ಪಕ್ಷದ ಟಿಕೆಟ್ ಇಲ್ಲದಿದ್ದರೆ ಸಂಘಟನೆಯ ಕೆಲಸ: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2023-01-24 16:37 GMT

ಬೆಂಗಳೂರು, ಜ.24: ಮುಂದಿನ ಚುನಾವಣೆಯಲ್ಲಿ ಪಕ್ಷ ಟಿಕೆಟ್ ನೀಡಿದರೆ ಮತ್ತೆ ಚುನಾವಣೆಗೆ ಸ್ಪರ್ಧಿಸುವೆ. ಇಲ್ಲದಿದ್ದರೆ ಸಂಘಟನೆಯ ಕೆಲಸ ಮಾಡುವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ನಗರದ ವಿಕಾಸಸೌಧದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರದಲ್ಲಿ ಪಕ್ಷದ ವರಿಷ್ಠರು ನಿರ್ಧಾರವನ್ನು ಪಾಲಿಸುವೆ ಎಂದು ತಿಳಿಸಿದರು.

ಐದು ಬಾರಿ ಚುನಾವಣೆಯಲ್ಲಿ ಸೋತಿದ್ದೇನೆ. ನಾಲ್ಕು ಬಾರಿ ಗೆದ್ದಿದ್ದೇನೆ. ಗೆದ್ದಾಗ ಹಿಗ್ಗಿಲ್ಲ, ಸೋತಾಗ ಕುಗ್ಗಿಲ್ಲ. ಪ್ರಾಮಾಣಿಕವಾಗಿ ಸಂಘಟನೆಯ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದ ಅವರು, ಪೊಲೀಸ್ ಇಲಾಖೆಗೆ ಯಾವುದೇ ಸರಕಾರ ಕೊಡದ ಆದ್ಯತೆಯನ್ನು ನಮ್ಮ ಸರಕಾರ ಕೊಟ್ಟಿದೆ ಎಂದು ಹೇಳಿದರು.

ಸ್ಯಾಂಟ್ರೊ ರವಿ ಪ್ರಕರಣದಲ್ಲಿ ತಮ್ಮ ಪಾತ್ರ ಏನೂ ಇಲ್ಲ. ಆತನಿಗೂ ತಮಗೂ ಯಾವುದೇ ಸಂಬಂಧವಿಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆದು ಎಲ್ಲ ಸತ್ಯ ಹೊರಬರಲಿ ಎಂದು ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

Similar News