ದತ್ತಪೀಠ, ದತ್ತಮಾಲೆ ಬಗ್ಗೆ ಹೇಳಿಕೆ ವಿಚಾರ: ವಿಷಾದ ವ್ಯಕ್ತಪಡಿಸಿದ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ
ಚಿಕ್ಕಮಗಳೂರು: ದತ್ತಪೀಠ ಮತ್ತು ದತ್ತಮಾಲೆಯ ಬಗ್ಗೆ ಹೇಳಿಕೆ ನೀಡಿದ್ದ ಶೃಂಗೇರಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ಇದೀಗ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, 'ನಾನು ಮಾತನಾಡಿದ್ದೇನೆ ಎಂಬ ಆಡಿಯೋ ರೆಕಾರ್ಡ್ ಒಂದನ್ನ ಮುಂದಿಟ್ಟುಕೊಂಡು ಕೆಲವರು ಗಲಾಟೆ ಮಾಡಿಸುವ ಚರ್ಚೆಗಳನ್ನು ಮಾಡುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ಕೊಟ್ಟು ಗೊಂದಲಗಳಿಗೆ ತೆರೆ ಎಳೆಯುವ ಉದ್ದೇಶದಿಂದ ಈ ವಿಡಿಯೋ ಬಿಡುಗಡೆ ಮಾಡುತ್ತಿದ್ದೇನೆ' ಎಂದು ಹೇಳಿದ್ದಾರೆ.
'ಭಾವನೆ ಮತ್ತು ಬದುಕಿನ ಪ್ರಶ್ನೆ ಬಂದಾಗ ನಾನು ನನ್ನ ಜನರಿಗೆ ಬದುಕಿನ ಕಾರಣದ ಬಗ್ಗೆ ಮುಖ್ಯ ಸ್ಥಾನವನ್ನ ಕೊಡಬೇಕು. ಅವರ ಭವಿಷ್ಯದ ಬಗ್ಗೆ ಕಾರ್ಯಕ್ರಮಗಳನ್ನ ಕೊಡ ಬೇಕು ಎಂಬ ಉದ್ದೇಶ. ಆ ಕಾರಣದಿಂದ ವಿದ್ಯೆ, ಉದ್ಯೋಗ, ಸಾಮರಸ್ಯದ ಜೀವನ ಬಿಟ್ಟು ಯುವಕರಿಗೆ ದ್ವೇಷದ ಭಾವನೆ ತುಂಬಿ ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಸ್ವಲ್ಪ ದಿನಗಳ ಹಿಂದೆ ನನ್ನ ಮತ ಕ್ಷೇತ್ರದ ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಲೇಜೊಂದರ ದಲಿತ ವಿದ್ಯಾರ್ಥಿಗೆ ಹಲ್ಲೆ ಮಾಡಿದ್ದರು. ಈ ಬಗ್ಗೆ ದೂರು ಕೂಡ ದಾಖಲಾಗಿರುತ್ತದೆ. ಹಲ್ಲೆ ವಿಷಯವಾಗಿ ತಿಳಿ ಹೇಳುವ ಕೆಲಸವನ್ನು ಮಾಡಿರುವ ಮೇಲ್ಜಾತಿಯ ಯುವಕನಿಗೂ ಹಲ್ಲೆ ಮಾಡುವ ಪ್ರಯತ್ನವನ್ನು ಮಾಡಲಾಗಿದೆ. ಇಂಥ ಘಟನೆಗಳು ದಿನ ನಿತ್ಯ ನನ್ನ ಕ್ಷೇತ್ರದಲ್ಲಿ ನಡೆಯುತ್ತಿರುವುದನ್ನು ನಾನು ಗಮನಿಸಿದ್ದೇನೆ. ಅಲ್ಲದೇ, ಅಭಿವೃದ್ಧಿ ಕೆಲಸಕ್ಕೆ ಕೂಡ ಅಡ್ಡಿ ಮಾಡುತ್ತಿದ್ದಾರೆ. ಹೀಗಾಗಿ ನಾನು ಆಕ್ರೋಶದಿಂದ ಮಾತನಾಡಿದ್ದೇನೆ'.
'ವಿಡಿಯೋದಲ್ಲಿ ಹಳ್ಳಿಗಳಲ್ಲಿ ರೂಡಿಯಿರುವ ಶಬ್ಧ ವನ್ನು ಬಳಸಿದ್ದೇನೆ. ಆ ಶಬ್ಧ ಬಳಕೆ ಯಾರ ಸಂಸ್ಕೃತಿಯೂ ಆಗಬಾರದು. ಆ ಶಬ್ಧ ಬಳಸಬಾರದಿತ್ತು, ವಿಷಾದ ವ್ಯಕ್ತಪಡಿಸುತ್ತೇನೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೇಸರಿ ಶಾಲು, ದತ್ತಪೀಠದ ಹೋರಾಟದಿಂದ ಅನ್ನ ಸಿಗುವುದಿಲ್ಲ: ಶಾಸಕ ಟಿ.ಡಿ.ರಾಜೇಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್