ತುಮಕೂರು | ಭಾವಚಿತ್ರ ವಿರೂಪಗೊಳಿಸಿದ ಆರೋಪ: ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಫ್ಲೆಕ್ಸ್ ತೆರವುಗೊಳಿಸಲು ಆಗ್ರಹ

Update: 2023-01-25 18:43 GMT

ತುಮಕೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ವಿರೂಪಗೊಳಿಸಿ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಅಳವಡಿಸಿರುವ ಫ್ಲೆಕ್ಸ್ ಅನ್ನು ತೆರವುಗೊಳಿಸುವಂತೆ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಮುಖಂಡರು ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್, ಮಾನವತಾವಾದಿ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರವನ್ನು ಅಳವಡಿಸಿರುವ ಸಂಘಟನೆಗಳು ಅಂಬೇಡ್ಕರ್ ಅವರಿಗೆ ಅವಮಾನ ಮಾಡುವ ಉದ್ದೇಶದಿಂದಲೇ ಅವರ ಹಣೆಯಲ್ಲಿ ತಿಲಕ ಇಟ್ಟು, ಜೈಭೀಮ್, ಜೈಶ್ರೀರಾಮ್ ಎಂದು ಫ್ಲೆಕ್ಸ್ ಅಳವಡಿಸಿದ್ದಾರೆ, ಮನು ಧರ್ಮವನ್ನು ಒಪ್ಪದ ಅಂಬೇಡ್ಕರ್ ಅವರ ಹಣೆಗೆ ತಿಲಕವನ್ನಿಟ್ಟು, ವಿಕೃತಗೊಳಿಸಿರುವುದು ಖಂಡನೀಯ ಎಂದರು.

ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಫ್ಲೆಕ್ಸ್ ಅಳವಡಿಕೆಯಲ್ಲಿಯೂ ಹಿಂದೂ ಧರ್ಮದ ಹೇರಿಕೆಯನ್ನು ಮಾಡುತ್ತಿದ್ದು, ಜ್ಯಾತಾತೀತ, ಮಾನವತವಾದಿಗಳಿಗೆ ಜಾತೀಯತೆಯ ಬಣ್ಣವನ್ನು ಹಾಕುತ್ತಿರುವ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸಂಘಟನೆಗಳ ಕುಕೃತ್ಯಕ್ಕೆ ಮಹಾನಗರ ಪಾಲಿಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಇತ್ತಿಚೆಗೆ ನಗರಕ್ಕೆ ಆಗಮಿಸಿದ್ದ ಹಸಿರು ನ್ಯಾಯ ಮಂಡಳಿ ಅಧ್ಯಕ್ಷ ನ್ಯಾ.ಸುಭಾಷ್ ಬಿ.ಅಡಿ ಅವರು ನಗರದಲ್ಲಿ ಎಲ್ಲೆಂದರಲ್ಲಿ ಕಾನೂನು ಬಾಹಿರವಾಗಿ ಫ್ಲೆಕ್ಸ್ ಅವಳವಡಿಸಿರುವುದಕ್ಕೆ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ತರಾಟೆ ತೆಗೆದುಕೊಂಡರು ಸಹ ಪಾಲಿಕೆ ಅಧಿಕಾರಿಗಳು ಎಚ್ಚೆತ್ತಿಲ್ಲ, ಸಮುದಾಯಗಳ ನಡುವೆ ವೈಶಮ್ಯವನ್ನು ಸೃಷ್ಠಿಸುವಂತಹ ಫ್ಲೆಕ್ಸ್‍ಗಳನ್ನು ಹಾಕುವುದಕ್ಕೆ ನಿರ್ಬಂಧ ವಿಧಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯಿಂದ ಉಗ್ರಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಟಿ.ಆರ್.ಗುರುಪ್ರಸಾದ್, ಶಿವರಾಜ್, ಮನು.ಟಿ, ನಿತಿನ್, ನವೀನ್, ಶಾರು, ಅತೀಕ್ ಉರ್ ರೆಹಮಾನ್, ವಿನಯ್, ಚರಣಸಿಂಹ, ರೋಮ ಸೇರಿದಂತೆ ಇತರರಿದ್ದರು. 

Similar News