‘ನೆಟೆ ರೋಗ’ದಿಂದ ತೊಗರಿ ಬೆಳೆ ನಷ್ಟ: ಹೆಕ್ಟೇರ್ ಗೆ 10 ಸಾವಿರ ರೂ.ಪರಿಹಾರ ಘೋಷಣೆ

Update: 2023-01-24 18:03 GMT

ಬೆಂಗಳೂರು, ಜ. 24: ಬೀದರ್, ಕಲಬುರಗಿ ಹಾಗೂಯಾದಗಿರಿ ಜಿಲ್ಲೆಯಲ್ಲಿ ನೆಟೆ ರೋಗದಿಂದ ತೊಗರಿ ಬೆಳೆಹಾನಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಪ್ರತಿ ಹೆಕ್ಟೇರ್ ಗೆ 10ಸಾವಿರ ರೂ.ನಂತೆ ಎನ್‍ಡಿಆರ್‍ಎಫ್/ಎಸ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ ಗರಿಷ್ಟ 2ಹೆಕ್ಟೇರ್‍ಗೆ ಸೀಮಿತಗೊಳಿಸಿ ಬೆಳೆ ನಷ್ಟಕ್ಕೆ ಒಳಗಾದ ರೈತರಿಗೆ ರಾಜ್ಯ ಸರಕಾರ ಪರಿಹಾರ ಘೋಷಿಸಿದೆ. 

ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಂಡಿದ್ದು, ನೆಟೆ ರೋಗದಿಂದ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಬೆಳೆ ಪರಿಹಾರ ಮೊತ್ತವು 223 ಕೋಟಿ ರೂ.ಗಳಷ್ಟು ಆಗಬಹುದು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಲಾಗಿದೆ.

ಬೀದರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಅಕಾಲಿಕ ಮಳೆ ಹಾಗೂ ತದನಂತರ ನವೆಂಬರ್ ತಿಂಗಳಿನಲ್ಲಿ ತಲೆದೋರಿದ ಶುಷ್ಕ ವಾತಾವರಣದಿಂದ ತೊಗರಿ ಬೆಳೆಯಲ್ಲಿ ಸಂಕೀರ್ಣ ನೆಟೆ ರೋಗ ಮೇಲಿನ ಮೂರು ಜಿಲ್ಲೆಗಳಲ್ಲಿ ಉಲ್ಬಣ ಗೊಂಡು ಬೆಳೆಹಾನಿಯಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ 1.98ಲಕ್ಷ ಹೆಕ್ಟೇರ್, ಬೀದರ ಜಿಲೆಯಲ್ಲಿ 0.145 ಲಕ್ಷ ಹೆಕ್ಟೇರ್ ಹಾಗೂ ಯಾದಗಿರಿ ಜಿಲ್ಲೆಯಲ್ಲಿ 0.1028 ಲಕ್ಷ ಹೆಕ್ಟೇರ್ ಒಟ್ಟಾರೆಯಾಗಿ 2.22 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ತೊಗರಿ ಬೆಳೆ ಸಂಕೀರ್ಣ ನೆಟೆ ರೋಗಕ್ಕೆ ಹಾನಿಯಾಗಿರುವುದು ವರದಿಯಾಗಿರುತ್ತದೆ.

ಹಾನಿಗೊಳಗಾದ ರೈತರ ನೆರೆವಿಗೆ ಧಾವಿಸಿದ ರಾಜ್ಯ ಸರಕಾರವು ‘ವಿಶೇಷ ಪ್ರಕರಣ’ ತೀರ್ಮಾನಿಸಿ ಪರಿಹಾರ ಘೋಷಿಸಿದೆ. ಆಮೂಲಕ ಸಂಕಷ್ಟಕ್ಕೆ ಒಳಗಾಗಿರುವ ತೊಗರಿ ಬೆಳೆಗಾರರ ನೆರವಿಗೆ ರಾಜ್ಯ ಸರಕಾರ ಧಾವಿಸಿದೆ. ಬೆಳೆ ಪರಿಹಾರಕ್ಕೆ ಆಗ್ರಹಿಸಿ ಕಲಬುರಗಿ ಜಿಲ್ಲೆಯಲ್ಲಿ ರೈತರು ಹೋರಾಟವನ್ನು ನಡೆಸಿದ್ದರು.

Similar News