ಚಿಕ್ಕಮಗಳೂರು | ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯಿಂದ ಸಿಬ್ಬಂದಿಗೆ ಜಾತಿ ನಿಂದನೆ: ಆರೋಪ
ಚಿಕ್ಕಮಗಳೂರು, ಜ.26: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ತಮ್ಮ ಕೈಕೆಳಗಿನ ದಲಿತ ಸಮುದಾಯದ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ ಜಾತಿ ನಿಂದನೆ ಮಾಡಿದ್ದಾರೆ. ಜಾತಿ ನಿಂದನೆ ಸಂಬಂಧ ನೊಂದ ವ್ಯಕ್ತಿ ದೂರು ನೀಡಿ 4 ದಿನ ಕಳೆದರೂ ಪೊಲೀಸರು ದೂರು ದಾಖಲಿಸದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ದಲಿತ ಸಂಘಟನೆಗಳ ಐಕ್ಯತಾ ಚಾಲನಾ ಸಮಿತಿ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ಆರೋಪಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಘಟನೆ ಸಂಬಂಧ ಎಸ್ಪಿ, ಡಿವೈಎಸ್ಪಿ ಬಳಿ ಮಾತನಾಡಿ ದೂರು ದಾಖಲಿಸಲು ಗಡುವು ನೀಡಲಾಗಿದೆ. ಗಡುವಿನೊಳಗೆ ಅಧಿಕಾರಿ ವಿರುದ್ಧ ಎಫ್‍ಐಆರ್ ದಾಖಲಿಸದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು'' ಎಂದು ಎಚ್ಚರಿಸಿದರು.
''ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಸ್ಸಿಪಿ ಯೋಜನೆಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಭೈರಯ್ಯ ಎಂಬ ದಲಿತ ಸಮುದಾಯದ ಸಿಬ್ಬಂದಿಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಬಿ.ವಿ.ಚೈತ್ರಾ ಅವರು ದಲಿತ ಸಂಘಟನೆಗಳ ಮುಖಂಡರ ಸಮ್ಮುಖದಲ್ಲೇ ಜಾತಿ ನಿಂದನೆ ಮಾಡಿದ್ದಾರೆ. ಇದನ್ನು ಸಂಘಟನೆ ಮುಖಂಡರು ಪ್ರಶ್ನಿಸಿದಾಗ ಉಢಾಪೆ ಉತ್ತರ ನೀಡಿದ್ದಾರೆ. ಅಧಿಕಾರಿ ಚೈತ್ರಾ ದಲಿತ ಸಮುದಾಯದ ಸಿಬ್ಬಂದಿಗೆ ಜಾತಿ ನಿಂದನೆ ಮಾಡಿರುವ ಘಟನೆ ಸಂಬಂಧ ನೊಂದ ವ್ಯಕ್ತಿ ನಗರಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡಿ 4 ದಿನ ಕಳೆದರೂ ಪೊಲೀಸರು ಎಫ್‍ಐಆರ್ ದಾಖಲಿಸದೇ ಮೇಲ್ವರ್ಗದ ಅಧಿಕಾರಿ ಪರ ಕೆಲಸ ಮಾಡುತ್ತಿದ್ದಾರೆ'' ಎಂದು ಆರೋಪಿಸಿದರು.
''ನಗರ ಠಾಣೆ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಎಸ್ಪಿ ಹಾಗೂ ಡಿವೈಎಸ್ಪಿಗೆ ದೂರು ಹೇಳಿಕೊಂಡಿದ್ದು, ಅವರು ಪರಿಶೀಲಿಸಿ ದೂರು ದಾಖಲಿಸುವುದಾಗಿ ಭರವಸೆ ನೀಡಿದ್ದಾರೆ. ದೂರು ದಾಖಲಿಸಲು ಅವರಿಗೆ ಗಡುವು ನೀಡಿದ್ದು, ಗಡುವಿನೊಳಗೆ ದೂರು ದಾಖಲಿಸದಿದ್ದಲ್ಲಿ ದಲಿತ, ಪ್ರಗತಿಪರ ಸಂಘಟನೆಗಳ ಸೇರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದ ಅವರು, ಚಿಕ್ಕಮಗಳೂರು ಜಿಲ್ಲಾ ಉತ್ಸವದ ಸಂದರ್ಭ ದಲಿತ ಸಂಘಟನೆಗಳು, ಮುಖಂಡರನ್ನು ಯಾವುದೇ ಸಮಿತಿಗೆ ಸೇರಿಸಿಕೊಳ್ಳದೇ ಜಿಲ್ಲಾಡಳಿತ ಅಸ್ಪೃಶ್ಯತೆ ಆಚರಣೆ ಮಾಡಿದೆ. ಈ ಸಂಬಂಧ ಕಾನೂನು ಹೋರಾಟ ನಡೆಸಲಾಗುವುದು'' ಎಂದು ಇದೇ ವೇಳೆ ಅವರು ತಿಳಿಸಿದರು.
ಸಮಿತಿ ಮುಖಂಡರಾದ ಮರ್ಲೆ ಅಣ್ಣಯ್ಯ, ಬಿಳೇಕಲ್ಲಳ್ಳಿ ಬಾಲಕೃಷ್ಣ, ಕೂದುವಳ್ಳಿ ಮಂಜುನಾಥ್, ಮಂಜುನಾಥ್ ನಂಬಿಯಾರ್, ಚಂದ್ರಶೇಖರ್, ಮಂಜಯ್ಯ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.