ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ; ಸಾಕ್ಷಿ ನೀಡಿದರೂ ಕ್ರಮ ಜರುಗಿಸುತ್ತಿಲ್ಲ: ರುಪ್ಸ ಆರೋಪ

Update: 2023-01-25 14:45 GMT

ಬೆಂಗಳೂರು, ಜ.25: ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ಆರು ತಿಂಗಳ ಹಿಂದೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಕೆಲ ಸಾಕ್ಷಿಗಳನ್ನು ಸಲ್ಲಿಸಲಾಗಿದೆ. ಆದರೆ ಭ್ರಷ್ಟ ಅಧಿಕಾರಿಗಳ ಮೇಲೆ ಯಾವುದೇ ಕ್ರಮವನ್ನು ಸರಕಾರ ಜರುಗಿಸಿಲ್ಲ ಎಂದು ರುಪ್ಸ ಕರ್ನಾಟಕದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಆರೋಪಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ಸುತ್ತೋಲೆಗಳನ್ನು ಹೊರಡಿಸುವ ಮೂಲಕ ಶಿಕ್ಷಣ ಹಕ್ಕು ಕಾಯ್ದೆಯ ನಿಯಮಗಳಲ್ಲೇ ಗೊಂದಲಗಳನ್ನು ಸೃಷ್ಟಿಸಲಾಗುತ್ತಿದೆ. ಹತ್ತು ವರ್ಷಕ್ಕೊಮ್ಮೆ ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಮಾಡಬೇಕು ಎಂದು ಇಲಾಖೆಯ ನಿಯಮವಿದ್ದರೂ, ಅದನ್ನು 5 ವರ್ಷ ಅಥವಾ ವರ್ಷಕ್ಕೊಮ್ಮೆ ಎಂದು ಬದಲಾಯಿಸಿ, ಭ್ರಷ್ಟ ಅಧಿಕಾರಿಗಳಿಗೆ ಹಣ ಮಾಡಲು ಅನುಕೂಲ ಮಾಡಿಕೊಡಲಾಗಿದೆ ಎಂದರು. 

ಆರ್‍ಟಿಇ ಶುಲ್ಕ ಮರುಪಾವತಿಯನ್ನು ಪಡೆಯಲು ಅರ್ಜಿ ಸಲ್ಲಿಸಿದರೆ, ಎಲ್ಲರ ಜೇಬು ತುಂಬುವವರೆಗೂ ಅರ್ಜಿ ವಿಲೇವಾರಿ ಮಾಡುವುದಿಲ್ಲ. ಇನ್ನು ಕೇಂದ್ರ ಪಠ್ಯಕ್ರಮ ಪಡೆಯಲು ಎನ್‍ಓಸಿ ಪಡೆಯಬೇಕೆಂದರೆ ಭ್ರಷ್ಟಾಚಾರಿಗಳ ದೊಡ್ಡ ಪಡೆಯನ್ನೇ ಶಿಕ್ಷಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳ ಇಲಾಖೆಯಲ್ಲಿ ನೇಮಿಸಲಾಗಿದೆ. ಇಲ್ಲಿ ನಡೆಯುವ ಭ್ರಷ್ಟಾಚಾರದ ಕುರಿತು ದೂರು ಸಲ್ಲಿಸಿದ ನಂತರ ಸುಮಾರು 700 ಶಾಲೆಗಳಿಗೆ ಎನ್‍ಓಸಿ ಕೊಟ್ಟಿರುವ ದಾಖಲೆಗಳೇ ಇಲಾಖೆಯಲ್ಲಿ ಇಲ್ಲದಿರುವ ಸತ್ಯ ಬಹಿರಂಗವಾಯಿತು ಎಂದು ಅವರು ತಿಳಿಸಿದರು. 

ಶಿಕ್ಷಣ ಇಲಾಖೆಯಲ್ಲಿರುವ ಅನೇಕ ಉನ್ನತಾಧಿಕಾರಿಗಳ ಬೆಂಬಲದೊಂದಿಗೆ ಉಳಿದ ಅಧಿಕಾರಿಗಳು ನಿಯಮಗಳನ್ನು ಗೊಂದಲಕ್ಕೀಡು ಮಾಡಿ, ಲಂಚ ಪಡೆಯುವ ಕೆಲಸ ಬಹಿರಂಗವಾಗಿ ಮಾಡುತ್ತಿದ್ದಾರೆ. ಇದಕ್ಕೆ ಸಂಪೂರ್ಣವಾದ ಬೆಂಬಲವನ್ನು ಶಿಕ್ಷಣ ಮಂತ್ರಿಗಳು ನೀಡುತ್ತಿರುವುದಕ್ಕೆ ಅನೇಕ ಸಾಕ್ಷಿಗಳಿವೆ. ಅವುಗಳಲ್ಲಿ ಪ್ರಮುಖವಾಗಿ ವರ್ಷಕ್ಕೊಮ್ಮೆ ರಾಜ್ಯದ ಎಲ್ಲ ಬಿಇಓ ಮತ್ತು ಡಿಡಿಪಿಐ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿರುವುದಾಗಿದೆ. ಇನ್ನು ಕಚೇರಿಯಲ್ಲಿರುವ ಏಜೆಂಟ್ ಕೆಲಸ ಮಾಡುವ ಅಧಿಕಾರಿಗಳು ಹತ್ತು ವರ್ಷವಾದರೂ ಅಲ್ಲೇ ಮುಂದುವರೆಯುತ್ತಿದ್ದಾರೆ ಎಂದು ಅವರು ಹೇಳಿದರು. 

ರುಪ್ಸ ಕರ್ನಾಟಕವು ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿಗಳ ಮಿತಿಮೀರಿದ ಭ್ರಷ್ಟಾಚಾರದ ಕುರಿತು ಮೂರು ವರ್ಷದಿಂದಲೂ ಪ್ರಧಾನ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತಲೇ ಬಂದಿದೆ. ಇಲಾಖೆಯಲ್ಲಿ ಖಾಸಗಿ ಶಾಲೆಗಳಿಗೆ ನೀಡುತ್ತಿರುವ ಕಿರುಕುಳದ ಬಗ್ಗೆ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಚರ್ಚಿಸಲಾಗಿದೆ. ಇವೆಲ್ಲ ವಿಚಾರವನ್ನು ರಾಷ್ಟ್ರಪತಿಗಳಿಗೆ ಪತ್ರ ಬರೆಯುವುದಾಗಿ ಅವರು ಎಚ್ಚರಿಕೆ ನೀಡಿದರು.

Similar News