ದುಬಾರಿ ಔಷಧಗಳಿಗೆ ಕಡಿವಾಣ ಅಗತ್ಯ

Update: 2023-01-26 19:30 GMT

ಔಷಧಗಳು ದುಬಾರಿಯಾಗಲು ಕಂಪೆನಿಗಳು ಕೊಡುವ ಕಾರಣ- ಹೊಸ ಔಷಧ ಕಣಗಳ ಸಂಶೋಧನೆ, ಸೂತ್ರೀಕರಣ ಹಾಗೂ ಮಾರುಕಟ್ಟೆಗೆ ತರಲು ಅಂದಾಜು 3 ಶತ ಕೋಟಿ ಡಾಲರ್ ವೆಚ್ಚವಾಗುತ್ತದೆ. ಆದರೆ, ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಒಪ್ಪುವುದಿಲ್ಲ. ಸಂಶೋಧನೆ ಹಾಗೂ ಅಭಿವೃದ್ಧಿ ವೆಚ್ಚಕ್ಕೂ ಔಷಧದ ಬೆಲೆಗೂ ಯಾವುದೇ ಸಂಬಂಧವಿಲ್ಲ. ಬೆಲೆ ದುಬಾರಿಯಾಗಲು ಕಂಪೆನಿಗಳ ದುರಾಸೆ ಕಾರಣ ಎಂದು ಅದು ವಾದಿಸುತ್ತದೆ.


ಕಾ್ಯನ್ಸರ್ ಎಂಬ ಪದ ತರುವ ತಲ್ಲಣವನ್ನು ವಿವರಿಸಲು ಸಾಧ್ಯವಿಲ್ಲ. ವಂಶವಾಹಿಯೊಂದು ಬದಲಾಗಿ ನಿಯಂತ್ರಣ ಕಳೆದುಕೊಂಡು, ಜೀವಕೋಶಗಳನ್ನು ನಿರಂತರವಾಗಿ ಸೃಷ್ಟಿಸುತ್ತದೆ; ಗಡ್ಡೆಯೊಂದು ಸೃಷ್ಟಿಯಾಗುತ್ತದೆ. ಡಿಎನ್‌ಎಗೆ ಹಾನಿ ಮತ್ತು ವಂಶವಾಹಿಗಳಲ್ಲಿ ಅಸ್ಥಿರತೆ ಇದಕ್ಕೆ ಕಾರಣ. ಪರಿಸರ, ಜೀವನಶೈಲಿ ಇಲ್ಲವೇ ನಡವಳಿ ಬದಲಾವಣೆಗಳೊಡನೆ ಕ್ಯಾನ್ಸರ್ ಸಂಬಂಧ ಹೊಂದಿದೆ. ಸಾಮಾನ್ಯ ಪಾರಿಸರಿಕ ಕಾರಣಗಳೆಂದರೆ, ವಿವಿಧ ರಾಸಾಯನಿಕ ಹಾಗೂ ಭೌತಿಕ ಕಾರಕಗಳಿಗೆ ಒಡ್ಡಿಕೊಳ್ಳುವುದು (ಉದಾಹರಣೆ-ಧೂಮಪಾನ. ಶೇ.25-30ರಷ್ಟು ಕ್ಯಾನ್ಸರ್‌ಗೆ ಧೂಮಪಾನ ಕಾರಣ), ಪರಿಸರ ಮಲಿನಕಾರಕಗಳು, ಸೇವಿಸುವ ಆಹಾರ ಮತ್ತು ಬೊಜ್ಜು(ಶೇ.30-35) ಮತ್ತು ವಿಕಿರಣ (ಶೇ.10). ಇವು ಜೀವಕೋಶದಲ್ಲಿರುವ ವಂಶವಾಹಿಗಳ ಕಾರ್ಯನಿರ್ವಹಣೆಯನ್ನು ಬದಲಿಸುತ್ತವೆ. ಆಧುನಿಕ ವೈದ್ಯ ವಿಜ್ಞಾನ ಕ್ಯಾನ್ಸರ್ ರೋಗಪತ್ತೆ, ಉಪಶಮನ ಹಾಗೂ ಚಿಕಿತ್ಸೆಯಲ್ಲಿ ದಾಪುಗಾಲು ಇರಿಸಿದೆ. ಹೊಸಹೊಸ ಚಿಕಿತ್ಸಾ ಪ್ರೋಟೋಕಾಲ್‌ಗಳನ್ನು ಕಂಡುಹಿಡಿಯಲಾಗಿದೆ. ಇದರಿಂದ ಸಾವಿನ ಪ್ರಮಾಣ ಕಡಿಮೆಯಾಗಿದೆ. ಆದರೆ, ಔಷಧಗಳು ದುಬಾರಿಯಾದ್ದರಿಂದ, ಚಿಕಿತ್ಸೆ ಕೈಗೆ ಎಟುಕದೆ ಅಪಾರ ಜೀವಹಾನಿಗೆ ಕಾರಣವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ-ಔಷಧ ಪೇಟೆಂಟ್‌ಗಳು ಮತ್ತು ಐಪಿಆರ್, ಬೌದ್ಧಿಕ ಸ್ವಾಮ್ಯ ಹಕ್ಕು.

ಕೇರಳದ ಎರ್ನಾಕುಲಂನ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರು ಚಿಕಿತ್ಸೆಗೆ ನೊವಾರ್ಟಿಸ್ ಪೇಟೆಂಟ್ ಹೊಂದಿರುವ ರಿಬೋಸಿಸಿಲಿಬ್ ಔಷಧವನ್ನು ಬಳಸಬೇಕಿತ್ತು. ತನಗೆ ಬರುತ್ತಿರುವ ಪಿಂಚಣಿಯಲ್ಲಿ ಚಿಕಿತ್ಸೆ ಪಡೆಯಲು ಆಗುತ್ತಿಲ್ಲ. ಹೀಗಾಗಿ ನೊವಾರ್ಟಿಸ್‌ನ ಏಕಸ್ವಾಮ್ಯವನ್ನು ಮುರಿದು, ಪೇಟೆಂಟ್ ಕಾಯ್ದೆಯಲ್ಲಿನ ಸಂಬಂಧಪಟ್ಟ ವಿಧಿಗಳನ್ನು ಬಳಸಿಕೊಂಡು ಸೋವಿ ಔಷಧಗಳನ್ನು ತಯಾರಿಸಲು ಒಕ್ಕೂಟ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಅವರು ಜೂನ್ 2022ರಲ್ಲಿ ಕೇರಳ ಹೈಕೋಟ್‌ನ ಕದ ತಟ್ಟಿದರು. ಔಷಧವನ್ನು ದೇಶದಲ್ಲಿ ಉತ್ಪಾದಿಸುತ್ತಿಲ್ಲವಾದ್ದರಿಂದ, 1970ರ ಪೇಟೆಂಟ್ ಕಾಯ್ದೆಯ ವಿಭಾಗ 92(ಸಿಎಲ್ ಕಡ್ಡಾಯ ಪರವಾನಿಗೆಗೆ ಅನುಮತಿ ನೀಡುತ್ತದೆ) ಹಾಗೂ ವಿಭಾಗ 100(ಪೇಟೆಂಟ್ ಇರುವವನಿಗೆ ಯಾವುದೇ ಸ್ವಾಮ್ಯಧನ ನೀಡದೆ ಅನ್ವೇಷಣೆಯನ್ನು ಬಳಸಿಕೊಳ್ಳಲು ಸರಕಾರಕ್ಕೆ ಅಧಿಕಾರ ನೀಡುತ್ತದೆ)ನ್ನು ಬಳಸಿಕೊಳ್ಳಬೇಕೆಂಬುದು ಅರ್ಜಿದಾರರ ಕೋರಿಕೆಯಾಗಿತ್ತು. ಅರ್ಜಿಯಲ್ಲಿ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ)ಯನ್ನು ವಿಶೇಷವಾಗಿ ಉಲ್ಲೇಖಿಸಲಾಗಿತ್ತು. ದುರದೃಷ್ಟವಶಾತ್ ಮಹಿಳೆ ಮೃತಪಟ್ಟರು. ವಿಷಯವನ್ನು ಆಕೆಯ ವಕೀಲರು ನ್ಯಾಯಮೂರ್ತಿಗಳಿಗೆ ತಿಳಿಸಿದಾಗ, ಪ್ರಕರಣ ಮುನ್ನೆಲೆಗೆ ಬಂದಿತು. ನ್ಯಾಯಮೂರ್ತಿ ವಿ.ಜಿ. ಅರುಣ್, 'ಗಮನಾರ್ಹ ಸಂಖ್ಯೆಯ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಮರಣ ಹೊಂದುತ್ತಿದ್ದಾರೆ. ಚಿಕಿತ್ಸೆ ದುಬಾರಿಯಾಗಿರುವುದು ಹಾಗೂ ಔಷಧಗಳು ಕೈಗೆ ಎಟುಕದೆ ಇರುವುದು ಇದಕ್ಕೆ ಕಾರಣ. ಸಂವಿಧಾನ ಕೊಡಮಾಡಿದ ಬದುಕುವ ಹಕ್ಕನ್ನು ಸಂರಕ್ಷಿಸುವುದು ಹಾಗೂ ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದು ರಾಜ್ಯದ ಕರ್ತವ್ಯವಾಗಿರುವುದರಿಂದ, ಈ ಬಗ್ಗೆ ಪರಿಣಾಮಕಾರಿ ಕ್ರಿಯೆ ಅಗತ್ಯವಿದೆ' ಎಂದು ಹೇಳಿ, ನಾಲ್ಕು ವಾರಗಳೊಳಗೆ ಕ್ರಮ ತೆಗೆದುಕೊಳ್ಳಬೇಕೆಂದು ಡಿಪಿಐಐಟಿಗೆ ಜುಲೈನಲ್ಲಿ ಸೂಚನೆ ನೀಡಿದರು.

ಇದು ಇಂಥ ಮೊದಲ ಪ್ರಕರಣವೇನಲ್ಲ. ಕ್ಷಯದಿಂದ ಬಳಲುತ್ತಿದ್ದ ಮೀರಾ ಯಾದವ್ ಹಾಗೂ ಮುಂಬೈ ಮೂಲದ ಜನ ಸ್ವಾಸ್ಥ್ಯ ಅಭಿಯಾನ್ ಸಂಘಟನೆ, ಕ್ಷಯ ರೋಗದ ಹೊಸ ಔಷಧಗಳಾದ ಬೆಡಾಕ್ಟಿಲಿನ್(ಜಾನ್ಸನ್ ಆ್ಯಂಡ್ ಜಾನ್ಸನ್) ಹಾಗೂ ಡೆಲಾಮನಿಡ್ (ಒಟ್ಸುಕ ಫಾರ್ಮಾಸ್ಯೂಟಿಕಲ್ಸ್ ) ದುಬಾರಿಯಾಗಿದ್ದು, ಅವುಗಳ ಉತ್ಪಾದನೆಗೆ ವಿಭಾಗ 92ರಡಿ ಕಡ್ಡಾಯ ಪರವಾನಿಗೆ ಇಲ್ಲವೇ ವಿಭಾಗ 100ರಡಿ ವಿಶೇಷಾಧಿಕಾರ ನೀಡಬೇಕು ಎಂದು ಕೋರಿ 2020ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಜಗತ್ತಿನ ಒಟ್ಟು ಕ್ಷಯ ರೋಗಿಗಳಲ್ಲಿ ಶೇ.25 ಮಂದಿ ಭಾರತದಲ್ಲಿದ್ದಾರೆ. ವಾರ್ಷಿಕ ಟಿಬಿ ವರದಿ 2022ರ ಪ್ರಕಾರ, 2021ರಲ್ಲಿ ದೇಶದಲ್ಲಿದ್ದ ಕ್ಷಯ ರೋಗಿಗಳ ಸಂಖ್ಯೆ 19 ಲಕ್ಷ. ಬಾಲ್ಯದಲ್ಲೇ ಕ್ಷಯಕ್ಕೆ ತುತ್ತಾಗುವವರ ಪ್ರಮಾಣ ಶೇ.31 ಇದೆ. ಔಷಧದ ಪೇಟೆಂಟ್ ಇರುವ ಕಂಪೆನಿಗಳು ನೀಡುವ ವಂತಿಗೆಯಿಂದ ದೇಶಕ್ಕೆ ಅಗತ್ಯವಿರುವಷ್ಟು ಔಷಧ ಖರೀದಿಸಲು ಸಾಧ್ಯವಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಸಂಬಂಧಿಸಿದ ಇಲಾಖೆಗಳೊಟ್ಟಿಗೆ ಚರ್ಚಿಸಿ, 4 ವಾರಗಳೊಳಗೆ ಆದೇಶವನ್ನು ಹೊರಡಿಸಬೇಕೆಂದು ನ್ಯಾಯಾಲಯ ಡಿಪಿಐಐಟಿಗೆ ಮಾರ್ಚ್ 2021ರಲ್ಲಿ ನಿರ್ದೇಶನ ನೀಡಿತ್ತು. ಆನಂತರ ಏನಾಯಿತೆಂದು ಗೊತ್ತಿಲ್ಲ!

ಸ್ಥಾಯಿ ಸಮಿತಿ ವರದಿ:
ರಾಜ್ಯಸಭೆಯ ಆರೋಗ್ಯ ಸ್ಥಾಯಿ ಸಮಿತಿ ಸಲ್ಲಿಸಿದ ಇತ್ತೀಚಿನ ವರದಿ 'ಕ್ಯಾನ್ಸರ್ ಕೇರ್ ಪ್ಲಾನ್ ಆಂಡ್ ಮ್ಯಾನೇಜ್‌ಮೆಂಟ್'ನಲ್ಲಿ 'ಶೇ.40ರಷ್ಟು ಪ್ರಸಂಗಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಯ ವೆಚ್ಚವನ್ನು ಸಾಲ, ಆಸ್ತಿಯ ಮಾರಾಟ ಇಲ್ಲವೇ ಸ್ನೇಹಿತರಿಂದ ವಂತಿಗೆ ಸಂಗ್ರಹಿಸಿ ನಿರ್ವಹಿಸಲಾಗುತ್ತದೆ. ಚಿಕಿತ್ಸೆ ವೆಚ್ಚ ಸರಕಾರಿ ಆಸ್ಪತ್ರೆಗಳಿಗೆ ಹೋಲಿಸಿದರೆ ಖಾಸಗಿಯಲ್ಲಿ ಮೂರು ಪಟ್ಟು ಹೆಚ್ಚು ಇದೆ'. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಚಿಕಿತ್ಸೆ ವೆಚ್ಚ ಭಾರತ ಹಾಗೂ ದಕ್ಷಿಣ ಆಫ್ರಿಕದಲ್ಲಿ ಅಂದಾಜು 10 ವರ್ಷಗಳ ವೇತನದಷ್ಟು ಇರುತ್ತದೆ. ಅಮೆರಿಕದಲ್ಲಿ ಈ ಪ್ರಮಾಣ 1.7 ವರ್ಷದ ವೇತನಕ್ಕೆ ಸಮನಾಗಿರುತ್ತದೆ. ಈ ದುಬಾರಿ ಚಿಕಿತ್ಸಾ ವೆಚ್ಚ ಅಭಿವೃದ್ಧಿಶೀಲ ದೇಶಗಳಲ್ಲಿ ಅಪಾರ ಸಾವು-ನೋವಿಗೆ ಕಾರಣವಾಗಿದೆ. ಶ್ರೀಮಂತ ದೇಶಗಳಲ್ಲಿ ಕ್ಯಾನ್ಸರ್ ರೋಗಿಗಳ ಉಳಿವಿನ ದರ ಶೇ.90 ಇದ್ದಲ್ಲಿ, ಭಾರತದಲ್ಲಿ ಅದು ಶೇ.65 ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಶೇ.45 ಮಾತ್ರ ಇದೆ. ಸ್ತನ ಕ್ಯಾನ್ಸರ್ ರೋಗಿಗಳ ದೇಹದಲ್ಲಿ ಕೋಶಗಳ ಹರಡುವಿಕೆಯನ್ನು ತಡೆಯಲು ಬಳಸುವ ರಿಬೋಸಿಸಿಲಿಬ್(ನೊವಾರ್ಟಿಸ್), ಪಾಲ್ಬೋಸಿಸಿಲಿಬ್(ಫೀಜರ್) ಮತ್ತು ಅಬೆಮಾಸಿಸಿಲಿಬ್(ಎಲಿ ಲಿಲಿ)ಗಳಿಗೆ ತಗಲುವ ಮಾಸಿಕ ವೆಚ್ಚ ಕ್ರಮವಾಗಿ 64,000 ರೂ., 87,000 ರೂ. ಹಾಗೂ 45,000 ದಿಂದ 95,000 ರೂ. ಇದೆ. ಈ ಯಾವ ಔಷಧಯನ್ನೂ ಭಾರತೀಯ ಕಂಪೆನಿಗಳು ಉತ್ಪಾದಿಸುತ್ತಿಲ್ಲ.

ಔಷಧಗಳು ದುಬಾರಿಯಾಗಲು ಕಂಪೆನಿಗಳು ಕೊಡುವ ಕಾರಣ- ಹೊಸ ಔಷಧ ಕಣಗಳ ಸಂಶೋಧನೆ, ಸೂತ್ರೀಕರಣ ಹಾಗೂ ಮಾರುಕಟ್ಟೆಗೆ ತರಲು ಅಂದಾಜು 3 ಶತ ಕೋಟಿ ಡಾಲರ್ ವೆಚ್ಚವಾಗುತ್ತದೆ. ಆದರೆ, ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಒಪ್ಪುವುದಿಲ್ಲ. ಸಂಶೋಧನೆ ಹಾಗೂ ಅಭಿವೃದ್ಧಿ ವೆಚ್ಚಕ್ಕೂ ಔಷಧದ ಬೆಲೆಗೂ ಯಾವುದೇ ಸಂಬಂಧವಿಲ್ಲ. ಬೆಲೆ ದುಬಾರಿಯಾಗಲು ಕಂಪೆನಿಗಳ ದುರಾಸೆ ಕಾರಣ ಎಂದು ಅದು ವಾದಿಸುತ್ತದೆ. ಕಂಪೆನಿಗಳಿಗೆ ನೆರವಾಗುವ ಇನ್ನೊಂದು ಅಂಶ-ಐಪಿಆರ್(ಇಂಟೆಲೆಕ್ಚುವಲ್ ಪ್ರಾಪರ್ಟಿ ರೈಟ್ಸ್, ಬೌದ್ಧಿಕ ಅಸ್ತಿ ಹಕ್ಕುಗಳು). ಕಳೆದ ಮೂರು ದಶಕಗಳಿಂದ ಫಾರ್ಮಾ ಕಂಪೆನಿಗಳು ಈ ಕಾಯ್ದೆಯನ್ನು ಬಲಪಡಿಸಲು ಸರಕಾರಗಳ ಮೇಲೆ ನಿರಂತರ ಒತ್ತಡ ಹೇರಿವೆ ಮತ್ತು ಹೇರುತ್ತಿವೆ. ಔಷಧವೊಂದರ ಪೇಟೆಂಟ್ ಅವಧಿ ಮುಗಿದ ಬಳಿಕ ಅದನ್ನು ಬೇರೆ ಕಂಪೆನಿಗಳು ಉತ್ಪಾದಿಸಬಹುದು ಇಲ್ಲವೇ ಜನರಿಕ್ ಔಷಧ ತಯಾರಿಸಬಹುದು. ಇದನ್ನು ತಡೆಯಲು ಕಂಪೆನಿಗಳು ಅಡ್ಡ ದಾರಿ ಹಿಡಿಯುತ್ತವೆ. ಕಡಿಮೆ ಬೆಲೆಯ ಔಷಧಗಳು ಅಥವಾ ಜನರಿಕ್ ಔಷಧಗಳು ಮಾರುಕಟ್ಟೆಗೆ ತಲುಪುವ ಮುನ್ನವೇ ಹೊಸ ಚಿಕಿತ್ಸಾ ವಿಧಾನವನ್ನು ಪರಿಚಯಿಸಿ, ಹಳೆಯ ಔಷಧಗಳನ್ನು ಅನಗತ್ಯಗೊಳಿಸಲಾಗುತ್ತದೆ. ಇಲ್ಲವೇ, ಔಷಧದ ಮೂಲ ಘಟಕಕ್ಕೆ ಬೇರೆ ಅಗತ್ಯ-ಅನಗತ್ಯ ಘಟಕವೊಂದನ್ನು ಸೇರಿಸಿ, ಅದಕ್ಕೆ ಪೇಟೆಂಟ್ ಪಡೆದು, ಬೇರೆ ಕಂಪೆನಿಗಳು ಬಳಸದಂತೆ ತಡೆಯಲಾಗುತ್ತದೆ. ಇದನ್ನು ಎವರ್‌ಗ್ರೀನಿಂಗ್ ಎನ್ನುತ್ತಾರೆ. ಇದರಿಂದ ಔಷಧಗಳ ಮೇಲಿನ ಪೇಟೆಂಟ್ ಹಿಡಿತ ಮುಂದುವರಿಯುತ್ತದೆ. ಫೀಜರ್‌ನ ಪೇಟೆಂಟ್ 2023ರಲ್ಲಿ, ನೊರ್ವಾಟಿಸ್‌ನದ್ದು 2027ರಲ್ಲಿ ಹಾಗೂ ಎಲಿ ಲಿಲಿಯ ಪೇಟೆಂಟ್ 2029ರಲ್ಲಿ ಅಂತ್ಯಗೊಳ್ಳುತ್ತದೆ. ಒಂದು ವೇಳೆ ಈ ಕಂಪೆನಿಗಳು ಎವರ್‌ಗ್ರೀನಿಂಗ್‌ನ ಮೊರೆ ಹೋದರೆ, 2029ರವರೆಗೆ ಔಷಧಗಳು ದುಬಾರಿಯಾಗಿಯೇ ಇರುತ್ತವೆ.

ಕ್ಯಾನ್ಸರ್ ಇಲ್ಲವೇ ಬೇರೆ ಗಂಭೀರ ಕಾಯಿಲೆಗಳಿಂದ ರೋಗಿಗಳ ಜೀವ ಹಾಗೂ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಅಪಾಯಕ್ಕೆ ಸಿಲುಕುತ್ತದೆ. ಇದು ಸಂವಿಧಾನದ ವಿಧಿ 21ರಡಿ ಕೊಡಮಾಡಿದ ಘನತೆಯಿಂದ ಜೀವಿಸುವ ಹಕ್ಕಿಗೆ ಧಕ್ಕೆ ತರುತ್ತದೆ. ಸುಪ್ರೀಂ ಕೋರ್ಟ್ ಕೂಡ ಬದುಕಿನ ಹಕ್ಕನ್ನು 'ಅತ್ಯಂತ ಅಮೂಲ್ಯ ಮಾನವ ಹಕ್ಕು' ಎಂದಿದೆ. ಆದರೆ, ಇಂಥ ಹಕ್ಕುಗಳನ್ನು ರಕ್ಷಿಸಬೇಕಾದ ಸರಕಾರದ ಪ್ರತಿಕ್ರಿಯೆ ನಿರಾಶಾದಾಯಕವಾಗಿದೆ. ಒಕ್ಕೂಟ ಸರಕಾರ ಅಳೆದು ಸುರಿದು ಏಳು ವರ್ಷಗಳ ಬಳಿಕ ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಯನ್ನು ಅಕ್ಟೋಬರ್ 2022ರಲ್ಲಿ ಪ್ರಕಟಿಸಿತು. ಅಗತ್ಯ ಔಷಧಗಳು ಕಡಿಮೆ ಬೆಲೆಯಲ್ಲಿ ಜನರ ಕೈಗೆ ಎಟಕುವಂತೆ ಮಾಡುವುದು ಇದರ ಉದ್ದೇಶ.

ಈ ಪಟ್ಟಿಯಲ್ಲಿ ಕ್ಷಯ ರೋಗದ ಔಷಧಗಳಾದ ಬೆಡಾಕ್ಟಿಲಿನ್ ಹಾಗೂ ಡೆಲಾಮನಿಡ್ ಸೇರಿದಂತೆ ಪೇಟೆಂಟ್ ಇರುವ ನಾಲ್ಕು ಔಷಧಗಳು ಇವೆ. ಈ ಎರಡು ಔಷಧಗಳ ಪೇಟೆಂಟ್ ಅವಧಿ ಜುಲೈ ಹಾಗೂ ಅಕ್ಟೋಬರ್ 2023ರಲ್ಲಿ ಅಂತ್ಯಗೊಳ್ಳಲಿದೆ. ಈ ಔಷಧಗಳನ್ನು ಬೆಲೆ ನಿಯಂತ್ರಣದಿಂದ ಹೊರಗಿಡುವುದರಿಂದ ರೋಗಿಗಳಿಗೆ ಹೆಚ್ಚು ಪ್ರಯೋಜನವಾಗುವ ಸಾಧ್ಯತೆ ಇಲ್ಲ. ಬದಲಾಗಿ, ಈ ಔಷಧಗಳ ತಯಾರಿಕೆಗೆ ದೇಶಿ ಕಂಪೆನಿಗಳಿಗೆ ಕಡ್ಡಾಯ ಪರವಾನಿಗೆ ನೀಡಬಹುದಿತ್ತು. ಆದರೆ, ಜನರಿಗೆ ಅಗತ್ಯ ಔಷಧಗಳನ್ನು ಕಡಿಮೆ ದರದಲ್ಲಿ ನೀಡಲು ನೆರವಾಗುವ ರಾಷ್ಟ್ರೀಯ ಪಟ್ಟಿಯನ್ನು ಪ್ರಕಟಿಸಲು 7 ವರ್ಷ ತೆಗೆದುಕೊಂಡಿದ್ದೇಕೆ ಎನ್ನುವುದು ಯಕ್ಷಪ್ರಶ್ನೆಯಾಗೇ ಉಳಿಯಲಿದೆ.

ನಿರ್ಲಕ್ಷ್ಯ-ನಿಷ್ಕ್ರಿಯತೆ:
ಕೋವಿಡ್ ಸಾಂಕ್ರಾಮಿಕದಿಂದ ಅಪಾರ ಸಾವುನೋವು ಸಂಭವಿಸಿದ್ದರೂ, ಪೇಟೆಂಟ್ ಇರುವ ಅಗತ್ಯ ಔಷಧಗಳ ಉತ್ಪಾದನೆಗೆ ಕಡ್ಡಾಯ ಪರವಾನಿಗೆ ನೀಡಲು ಒಕ್ಕೂಟ ಸರಕಾರ ಮುಂದಾಗಲಿಲ್ಲ. ಸಾರ್ವಜನಿಕ ಆರೋಗ್ಯ ಸಂಕಷ್ಟವನ್ನು ಪರಿಹರಿಸಲು ಕಡ್ಡಾಯ ಪರವಾನಿಗೆ ನೀಡುವ ಬಗ್ಗೆ ಪರಿಶೀಲಿಸಬೇಕೆಂದು ದಿಲ್ಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಹೇಳಿದರೂ, ಸರಕಾರ ಅಲುಗಾಡಲಿಲ್ಲ. ಲಾಭಬಡುಕ ಕಂಪೆನಿಗಳಿಗೆ ಕಡಿವಾಣ ಹಾಕಲಿಲ್ಲ. ಇದು ಸರಕಾರಕ್ಕೆ ಅಸಾಧ್ಯವಾದ ಕೆಲಸವೇನೂ ಆಗಿರಲಿಲ್ಲ. ಇದಕ್ಕೆ ಪೂರ್ವ ನಿದರ್ಶನವೆಂದರೆ, ಹೈದರಾಬಾದ್ ಮೂಲದ ನ್ಯಾಟ್ಕೋ ಫಾರ್ಮಾಕ್ಕೆ ಯುಪಿಎ ಸರಕಾರ 2012ರಲ್ಲಿ ನೀಡಿದ ಕಡ್ಡಾಯ ಪರವಾನಿಗೆ. ಬೇಯರ್ ಪೇಟೆಂಟ್ ಹೊಂದಿದ್ದ ಮೂತ್ರಜನಕಾಂಗದ ಕ್ಯಾನ್ಸರ್ ಔಷಧ ಸೋರೆಫಾನಿಬ್ ಟೊಸೈಲೇಟ್ (ಬ್ರಾಂಡ್ ಹೆಸರು ನೆಕ್ಸಾವರ್) ನ್ನು ನ್ಯಾಟ್ಕೋ ಉತ್ಪಾದಿಸುತ್ತಿತ್ತು. ಇದೊಂದು ಅತೀ ದುಬಾರಿ ಔಷಧ. ಕಡ್ಡಾಯ ಪರವಾನಿಗೆ ನೀಡಿದ ಬಳಿಕ ಔಷಧದ ಮಾಸಿಕ ವೆಚ್ಚ 2,80,000 ರೂ.ನಿಂದ 8,800 ರೂ.ಗೆ ಇಳಿಯಿತು! ಶೈಲಾಕ್‌ನ ರಕ್ತಪಿಪಾಸುತನ ಇದಕ್ಕೆ ಹೋಲಿಸಿದರೆ ಏನೇನೂ ಅಲ್ಲ. ನೆಕ್ಸಾವರ್ ಬಳಿಕ ಎಂಥ ಸಂಕಷ್ಟದಲ್ಲೂ ಸರಕಾರ ಇನ್ನೊಂದು ಕಡ್ಡಾಯ ಪರವಾನಿಗೆ ನೀಡಿದ ಉದಾಹರಣೆ ಇಲ್ಲ.

ಉಳಿದ ದಾರಿಗಳೇನು?:
ದುಬಾರಿ ಬೆಲೆಯ ಔಷಧಗಳನ್ನು ಉತ್ಪಾದಿಸಲು ದೇಶಿ ಕಂಪೆನಿಗಳಿಗೆ ಪೇಟೆಂಟ್ ಕಾಯ್ದೆಯ ವಿಭಾಗ 84 ಹಾಗೂ 92ರಡಿ ಕಡ್ಡಾಯ ಪರವಾನಿಗೆ ನೀಡುವುದು. ಈ ಕಡ್ಡಾಯ ಪರವಾನಿಗೆಯು ಕಂಪೆನಿಗಳ ಏಕಸ್ವಾಮ್ಯವನ್ನು ಮುರಿದು, ದೇಶಿ ಕಂಪೆನಿಗಳಿಗೆ ಜನರಿಕ್ ಔಷಧಗಳನ್ನು ತಯಾರಿಸಲು ಅವಕಾಶ ಮಾಡಿಕೊಡುತ್ತದೆ. ಅದೇ ರೀತಿ ಸರಕಾರ ವಿಭಾಗ 100ರ ಅಡಿ ಪೇಟೆಂಟ್ ಹೊಂದಿರುವವರ ಅನುಮತಿಯ ಅಗತ್ಯವಿಲ್ಲದೆ ಉತ್ಪನ್ನಗಳನ್ನು ಬಳಸಿಕೊಳ್ಳಲು ಅವಕಾಶ ನೀಡಬಹುದು. ಒಂದು ವೇಳೆ ದೇಶಿ ಕಂಪೆನಿಗಳು ಕಡ್ಡಾಯ ಪರವಾನಿಗೆ ಪಡೆಯಲು ಮುಂದಾಗದಿದ್ದಲ್ಲಿ, ವಿಭಾಗ 100 ಉಪಯುಕ್ತವಾಗಲಿದೆ. ರಾಜ್ಯಸಭೆಯ ಆರೋಗ್ಯ ಸ್ಥಾಯಿ ಸಮಿತಿ ಪ್ರಕಾರ, ವಿಭಾಗ 100ರ ನಿಯಮಗಳನ್ನು ಬಳಸುವುದು ಅತ್ಯಂತ ಸೂಕ್ತ ಮಾರ್ಗ. ಆದರೆ, ಲಾಭಬಡುಕ ಕಂಪೆನಿಗಳಿಗೆ ಕಡಿವಾಣ ಹಾಕುವ ಇಚ್ಛಾಶಕ್ತಿಯನ್ನು ಸರಕಾರ ತೋರಿಸುವುದೇ? ಉತ್ತರ ಆಶಾದಾಯಕವಾಗಿಲ್ಲ.

ಒಂದು ಮನವಿ:
ಇತ್ತೀಚೆಗೆ ಫೇಸ್‌ಬುಕ್ ಸ್ನೇಹಿತರಾದ ರವಿಕಿರಣ್, 'ಥಿಯರಿ ಆಫ್ ಫೋರ್ ಹ್ಯಾಂಡ್ ಕರ್ಚೀಫ್ಸ್' ಎಂಬ ಚಿಂತನೆ ಮುಂದಿಟ್ಟಿದ್ದರು. ಅವರ ಸಂಶೋಧನೆ ಪ್ರಕಾರ, ಬೆಂಗಳೂರಿನಲ್ಲಿ ಅಂದಾಜು 10 ಲಕ್ಷ ಸಾಫ್ಟ್ ವೇರ್ ಉದ್ಯೋಗಿಗಳಿದ್ದಾರೆ. ಅವರೆಲ್ಲರೂ ವರ್ಷಕ್ಕೆ ಸರಾಸರಿ 3 ಬ್ರಾಂಡೆಡ್ ಕರವಸ್ತ್ರ ಖರೀದಿಸುತ್ತಾರೆ ಎಂದುಕೊಳ್ಳೋಣ. ಇದಕ್ಕೆ ಅವರು 250-400 ರೂ. ವೆಚ್ಚ ಮಾಡುತ್ತಾರೆ. ಅದರ ಬದಲು 4 ಖಾದಿ ಕರವಸ್ತ್ರ ಖರೀದಿಸಿದರೆ, ಒಂದು ಸಾವಿರ ನೇಕಾರರಿಗೆ ಉದ್ಯೋಗ ಲಭ್ಯವಾಗುತ್ತದೆ. ಅಂದಾಜು, 5,000 ಮಂದಿಗೆ ನೆರವಾಗುತ್ತದೆ.