ಸಿಐಡಿ ಅಧಿಕಾರಿಗೆ 76 ಲಕ್ಷ ರೂ. ಲಂಚ: PSI ಹಗರಣದ ಪ್ರಮುಖ ಆರೋಪಿಯಿಂದಲೇ ಲೋಕಾಯುಕ್ತಕ್ಕೆ ದೂರು

Update: 2023-01-25 14:13 GMT

ಬೆಂಗಳೂರು, ಜ.25:ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ ದಿನೆ ದಿನೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಈ ನಡುವೆ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಖುದ್ದು ಕರ್ನಾಟಕ ಲೋಕಾಯುಕ್ತರಿಗೆ ದೂರು ಸಲ್ಲಿಸಿ, ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ 76 ಲಕ್ಷ ರೂ. ಪಡೆದಿರುವುದಾಗಿ ಆರೋಪಿಸಿದ್ದಾರೆ.

ಪಿಎಸ್ಸೈ ನೇಮಕಾತಿ ಅಕ್ರಮ ನೇಮಕಾತಿ ಪ್ರಕರಣದಿಂದ ಪಾರು ಮಾಡಲು ಸಿಐಡಿ ಅಧಿಕಾರಿ ಲಂಚ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿರುವ ಆರ್.ಡಿ.ಪಾಟೀಲ್,8.4 ನಿಮಿಷ ಅವಧಿಯ ಆಡಿಯೊದ ಪೆನ್ ಡ್ರೈವ್ ದಾಖಲೆಯಾಗಿ ಸಲ್ಲಿಕೆ ಮಾಡಿದ್ದಾರೆ.

ದೂರಿನಲ್ಲಿ ಏನಿದೆ?: ಶಂಕರಗೌಡ ಪಾಟೀಲ ಅವರು ಪ್ರಕರಣ ಮುಂದುವರಿಸದಿರಲು ನನಗೆ  3 ಕೋಟಿ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಆದರೆ ನನ್ನಿಂದ ಅಷ್ಟು ಹಣ ಹೊಂದಿಸಲು ಸಾಧ್ಯವಾಗುವುದಿಲ್ಲ. ಬೇಕಿದ್ದರೆ 76 ಲಕ್ಷಹಣವನ್ನು ಕೊಡುತ್ತೇನೆ ಎಂದು ಹೇಳಿ ಬ್ಯಾಂಕ್ ಆಫ್‍ ಬರೋಡಾ ಶಾಖೆಯಿಂದ ಹಣ ಪಡೆದು, ಸಂಬಂಧಿ ಶ್ರೀಕಾಂತನ ಮೂಲಕ ಅವರಿಗೆ ತಲುಪಿಸಿದ್ದೆ. 

ನಾನು ಜಾಮೀನು ಪಡೆದು ಹೊರ ಬಂದ ಬಳಿಕವೂ ಶಂಕರಗೌಡ ಹಾಗೂ ಅವರ ಅಧೀನ ಸಿಬ್ಬಂದಿಯು ಮನೆಗೆ ಬಂದು ಉಳಿದ ಹಣ ನೀಡುವಂತೆ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆಡಿಯೊದಲ್ಲಿ ಏನಿದೆ?: ಇನ್ನೂ,8 ನಿಮಿಷದ ಆಡಿಯೊದಲ್ಲಿ ಆರ್.ಡಿ. ಪಾಟೀಲ ಮಾತು ಮಾತ್ರ ಸ್ಪಷ್ಟವಾಗಿ ಕೇಳಿಸುತ್ತದೆ. ಎದುರಿಗೆ ಮಾತನಾಡಿರುವ ವ್ಯಕ್ತಿಯ ಧ್ವನಿ ಅಸ್ಪಷ್ಟವಾಗಿದೆ. ಏನಾದರೂ ಮಾಡಿ, ನನಗೆ ಹೊರಗೆ ಹೋಗುವಂತೆ ಮಾಡಿ. ನನಗೆ ಪ್ರತಿ ದಿನವೂ ಮಹತ್ವದ ದಿನವಾಗಿದೆ. ನನಗೆ ಲಂಡನ್ ನಲ್ಲಿ ಭಕ್ತರೊಬ್ಬರು ಇದ್ದಾರೆ. ಅವರಿಂದ ಹಣದ ವ್ಯವಸ್ಥೆ ಮಾಡುತ್ತೇನೆ. ಇನ್ನಿಬ್ಬರು ತನಿಖಾಧಿಕಾರಿಗಳಾದ ಪ್ರಕಾಶ ರಾಠೋಡ, ವೀರೇಂದ್ರ ಕುಮಾರ್ ಅವರಿಗೂ ಹಣ ನೀಡುತ್ತೇನೆ ಎಂದಿದ್ದಾನೆ.

Similar News