ಪೋಕ್ಸೊ ಕಾಯ್ದೆಯಲ್ಲಿ ನಿಗದಿಪಡಿಸಿದ ಕನಿಷ್ಠ ಶಿಕ್ಷೆಯನ್ನು ಕಡಿತ ಮಾಡಲು ಸಾಧ್ಯವಿಲ್ಲ: ಹೈಕೋರ್ಟ್

Update: 2023-01-25 15:38 GMT

ಬೆಂಗಳೂರು, ಜ.25: ಪೋಕ್ಸೊ(ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ ಅಡಿ ನಿಗದಿಪಡಿಸಿರುವ ಶಿಕ್ಷೆ ಪ್ರಮಾಣಕ್ಕಿಂತ ಕಡಿಮೆ ಶಿಕ್ಷೆಯನ್ನು ವಿಧಿಸಲು ವಿಚಾರಣಾ ನ್ಯಾಯಾಲಯಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಇದೇ ವೇಳೆ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಪೊಕ್ಸೊ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು 5 ವರ್ಷಗಳಿಂದ 7 ವರ್ಷಕ್ಕೆ ಹೆಚ್ಚಿಸಿ ತೀರ್ಪು ನೀಡಿದೆ.

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಮಾಣ ಕಡಿತ ಮಾಡಿರುವ ಕ್ರಮ ಸರಿಯಲ್ಲ. ಅದ್ದರಿಂದ ಅಪರಾಧಿಗೆ ವಿಧಿಸಿರುವ ಶಿಕ್ಷೆ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ, ಪೋಕ್ಸೊ ಕಾಯ್ದೆಯ ಸೆಕ್ಷನ್ 4 ಅಪರಾಧಿಗೆ ಕನಿಷ್ಟ 7 ವರ್ಷ ಜೈಲು ಶಿಕ್ಷೆ ವಿಧಿಸುವಂತೆ ಹೇಳುತ್ತದೆ. ಹಾಗೆಯೇ, ಐಪಿಸಿ ಸೆಕ್ಷನ್ 376 ಅತ್ಯಾಚಾರ ಅಪರಾಧಕ್ಕೆ ಕನಿಷ್ಟ 7 ವರ್ಷ ಜೈಲು ಶಿಕ್ಷೆ ವಿಧಿಸಬೇಕು ಎನ್ನುತ್ತದೆ. ಆದರೆ, ವಿಚಾರಣಾ ನ್ಯಾಯಾಲಯ ಸೂಕ್ತ ಕಾರಣವನ್ನೂ ದಾಖಲಿಸದೆ ಪ್ರಕರಣದ ಅಪರಾಧಿಗೆ 7 ವರ್ಷಗಳ ಬದಲಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿರುವುದು ನಿಯಮ ಬಾಹಿರ ಎಂದು ಅಭಿಪ್ರಾಯಪಟ್ಟಿದೆ.

ಇದೇ ವೇಳೆ ಅಪರಾಧಿಗೆ ವಿಧಿಸಿದ್ದ 5 ವರ್ಷಗಳ ಜೈಲು ಶಿಕ್ಷೆಯನ್ನು 7 ವರ್ಷಕ್ಕೆ ಹೆಚ್ಚಿಸಿ ಹೈಕೋರ್ಟ್ ತೀರ್ಪು ನೀಡಿದೆ. ಹಾಗೆಯೇ, ಅಪರಾಧಿಗೆ ಹೆಚ್ಚುವರಿ ಶಿಕ್ಷೆಯನ್ನು ಜಾರಿ ಮಾಡಲು ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

ಪ್ರಕರಣವೇನು?: 12 ವರ್ಷದ ಬಾಲಕಿ ಮೇಲೆ 35 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲ್ಕಿ ಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿ, ತನಿಖೆ ನಡೆಸಿ ಬೀದರ್ ನ ಸೆಷನ್ಸ್ ಕೋರ್ಟ್ ಗೆ ದೋಷಾರೋಪಣೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿತ್ತಾದರೂ, ಶಿಕ್ಷೆ ಪ್ರಮಾಣವನ್ನು ಕಾಯ್ದೆಯಲ್ಲಿ ನಿಗದಿಪಡಿಸಿದ್ದಕ್ಕಿಂತ ಕಡಿಮೆ ಮಾಡಿತ್ತು.

ಈ ಹಿನ್ನೆಲೆಯಲ್ಲಿ ಬಾಲ್ಕಿ ಠಾಣೆ ಪೊಲೀಸರು ಹೈಕೋರ್ಟ್ ಗೆ ಸಿಆರ್‍ಪಿಸಿ ಸೆಕ್ಷನ್ 377(1) ಬಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯದ ಆದೇಶವನ್ನು ಮಾರ್ಪಡಿಸಿ ಶಿಕ್ಷೆ ಪ್ರಮಾಣವನ್ನು ಹೆಚ್ಚಿಸುವಂತೆ ಕೋರಿದ್ದರು.

ಅರ್ಜಿ ವಿಚಾರಣೆ ವೇಳೆ ಪೊಲೀಸರ ಪರ ವಾದ ಮಂಡಿಸಿದ್ದ ಸರಕಾರಿ ವಕೀಲರು, ವಿಶೇಷ ನ್ಯಾಯಾಲಯಕ್ಕೆ ಕಾಯ್ದೆಯಲ್ಲಿ ನಿಗದಿಪಡಿಸಿದ ಕನಿಷ್ಟ ಶಿಕ್ಷೆ ಪ್ರಮಾಣಕ್ಕಿಂತ ಕಡಿಮೆ ಶಿಕ್ಷೆ ವಿಧಿಸುವ ಅಧಿಕಾರವಿಲ್ಲ. ಹಾಗೆಯೇ, ಅಪರಾಧಿಗೆ ವಿಧಿಸಿರುವ ದಂಡ ಮೊತ್ತವೂ ಕೂಡ ನಿಗದಿಗಿಂತ ಕಡಿಮೆ ಇದೆ. ವಿಚಾರಣಾ ನ್ಯಾಯಾಲಯದ ಈ ಕ್ರಮ ನಿಯಮಬಾಹಿರ ಎಂದು ವಾದಿಸಿದ್ದರು. 

Similar News