10 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ 'ಉಮ್ಮತ್ತಾಟ್' ಪರಿಚಯಿಸಿದ ರಾಣಿ ಮಾಚಯ್ಯಗೆ ಪದ್ಮಶ್ರೀ ಗೌರವ

Update: 2023-01-26 13:33 GMT

ಮಡಿಕೇರಿ ಜ.26 : ಕೊಡವ ಜಾನಪದ ಕಲೆಯ ಪ್ರಸರಣಕ್ಕೆ ಅರ್ಧ ಶತಮಾನದ ತಮ್ಮ ಬದುಕನ್ನು ಮೀಸಲಿಟ್ಟ ಕೊಡಗಿನ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಅವರು ಕೇಂದ್ರದ ಅತ್ಯುನ್ನತ ನಾಗರಿಕ  ಪ್ರಶಸ್ತಿ ‘ಪದ್ಮಶ್ರೀ’ಗೆ ಭಾಜನರಾಗಿದ್ದಾರೆ.

 ‘ಕನಸು ಮನಸಿನಲ್ಲೂ ನಿರೀಕ್ಷಿಸದ ಪ್ರಶಸ್ತಿ ತನಗೆ ಬಂದಿದೆ. ತುಂಬಾ ಸಂತೋಷವಾಗಿದೆ’ ಎಂದು ಪತ್ರಿಕೆಗೆ ಪ್ರತಿಕ್ರಿಯಿಸಿದ ರಾಣಿ ಮಾಚಯ್ಯ ಅವರು, ಜಾನಪದ ಕಲಾವಿದೆಯಾಗಿ 10 ಸಾವಿರಕ್ಕೂ ಹೆಚ್ಚಿನ ಮಕ್ಕಳಿಗೆ ಕೊಡಗಿನ ವಿಶಿಷ್ಟ ಜಾನಪದ ಕಲಾ ಪ್ರಕಾರ ‘ಉಮ್ಮತ್ತಾಟ್’ ನ್ನು ಕಲಿಸಿಕೊಟ್ಟವರು.

ಜಿಲ್ಲಾ ಕೇಂದ್ರ ಮಡಿಕೇರಿಯ ಐಮುಡಿಯಂಡ ದಿವಂಗತ ಮಾಚಯ್ಯ ಅವರ ಪತ್ನಿ, 78 ರ ಪ್ರಾಯದಲ್ಲೂ ಲವಲವಿಕೆಯಿಂದ ಇರುವ ರಾಣಿ ಮಾಚಯ್ಯ, ಕೊಡವರ ಆರಾಧ್ಯ ದೇವತೆ ಕಾವೇರಿಯನ್ನು ಸ್ತುತಿಸಿ, ತಾಳಕ್ಕೆ ತಕ್ಕಂತೆ ನರ್ತಿಸುವ ಉಮ್ಮತ್ತಾಟ್‍ನಲ್ಲಿ ಸಿದ್ಧಹಸ್ತರು. ಕೊಡವ ಜಾನಪದ ಕಲೆಯಲ್ಲಿ ಆಸಕ್ತ ಪ್ರತಿಭಾವಂತರ ತಂಡವನ್ನು ಕಟ್ಟಿ, ಕೊಡಗಿನ ಶ್ರೀಮಂತ ಕಲೆಯನ್ನು ರಾಷ್ಟ್ರದ ವಿವಿಧೆಡೆಗಳಲ್ಲಿ ಪ್ರದರ್ಶಿಸುವ ಮೂಲಕ ಜಿಲ್ಲೆಯ ಅಪರೂಪದ ಕಲೆಯನ್ನು ಹೊರ ನಾಡಿನವರಿಗೆ ಪರಿಚಯಿಸಿದ ಕೀರ್ತಿ ಇವರದ್ದು.

ಇದನ್ನೂ ಓದಿಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಬೀದರ್ ನ ಶಾ ರಶೀದ್‌ ಅಹ್ಮದ್‌ ಖಾದ್ರಿ ಯಾರು? ಅವರ ಸಾಧನೆ ಏನು?

‘ಇಲ್ಲಿಯವರೆಗೆ ರಾಜ್ಯ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ನೂರಕ್ಕೂ ಹೆಚ್ಚಿನ ಕೊಡವ ಜಾನಪದ ಕಲೆಯ ಪ್ರದರ್ಶನಗಳನ್ನು ನೀಡಿದ್ದೇನೆ’ ಎನ್ನುವ ರಾಣಿ ಮಾಚಯ್ಯ ಅವರು, ನಿಜಕ್ಕಾದರೆ ಕಾರ್ಯಕ್ರಮಗಳ ಲೆಕ್ಕವಿಟ್ಟವರಲ್ಲ.

ಸಿದ್ದಾಪುರದಲ್ಲಿ ಜನಿಸಿ, ವಿರಾಜಪೇಟೆ ತಾಲೂಕಿನ ಕಾಕೋಟುಪರಂಬುವಿನಲ್ಲಿ ಬೆಳೆದ ಇವರು, ಶಿಕ್ಷಣದ ಹಂತದಿಂದಲೇ ಕೊಡವ ಜಾನಪದ ಕ್ಷೇತ್ರದತ್ತ ಆಸಕ್ತಿಯನ್ನು ತಳೆದವರು. ಕೊಡಗಿನ ಜಾನಪದ ಕಲೆಗಳಾದ ಕೋಲಾಟ್, ಉಮ್ಮತ್ತಾಟ್, ಬುಡಕಟ್ಟು ಜನಾಂಗದ ನೃತ್ಯಗಳೊಂದಿಗೆ ಭರತನಾಟ್ಯದಲ್ಲೂ ಆಸಕ್ತಿಯನ್ನು ಹೊಂದಿದ್ದಲ್ಲದೆ, ‘ಕಾವೇರಿ ಕಲಾವೃಂದ’ ಎನ್ನುವ ಕಲಾ ತಂಡವನ್ನು ರಚಿಸಿ ಕೊಡಗಿನ ಜಾನಪದ ಕಲಾ ಪ್ರಕಾರದ ಸೊಬಗು, ಮೌಲ್ಯಗಳನ್ನು ನಾಡಿನುದ್ದಗಲಕ್ಕೂ ಪಸರಿಸುತ್ತಾ ಬಂದವರು. 

Similar News