ಕಾವೇರಿ ವನ್ಯಧಾಮದಲ್ಲಿ ಮೊದಲ ಅಲ್ಬಿನೊ ಕಾಡುನಾಯಿ ಪತ್ತೆ

Update: 2023-01-27 03:37 GMT

ಬೆಂಗಳೂರು: ಕಾವೇರಿ ವನ್ಯಧಾಮದ ಪರಿಸರದಲ್ಲಿ ಮೊಟ್ಟಮೊದಲ ಬಾರಿಗೆ ಆಲ್ಬಿನೊ ಧೋಲ್ ಅಥವಾ ಏಷ್ಯಾಟಿಕ್ ವೈಲ್ಡ್‌ಡಾಗ್ (ಬಿಳಿರೋಗಪೀಡಿತ ಕಾಡುನಾಯಿ) ಇರುವಿಕೆಯನ್ನು ವನ್ಯಜೀವಿ ಸಂಶೋಧಕರು ದಾಖಲಿಸಿದ್ದಾರೆ.

ಕಾವೇರಿ ವನ್ಯಧಾಮದ ಸಂಗಮ ಪ್ರದೇಶದಲ್ಲಿ ಅಲ್ಬಿನೊ ಧೋಲ್‌ನ ಚಿತ್ರವನ್ನು ಸರೆಹಿಡಿಯಲಾಗಿದೆ. ನೇಚರ್ ಕನ್ಸರ್ವೇಷನ್ ಫೌಂಡೇಷನ್ ಮತ್ತು ಹೊಳೆಮಟ್ಟಿ ನೇಚರ್ ಫೌಂಡೇಷನ್‌ನ ಸಂಜಯ್ ಗುಬ್ಬಿ ನೇತೃತ್ವದ ವನ್ಯ ಸಂಶೋಧಕರ ತಂಡ ಈ ಚಿತ್ರ ಸೆರೆ ಹಿಡಿದಿದೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಅರಣ್ಯ ಇಲಾಖೆಯ ಸಿಬ್ಬಂದಿ ಕೂಡಾ ಈ ಪ್ರಾಣಿ ತಮ್ಮ ಕಣ್ಣಿಗೆ ಬಿದ್ದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ದೇಹ ಮತ್ತು ಕೂದಲು ಬಿಳಿಯಾಗುವ ಹಾಗೂ ಕಣ್ಣು ತಾಮ್ರವರ್ಣದ್ದಾಗಿರುವ ಒಂದು ರೋಗವನ್ನು ಅಲ್ಬಿನಿಸಂ ಎಂದು ಕರೆಯಲಾಗುತ್ತದೆ. ಸಸ್ತನಿಗಳು, ಪಕ್ಷಿಗಳು ಹಾಗೂ ಸರೀಸೃಪಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಭಾರತ ಮತ್ತು ಈ ಪ್ರದೇಶದ 11 ದೇಶಗಳ ಕಾಡುನಾಯಿಗಳಲ್ಲಿ ಇದು ಕಾಣಿಸಿಕೊಂಡಿರುವುದು ಇದೇ ಮೊದಲು ಎಂದು ಸಂಜಯ್ ಗುಬ್ಬಿ ಹೇಳಿದ್ದಾರೆ. ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಶೆಡ್ಯೂಲ್ 2ರ ಅಡಿಯಲ್ಲಿ ಕಾಡುನಾಯಿಗಳನ್ನು ಸಂರಕ್ಷಿಸಲಾಗಿದೆ.

ಅಲ್ಬಿನೊ ಧೋಲ್ ಭಾರತದ ಕಾಡುಪ್ರದೇಶದಲ್ಲಿ ಇದುವರೆಗೆ ಪತ್ತೆಯಾದ ದಾಖಲೆಗಳಿಲ್ಲ. ಆದರೆ ರೋಗಲಕ್ಷಣ ಹೊಂದಿದ್ದ ಒಂದು ಕಾಡುನಾಯಿ ಕೊಯಮತ್ತೂರಿನ ಗಡ್ಡೇಸಾಲ್ ಪ್ರದೇಶದಲ್ಲಿ 1936ರಲ್ಲಿ ಕಂಡುಬಂದಿತ್ತು ಎಂದು ಬೇಟೆಗಾರ, ನಿಸರ್ಗಪ್ರೇಮಿ, ಕಾಫಿ ಪ್ಲಾಂಟರ್ ಸ್ಕಾಟ್ಲೆಂಡ್‌ನ ಆರ್.ಸಿ.ಮೋರಿಸ್ ಹೇಳಿದ್ದರು. ಗುಬ್ಬಿ ಹಾಗೂ ಅವರ ತಂಡ ಕಳೆದ 15 ವರ್ಷಗಳಿಂದ ಬಂಡೀಪುರ, ನಾಗರಹೊಳೆ ಹಾಗೂ ಇತರ ಪ್ರದೇಶಗಳಲ್ಲಿ ಪ್ರಾಣಿವೈವಿಧ್ಯದ ಸಂಶೋಧನೆಯಲ್ಲಿ ತೊಡಗಿದೆ.

Similar News