ಸ್ಯಾಂಟ್ರೋ, ಫೈಟರ್, ಲೂಟಿ ರವಿಗಳಿಂದ ಬಿಜೆಪಿಯ ರೌಡಿ ಮೋರ್ಚಾ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಬಿ.ಕೆ ಹರಿಪ್ರಸಾದ್

Update: 2023-01-25 12:34 GMT

ಬೆಂಗಳೂರು: 'ನೂತನ ರೌಡಿ ಮೋರ್ಚಾದ ಶಾಖೆ ಉದ್ಘಾಟಿಸಿರುವ ಬಿಜೆಪಿಗೆ ರಾಜ್ಯಾಧ್ಯಕ್ಷ ಇಲ್ಲದೇ ಮತಿ ಭ್ರಮಣೆಯಾಗಿ ಕೋತ್ವಾಲನ ಜಪ ಶುರು ಮಾಡಿದ್ದಾರೆ. ಕನಸಿನಲ್ಲೂ ಕೊತ್ವಾಲ ಬಂದು ಕಾಡುತ್ತಿರುವುದರಿಂದ ಬ್ಲೇಡು, ಚಾಕು,ಚೂರಿ,ಕತ್ತಿಗಳೇ ಬಿಜೆಪಿ ನಾಯಕರ ನುಡಿಮುತ್ತುಗಳಾಗಿ ಉದುರುತ್ತಿದೆ' ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ. 

ಈ ಕುರಿತು #Criminals_bjp ಎಂಬ ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಗಳನ್ನು ಮಾಡಿರುವ  ಅವರು,  ''ಸ್ಯಾಂಟ್ರೋ ರವಿ,ಫೈಟರ್ ರವಿ, ಲೂಟಿ ರವಿ, ಬಾಟಲ್ ರವಿ ಗಳಿಂದ ಬಿಜೆಪಿಯ ರೌಡಿ ಮೋರ್ಚಾಗೆ ಕೊತ್ವಾಲನ ಇಲ್ಲದಿರುವಿಕೆಯಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಚಿಕ್ಕಮಗಳೂರಿನಲ್ಲಿ ಹೆಚ್ಚು ಬೆಳೆದ ಕೊತ್ವಾಲನ ನೆರಳು ತಾಗಿಸಿಕೊಂಡಿರುವ ಮಾನದಂಡದ ಮೇಲೆ ವಸೂಲಿಗಾರನಿಗೆ ಮೊದಲ ಆದ್ಯತೆ ಸಿಗುವ ಸಾಧ್ಯತೆ ಇದೆ'' ಎಂದು ಟೀಕಿಸಿದ್ಧಾರೆ. 

''ಭವಿಷ್ಯತ್ತಿನಲ್ಲಿ ಮಾಲೆಗಾಂವ್ ಬಾಂಬ್ ಸ್ಫೋಟದ ಸಂಸದೆಯಿಂದ ಭಯೋತ್ಪಾದಕರ ಮೋರ್ಚಾ ಸ್ಥಾಪಿಸುವ ಗುರಿಯೂ ಹೊಂದಿರುವಂತಿದೆ ಬಿಜೆಪಿ ಪಕ್ಷ. ಮಹಾತ್ಮಾ ಗಾಂಧಿಯನ್ನೇ ಕೊಂದ ದೇಶದ ಮೊಟ್ಟ ಮೊದಲ ಭಯೋತ್ಪಾದಕ ಗೋಡ್ಸೆಯ ಸಂತಾನರಿಂದ ಪಾಠ ಕಲಿಯಬೇಕಾದ ದುರ್ದೈವ ಬಂದಿಲ್ಲ'' ಎಂದು ತಿರುಗೇಟು ನೀಡಿದ್ದಾರೆ. 

''ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಪಕ್ಷದ ರೌಡಿ ಮೋರ್ಚಾ ಮತ್ತು ಭಯೋತ್ಪಾದಕರ ಮೋರ್ಚಾ ಹೆಚ್ಚು ಸಕ್ರಿಯವಾಗುತ್ತಿದೆ. ಬೀದಿ ಬೀದಿಗಳಲ್ಲಿ ಹೊಡಿ,ಬಡಿ,ಕಡಿ,ಮಾತುಗಳೇ ಮುನ್ನಲೆಗೆ ಬರುತ್ತಿವೆ ಹೊರತು ಅನ್ನ,ಅರಿವು,ಶಿಕ್ಷಣ,ಆರೋಗ್ಯ, ಅಭಿವೃದ್ಧಿಯ ಚರ್ಚೆಗಳಿಗೆ ಅವಕಾಶವೇ ಇಲ್ಲ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

''ಈ ಬಾರಿಯ ಚುನಾವಣೆಯಲ್ಲಿ ಯುವಕರಿಗೆ ಚಾಕು, ಚೂರಿ, ಬಂದೂಕು ತರಬೇತಿ ನೀಡುವ ಪಕ್ಷಕ್ಕೆ ಜನರು ಮತ ನೀಡಬೇಕಾ? ಅಥವಾ ಅದೇ ಮಕ್ಕಳ ಕೈಗೆ ಪೆನ್ನು ಪುಸ್ತಕ ನೀಡಿ ದೇಶದ ಭವಿಷ್ಯ ರೂಪಿಸುವ ಪ್ರಜೆಗಳನ್ನಾಗಿ ಮಾಡುವ ಪಕ್ಷಕ್ಕೆ ಮತ ನೀಡಬೇಕಾ? ಜನರೇ ತೀರ್ಮಾನಿಸಲಿ '' ಎಂದು ಬಿ.ಕೆ ಹರಿಪ್ರಸಾದ್ ಟ್ವೀಟಿಸಿದ್ದಾರೆ. 

Similar News