ಕೊಪ್ಪ | ಎಲೆಚುಕ್ಕಿ ರೋಗದಿಂದ ಅಡಿಕೆ ಫಸಲು ನಾಶ: ಸಾಲಬಾಧೆಯಿಂದ ರೈತ ಆತ್ಮಹತ್ಯೆ
ಚಿಕ್ಕಮಗಳೂರು, ಜ.25: ಹಳದಿ ಎಲೆ ಹಾಗೂ ಎಲೆಚುಕ್ಕಿ ರೋಗಕ್ಕೆ ಫಸಲು ನಾಶವಾಗಿ, ಸಾಲಬಾಧೆ ತಾಳಲಾರದೆ ಕೊಪ್ಪ ತಾಲೂಕು ಅಗಳಗಂಡಿ ಗ್ರಾಮದ ಕಕ್ಕದ್ದೆ ರವೀಂದ್ರ ಎಂಬ ರೈತ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎರಡು ದಿನಗಳ ಹಿಂದೆ ರವೀಂದ್ರ ವಿಷ ಸೇವಿಸಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಮೂರು ಬಾರಿ ಅಡಿಕೆ ಎಲೆ ಚುಕ್ಕಿ ರೋಗಕ್ಕೆ ಔಷಧಿ ಸಿಂಪಡಿಸಿದ್ದು, ಆದರೆ ರೋಗ ನಿಯಂತ್ರಣಕ್ಕೆ ಬಂದಿರಲಿಲ್ಲ. ರೋಗದಿಂದ ಅಡಿಕೆ ಮರಗಳು ಸಾಯುತ್ತಿದ್ದು, ಕ್ರಮೇಣ ಧರೆಗುರುಳುತ್ತಿವೆ, ತೀವ್ರವಾಗಿ ಹಬ್ಬುತ್ತಿರುವ ಎಲೆ ಚುಕ್ಕಿ ರೋಗದಿಂದ ಚಿಂತಾಕ್ರಾಂತರಾಗಿದ್ದರು. ಅಲ್ಲದೇ ಇವರು ಕೃಷಿಗಾಗಿ ಜಯಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜಯಪುರದಲ್ಲಿ 1.5 ಲಕ್ಷ ರೂ. ಹಾಗೂ ಖಾಸಗಿ ವ್ಯಕ್ತಿಯಿಂದ ಕೈ ಸಾಲ ಪಡೆದಿದ್ದರೆನ್ನಲಾಗಿದೆ. ಇವೆಲ್ಲದರಿಂದ ಬೇಸತ್ತು ರವೀಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.