ಮಂಗಳೂರು: ಬೈಬಲ್ ಪ್ರದರ್ಶನಕ್ಕೆ ಚಾಲನೆ

Update: 2023-01-26 10:44 GMT

ಮಂಗಳೂರು, ಜ.26: "ಬೈಬಲ್ ಆಲಿಸಿ, ಬೈಬಲ್ ಓದಿ, ಬೈಬಲ್ ಅಧ್ಯಯನ ಮಾಡಿ, ಬೈಬಲ್‌ನಲ್ಲಿ ಪ್ರಾರ್ಥಿಸಿ ಮತ್ತು ಬೈಬಲ್‌ನ್ನೇ ಜೀವಿಸಿ" ಎಂದು ಸುಮಾರು 40 ವರ್ಷಗಳ ಹಿಂದೆ ಮಂಗಳೂರಿಗೆ ಬಂದಿದ್ದ ಲೋಗೋಸ್ ಹಡಗಿನಲ್ಲಿ ಜೋಡಿಸಿಟ್ಟಿದ್ದ ಬೈಬಲ್ ಲೈಬ್ರರಿಯಲ್ಲಿ ತಾನು ಕೇಳಿದ ಈ ವಾಕ್ಯಗಳು ನಮ್ಮ ಜೀವನವನ್ನು ಸಮೃದ್ಧಗೊಳಿಸುತ್ತದೆ ಎಂದು ಮಂಗಳೂರು ಧರ್ಮಪ್ರಾಂತದ ನಿವೃತ್ತ ಧರ್ಮಗುರು ಮತ್ತು ಇಂಗ್ಲಿಷ್ ಹೊಸ ಒಡಂಬಡಿಕೆಯನ್ನು ಕೊಂಕಣಿಗೆ ಭಾಷಾಂತರಿಸಿದ ಡಾ. ವಿಲಿಯಂ ಬರ್ಬೋಜಾ ಅಭಿಪ್ರಾಯಪಟ್ಟರು.

ಮಂಗಳೂರು ಧರ್ಮಕ್ಷೇತ್ರದ ಬೈಬಲ್, ಸುವಾರ್ತ ಪ್ರಸಾರ, ಸಾಮಾಜಿಕ ಸಂಪರ್ಕ ಮತ್ತು ಕಿರುಕ್ರೈಸ್ತ ಸಮುದಾಯದ ಆಯೋಗಗಳ ಸಹಯೋಗದಲ್ಲಿ ಸಂತ ಅಂತೋನಿ ಆಶ್ರಮ, ಸಂತ ಜೋಸೆಫ್ ಸೆಮಿನರಿ, ಕಾಸ್ಸಿಯಾ, ಜೆಪ್ಪುಮತ್ತು ವೆಲೆನ್ಸಿಯಾ ಚರ್ಚ್‌ಗಳು ಜಂಟಿಯಾಗಿ ನಗರದ ಜೆಪ್ಪುಸಂತ ಅಂತೋನಿ ಆಶ್ರಮದಲ್ಲಿ ಹಮ್ಮಿಕೊಂಡ ಬೈಬಲ್ ಪ್ರದರ್ಶನಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಸಂತ ಅಂತೋನಿ ದತ್ತಿ ಸಂಸ್ಥೆಗಳ ಸಂಚಾಲಕ ಹಾಗೂ ವಸ್ತುಪ್ರದರ್ಶನದ ಸಂಚಾಲಕ ಜೆ.ಬಿ.ಕ್ರಾಸ್ತಾ, ಜೆಪ್ಪುಸಂತ ಜೋಸೆಫ್ ಸೆಮಿನರಿಯ ರೆಕ್ಟರ್ ಡಾ.ರೊನಾಲ್ಡ್ ಸೆರಾವೊ, ಕಿರು ಕ್ರೈಸ್ತ ಸಮುದಾಯದ ಸಂಚಾಲಕ ವಂ.ಜೋಕಿಮ್ ಫೆನಾರ್ಂಡಿಸ್, ಕೆನರಾ ಕಮ್ಯುನಿಕೇಶನ್ ಸೆಂಟರ್‌ನ ನಿರ್ದೇಶಕ ವಂ. ಅನಿಲ್ ಫೆನಾರ್ಂಡಿಸ್, ಧರ್ಮಕ್ಷೆತ್ರದ ಸುವಾರ್ತ ಪ್ರಸಾರ ಆಯೋಗದ ಕಾರ್ಯದರ್ಶಿ ಮತ್ತು ಕಾರ್ಯಕ್ರಮದ ಸಂಯೋಜಕ ರೂಪೇಶ್ ತಾವ್ರೊ, ಫೋರ್‌ವಿಂಡ್ಸ್ ಜಾಹೀರಾತು ಸಂಸ್ಥೆಯ ನಿರ್ದೇಶಕ ಏಲಿಯಾಸ್ ಫೆನಾರ್ಂಡಿಸ್, ಸಂತ ಅಂತೋನಿ ಆಶ್ರಮದ ಸಹಾಯಕ ನಿರ್ದೇಶಕ ಲ್ಯಾರಿ ಪಿಂಟೊ, ಮತ್ತು ಆರ್ಸುಲಾಯ್ನಾ ಸಿ. ಡೋರೀನ್ ಮತ್ತಿತರರು ಉಪಸ್ಥಿತರಿದ್ದರು.

ಬೈಬಲ್ ಗ್ರಂಥವನ್ನು ವಿಶೇಷ ಗೌರವದೊಂದಿಗೆ ಪ್ರಾರ್ಥನಾ ಮಂದಿರದಿಂದ ಪ್ರದರ್ಶನ ಸಭಾಂಗಣದವರೆಗೆ ಮೆರವಣಿಗೆಯಲ್ಲಿ ತರಲಾಯಿತು. ಈ ಸಂದರ್ಭ ಬೈಬಲ್‌ಗೆ ಹಾರಾರ್ಪಣೆಗೈದು ಧೂಪ ಹಾಕಿ ಗೌರವಿಸಿ, ಪ್ರದರ್ಶನದ ಆವರಣವನ್ನು ಪತ್ರಜಲದಿಂದ ಆಶೀರ್ವದಿಸಿದರು. ಅಲ್ಲದೆ ಪ್ರಾರ್ಥನೆಯ ಮೂಲಕ ಬೈಬಲ್‌ನ ಒಂದು ಭಾಗವನ್ನು ಓದಲಾಯಿತು. ಅಲ್ಲದೆ ಅನುವಾದಕ ಡಾ. ವಿಲಿಯಂ ಬರ್ಬೊಜಾ ಅವರನ್ನು ಗೌರವಿಸಲಾಯಿತು.

ಈ ಪ್ರದರ್ಶನದಲ್ಲಿ ಪವಿತ್ರಗ್ರಂಥದ ಸಾರ್ವಜನಿಕ ಓದುವಿಕೆ, ಬೈಬಲ್ ಕಲೆ, ಚಿತ್ರಕಲೆ, ವೀಡಿಯೋ ಪ್ರಸ್ತುತಿ, ರಸಪ್ರಶ್ನೆ, ಹಾಡುಗಳು, ಸ್ಕಿಟ್‌ಗಳು ಮತ್ತು ನೃತ್ಯಗಳನ್ನು ಒಳಗೊಂಡಿದೆ. ಅಲ್ಲದೆ ಬೈಬಲ್ ವ್ಯಾಖ್ಯಾನಗಳು, ಕೈಬರಹದ ಬೈಬಲ್‌ಗಳು, ದೊಡ್ಡಗಾತ್ರದ ಬೈಬಲ್, ಬೈಬಲ್ ಕಲೆ, ಬೈಬಲ್ ಚಿತ್ರಗಳು, ಪ್ರತಿಮಾಶಾಸ್ತ್ರ, ಭಾರತೀಯ ಕಲೆ ಮತ್ತು ಬೈಬಲ್ ಇತಿಹಾಸಗಳ ಪ್ರದರ್ಶನ ಸಹಿತ ಪ್ರಾದೇಶಿಕ ಮತ್ತು ಸ್ಥಳೀಯ ಭಾಷೆಗಳನ್ನು ಒಳಗೊಂಡ ಬೈಬಲ್ ಪ್ರತಿಗಳ ಭಿನ್ನ ಅನುವಾದಗಳನ್ನು ಪ್ರದರ್ಶಿಸಲಾಗುತ್ತಿದೆ. ಅಲ್ಲದೆ ಬೈಬಲ್ ವರ್ಣಚಿತ್ರಗಳು ಮತ್ತು ಪ್ರಮುಖ ಬೈಬಲ್ ಘಟನೆಗಳ ಪ್ರದರ್ಶನವು ಮೆರಗನ್ನು ನೀಡಿವೆ. ಪ್ರದರ್ಶನವು ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ಪ್ರತಿದಿನ ಸಂಜೆ 4:30ರಿಂದ 7ರವರೆಗೆ ಬೈಬಲ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Similar News