೋಲ್ ಟ್ಯಾಂಕ್ ಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಮೃತ್ಯು

Update: 2023-01-24 20:32 IST

ತಿಪಟೂರು.ಜ.24: ಪೆಟ್ರೋಲ್ ಟ್ಯಾಂಕ್ ಸ್ವಚ್ಚಗೊಳಿಸಲು ಟ್ಯಾಂಕ್‍ನಲ್ಲಿ ಇಳಿದ ಇಬ್ಬರು ಕಾರ್ಮಿಕರು ಉಸಿರುಕಟ್ಟಿ ಸಾವನ್ನಪ್ಪಿರುವ ಘಟನೆ ನಗರದ ಹಿಂಡಿಸ್ಕರೆ ಗೇಟ್ ಬಳಿ ಇರುವ ಪೆಟ್ರೋಲ್ ಬಂಕ್‍ನಲ್ಲಿ ಮಂಗಳವಾರ ಸಂಜೆ ವರದಿಯಾಗಿದೆ.

ಮೃತ ವ್ಯಕ್ತಿಗಳನ್ನು ಅರಸೀಕೆರೆ ತಾಲೂಕು ಹಾರನಹಳ್ಳಿ ವಾಸಿ ನಾಗರಾಜು (55, ತಮಿಳುನಾಡಿದ ವೆಲ್ಲೂರು ಮೂಲದ ರವಿ ಎಂದು ತಿಳಿದು ಬಂದಿದೆ.

ಬಿಜೆಪಿ ಮುಖಂಡ ಮಾಜಿ ನಗರಸಭಾ ಸದಸ್ಯ ಪ್ರಸನ್ನಕುಮಾರ್ ರವರಿಗೆ ಸೇರಿರುವ ಪೆಟ್ರೋಲ್ ಬಂಕ್‍ನಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಪೆಟ್ರೋಲ್ ಬಂಕ್‍ನಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳದೆ,ಟ್ಯಾಂಕ್ ಸ್ವಚ್ಚಗೊಳಿಸಲು ಇಳಿಸಿದ ಕಾರಣ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. 

ಇದನ್ನೂ ಓದಿ: ಮಲೆನಾಡಿನಲ್ಲಿ ಮತ್ತೆ ಮಂಗನ ಕಾಯಿಲೆ ಪ್ರಕರಣ ಪತ್ತೆ

ಗಾರೆ ಕೆಲಸ, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ನಾಗರಾಜು ಮೂಲ ಅರಸೀಕೆರೆ ತಾಲೂಕು ಹಾರನಹಳ್ಳಿಯವನಾಗಿದ್ದು, ತನ್ನ ಪತ್ನಿಯ ಮನೆಯಾಗಿದ್ದ ಶೆಟ್ಟಿಕೆರೆಯಲ್ಲಿ ವಾಸವಾಗಿದ್ದು, ಕೂಲಿ ಕೆಲಸಕ್ಕೆಂದು ಬಂದ ವೇಳೆ ಟ್ಯಾಂಕ್ ಸ್ವಚ್ಚಗೊಳಿಸಲು ಯಾವುದೇ ಮುಂಜಾಗ್ರತಾ ಪರಿಕರಗಳನ್ನು ಬಳಸದೆ ಇಳಿದ ಕಾರಣ ಉಸಿರುಗಟ್ಟಿ ಸಾವನಪ್ಪಿದ್ದಾನೆ ಎನ್ನಲಾಗಿದೆ. 

ಪೆಟ್ರೋಲ್ ಟ್ಯಾಂಕ್ ಕ್ಲೀನ್ ಮಾಡಲು ಇಳಿದಿದ್ದ ನಾಗರಾಜು ಉಸಿರು ಗಟ್ಟಿ ಒದ್ದಾಡುತ್ತಿರುವುದನ್ನು ಗಮನಿಸಿದ ರವಿ ನಾಗರಾಜುವನ್ನು ರಕ್ಷಿಸಲು ಹೋಗಿ ತಾನೂ ಸಹ ಜೀವ ಕಳೆದುಕೊಂಡಿದ್ದಾರೆನ್ನಲಾಗಿದೆ.

ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಮೃತದೇಹಗಳನ್ನು ಪೆಟ್ರೋಲ್ ಟ್ಯಾಂಕಿನಿಂದ ಹೊರತೆಗೆದು ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ತಿಪಟೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News