ತಗ್ಗಿಲ್ಲ ಝಮೀರ್ ಬಲ; ‘ಮೈದಾನ’ದಲ್ಲಿ ಜೆಡಿಎಸ್-ಕಾಂಗ್ರೆಸ್ ಬಲಾಬಲ

Update: 2023-01-27 08:45 GMT

ಪಕ್ಷ ಬದಲಿಸಿದರೂ ಪ್ರಭಾವ ಉಳಿಸಿಕೊಂಡ ಝಮೀರ್‌ಗೆ ಸವಾಲುಗಳೇನು? ಏನಿರಲಿದೆ, ಸೋಲಿಸಲೇ ಬೇಕೆಂಬ ಜಿದ್ದಿಗೆ ಬಿದ್ದಿರುವ ಜೆಡಿಎಸ್ ರಣತಂತ್ರ? ಬೆಂಬಲಕ್ಕಿದ್ದ ಗೋವಿಂದರಾಜು ನಡೆ ಮುಳುವಾದೀತೇ ಚುನಾವಣೆ ಯಲ್ಲಿ? ಚಾಮರಾಜಪೇಟೆಯಲ್ಲಿ ಗೆಲ್ಲಲು ಅಸಲೀ ಅಸ್ತ್ರ ಪ್ರಯೋಗಿಸಲಿದೆಯೆ ಬಿಜೆಪಿ?

ಹಳೆಯ ಬೆಂಗಳೂರಿನ ಪ್ರಮುಖ ಕ್ಷೇತ್ರಗಳಲ್ಲಿ ಒಂದು ಚಾಮರಾಜಪೇಟೆ. 42ಕ್ಕೂ ಹೆಚ್ಚು ಕೊಳೆಗೇರಿ ಗಳಿರುವ, ಬಡ, ಕೆಳ ಮಧ್ಯಮ ಮತ್ತು ಮಧ್ಯಮ ವರ್ಗದ ಮತದಾರರೇ ಹೆಚ್ಚಿರುವ ಕ್ಷೇತ್ರವಿದು. ಅಲ್ಪಸಂಖ್ಯಾತರ ಮತಗಳೇ ನಿರ್ಣಾಯಕವಾಗಿರುವ ಚಾಮರಾಜಪೇಟೆಯಲ್ಲಿ ಕಳೆದ ಮೂರು ಅವಧಿಗಳಿಗೆ ಝಮೀರ್ ಅಹಮದ್ ಖಾನ್ ತಮ್ಮ ವರ್ಚಸ್ಸು ಕಾಪಾಡಿ ಕೊಂಡು ಬಂದಿದ್ದಾರೆ. ಪಕ್ಷ ಬದಲಿಸಿದ ಮೇಲೂ ಮತದಾರರ ನಿಷ್ಠೆ ಅವರೊಂದಿಗೆ ಬಲವಾಗಿದೆ ಎಂಬುದೇ ಇದಕ್ಕೆ ಸಾಕ್ಷಿ.

ಆದರೆ ಪ್ರತಿಷ್ಠೆಯ ಕಣವಾಗಿರುವ ಈ ಕ್ಷೇತ್ರದಲ್ಲಿ ಇದೇಮೊದಲ ಬಾರಿ ಚುನಾವಣಾ ಸಮರಕ್ಕೆ ಇಳಿಯಲು ಸಜ್ಜಾಗು ತ್ತಿರುವ ಆಮ್ ಆದ್ಮಿ ಪಕ್ಷವೂ ಸೇರಿದಂತೆ ಮೂರು ಪ್ರಮುಖ ಪಕ್ಷಗಳು ಕೂಡ ತೀವ್ರ ಸ್ಪರ್ಧೆ ಒಡ್ಡುವ ಅಭ್ಯರ್ಥಿಗಳೊಂದಿಗೆ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಸಜ್ಜಾಗುತ್ತಿವೆ.

2.16 ಲಕ್ಷ ಮತದಾರರಿರುವ ಚಾಮರಾಜಪೇಟೆಯಲ್ಲಿ ಏಳು ವಾರ್ಡ್‌ಗಳಿವೆ. ಪಾದರಾಯನಪುರ, ಕೆ.ಆರ್. ಮಾರು ಕಟ್ಟೆ, ಜಗಜೀವನ್ ರಾಮನಗರ, ಚಾಮರಾಜಪೇಟೆ, ಆಝಾದ್ ನಗರ, ರಾಯಪುರ ಹಾಗೂ ಛಲವಾದಿ ಪಾಳ್ಯ. ಈ ಎಲ್ಲ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಮೂರು ವಾರ್ಡ್ ಗಳಲ್ಲಿ ತನ್ನ ಪ್ರಭಾವ ಕಾಪಾಡಿಕೊಂಡಿದ್ದರೆ, ಉಳಿದ ನಾಲ್ಕು ವಾರ್ಡ್‌ಗಳನ್ನು ಜೆಡಿಎಸ್ ಮತ್ತು ಬಿಜೆಪಿ ಸಮಾನವಾಗಿ ಕಾಪಾಡಿಕೊಂಡು ಬಂದಿವೆ.

ಇಲ್ಲಿ ಕಾಂಗ್ರೆಸ್‌ನದ್ದೇ ಪಾರುಪತ್ಯವೇ?

1957ರಿಂದಲೂ ಕಾಂಗ್ರೆಸ್ ಪಕ್ಷ ಚಾಮರಾಜಪೇಟೆ ಕ್ಷೇತ್ರದ ಮೇಲೆ ತನ್ನ ಹಿಡಿತ ಸಾಧಿಸುತ್ತಾ ಬಂದಿದೆ. 1957ರಲ್ಲಿ ಲಕ್ಷ್ಮಿ ದೇವಿ ರಾಮಣ್ಣ ಪಕ್ಷೇತರ ಅಭ್ಯರ್ಥಿ ರಂಗಯ್ಯನಾಯ್ಡು ಅವರನ್ನು ಸೋಲಿಸಿದ್ದರು. ಇದಾದ ಬಳಿಕ 1962ರಲ್ಲಿ ಆರ್. ದಯಾನಂದ ಸಾಗರ್, 1972ರಲ್ಲಿ ಸನಾದಿ ಇಮಾಮ್ ಗೌಸಾಹೆಬ್ ಜಯಗಳಿಸಿದ್ದರು. ಗೋಪಾಲ್ ಮುಕುಂದ್ ರಾನಡೆ 1983, 1985 ಮತ್ತು 1989ರಲ್ಲಿ ಸತತ ಮೂರು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಇಂದಿನ ಬಿಜೆಪಿ, ಆಗಿನ ಜನಸಂಘ 1967ರಲ್ಲಿ ಎಸ್. ಶಂಕರಪ್ಪ ಅವರ ಮೂಲಕ ಖಾತೆ ತೆರೆದಿತ್ತು. ಇದಾದ ಮೇಲೆ 1999 ಮತ್ತು 2004ರಲ್ಲಿ ವಿವೇಕಾನಂದ ವೈದ್ಯರು ಬಿಜೆಪಿಯಿಂದ ಎರಡು ಬಾರಿ ಜಯಗಳಿಸಿದ್ದರು. ಝಮೀರ್ ಅಹಮದ್ ಖಾನ್ 2 ಬಾರಿ ಜೆಡಿಎಸ್‌ಗೆ ಗೆಲುವು ತಂದು ಕೊಟ್ಟು, ಕಾಂಗ್ರೆಸ್ ನಾಯಕರಾದರು. ಅವರ ಮೂಲಕ ಈ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಪಾರುಪತ್ಯ ಮುಂದುವರಿದಿದೆ.

ಕೆಲಸಗಳು ಆಗಿಲ್ಲ

ಝಮೀರ್ ಅಹಮದ್ ಖಾನ್ ವೈಯಕ್ತಿಕ ವರ್ಚಸ್ಸು ಜನರನ್ನು ಕಟ್ಟಿಹಾಕುವಂತಹದ್ದು. ಜೆಡಿಎಸ್‌ನಿಂದ ಎರಡು ಬಾರಿ ಶಾಸಕರಾದ ಝಮೀರ್ ರಾಜಕೀಯ ಸ್ಥಿತ್ಯಂತರದಲ್ಲಿ ಪಕ್ಷ ಬದಲಾಯಿಸಬೇಕಾಯಿತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದರು. ಹಿಂದಿನ ಎರಡು ಚುನಾವಣೆಗಳಲ್ಲಿ ಪಡೆದ ಮತಗ ಳಿಗಿಂತ ಅತೀ ಹೆಚ್ಚು ಮತಗಳಿಂದ ಜಯ ಗಳಿಸಿದರು. 80,000 ಮುಸ್ಲಿಮ್ ಮತದಾರರಿರುವ ಈ ಕ್ಷೇತ್ರವನ್ನು ಝಮೀರ್ ಅವರಿಂದ ಅಷ್ಟು ಸುಲಭವಾಗಿ ಕಸಿದುಕೊಳ್ಳಲಾಗದು ಎಂಬುದು ಸರಳ ಲೆಕ್ಕಾಚಾರ.

2008ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದಾಗ 43,004 ಮತ ಪಡೆದು ಬಿಜೆಪಿಯ ವಿ.ಎಸ್. ಶಾಮಸುಂದರ್ ಅವರನ್ನು ಸೋಲಿಸಿದ್ದರು. ಆಗ ಕಾಂಗ್ರೆಸ್‌ನಿಂದ ಸೈಯದ್ ಅಹಮದ್ ಸ್ಪರ್ಧಿಸಿ ಕೇವಲ 15,229 ಮತ ಗಳಿಸಿದ್ದರು.

2013ರಲ್ಲಿ ಜೆಡಿಎಸ್‌ನಿಂದಲೇ ಸ್ಪರ್ಧಿಸಿದ್ದ ಝಮೀರ್ 56,339 ಮತ ಪಡೆದು ಜಯ ಗಳಿಸಿದ್ದರು. ಆಗ ಕಾಂಗ್ರೆಸ್ ಕೂಡ ಮುಸ್ಲಿಮ್ ಅಭ್ಯರ್ಥಿಯಾಗಿ ಜಿ.ಎ. ಬಾವ ಅವರನ್ನು ಕಣಕ್ಕೆ ಇಳಿಸಿತ್ತು. ಅವರಿಗೆ 26,177 ಮತಗಳು ಲಭಿಸಿತ್ತು. ಬಿಜೆಪಿಯ ಬಿ.ವಿ. ಗಣೇಶ್ ಮೂರನೆಯ ಸ್ಥಾನಕ್ಕೆ ತೃಪ್ತರಾಗ ಬೇಕಾಯಿತು.

ಪಕ್ಷಾಂತರದ ಬಳಿಕ 2018ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಭಾರೀ ಮತಗಳಿಂದ, ಅಂದರೆ 65,339 ಮತ ಗಳಿಸಿ ಝಮೀರ್ ಚಾಮರಾಜಪೇಟೆಯನ್ನು ಸತತ ಮೂರನೆಯ ಬಾರಿಗೆ ತಮ್ಮದಾಗಿಸಿಕೊಂಡರು. ಈ ಬಾರಿ ಬಿಜೆಪಿ ತನ್ನ ಮತದಪಾಲನ್ನು ಅಧಿಕಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಅಭ್ಯರ್ಥಿ ಎಂ.ಲಕ್ಷ್ಮೀ ನಾರಾಯಣ 32,202 ಮತಗಳನ್ನು ಗಳಿಸಿ 2ನೇ ಸ್ಥಾನಕ್ಕೆ ಬಂದಿದ್ದರೆ, ಜೆಡಿಎಸ್‌ನ ಮುಸ್ಲಿಮ್ ಅಭ್ಯರ್ಥಿ ಅಲ್ತಾಫ್ ಖಾನ್ 19,393 ಮತಗಳನ್ನು ಗಳಿಸಿದ್ದರು.

ಆದರೆ ಈ ಬಾರಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳುಆಗಿಲ್ಲ ಎಂಬುದು ಕ್ಷೇತ್ರದ ಮತದಾರರ ದೂರು. ರಸ್ತೆ ವಿಸ್ತರಣೆ ಯಾಗದೆ ಸಂಚಾರ ಸಮಸ್ಯೆ ತೀವ್ರವಾಗಿದೆ. ತ್ಯಾಜ್ಯ ವಿಲೇವಾರಿ ಸಮಸ್ಯೆ ಬಹಳ ಕಾಲದಿಂದ ಉಳಿದಿದೆ. ಕಿರಿದಾದ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದ್ದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಇತ್ತೀಚೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಗೋವಿಂದರಾಜು ಕೂಡ, ಕ್ಷೇತ್ರದಲ್ಲಿ ನಿರೀಕ್ಷಿತ ಕೆಲಸಗಳು ಆಗಿಲ್ಲ ಎಂಬ ಕಾರಣಕ್ಕೆ ಪಕ್ಷ ತೊರೆಯುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಪಕ್ಷ ಬದಲಾವಣೆಗೆ ಕಾರಣವೇನೆ ಇದ್ದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಕೊಳೆಗೇರಿಗಳ ಅಭಿವೃದ್ಧಿ, ನೀರಿನ ಸಮಸ್ಯೆ, ಕ್ಷೇತ್ರದ ನಿವಾಸಿಗಳಿಗೆ ಹಕ್ಕು ಪತ್ರವಿತರಣೆಯ ವಿಷಯದಲ್ಲಿ ಅಸಮಾಧಾನ ದಟ್ಟವಾಗಿಯೇ ಇದೆ.

ಇಷ್ಟಾಗಿಯೂ ಝಮೀರ್ ಅವರ ಮೇಲಿನ ಜನರ ವಿಶ್ವಾಸ ಕಡಿಮೆಯಾಗಿಲ್ಲ. ಕೊರೋನ ಸಂದರ್ಭದಲ್ಲಿ ಸ್ವತಃ ಝಮೀರ್‌ಅಹಮದ್ ಖಾನ್ ಅವರ ಸ್ಪಂದನೆ ಹಾಗೂ ಪರಿಹಾರ ಕಾರ್ಯಗಳು ಇಂದಿಗೂ ಅವರನ್ನು ಕಾಯುತ್ತಿವೆ.

ಬಿಜೆಪಿ ತಂತ್ರ, ಜೆಡಿಎಸ್ ಮಂತ್ರ

ಜೆಡಿಎಸ್ ಭದ್ರಕೋಟೆಯಾಗಿದ್ದ ಚಾಮರಾಜಪೇಟೆ ಈಗ ಕಾಂಗ್ರೆಸ್‌ನ ಕೈ ಸೇರಿದೆ. ಅದನ್ನು ಕಸಿದುಕೊಳ್ಳುವುದಕ್ಕೆ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಶತಾಯಗತಾಯ ಪ್ರಯತ್ನ ನಡೆಸಲು ಸಜ್ಜಾಗಿವೆ.

ಬಿಜೆಪಿ ಈದ್ಗಾ ಮೈದಾನದ ವಿಷಯದ ಮೂಲಕ ಕೋಮು ವಾದ ರಾಜಕಾರಣದ ಕಿಡಿ ಸಿಡಿಸಲು ನೋಡಿದ್ದು ಇದೇ ಕಾರಣಕ್ಕೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಕಾಂಕ್ಷಿ ಯಾಗಿದ್ದ ಲಹರಿ ವೇಲು, ಪಕ್ಷಕ್ಕೆ ಹೊಸದಾಗಿ ಸೇರ್ಪಡೆಯಾಗಿ ಈ ಬಾರಿ ವಿವಾದಕ್ಕೆ ಕಾರಣವಾಗಿರುವ ಸೈಲೆಂಟ್ ಸುನೀಲ್ ಎಲ್ಲರೂ ಚಾಮರಾಜಪೇಟೆಯಲ್ಲಿ ಒಂದಲ್ಲ ಒಂದು ಚಟುವಟಿ ಕೆಯ ಮೂಲಕ ಸಕ್ರಿಯರಾಗಿರುವುದು ಇದಕ್ಕೆ ಸಾಕ್ಷಿ. ಇವರಿಬ್ಬರ ಜೊತೆ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಅಂಬೇಡ್ಕರ್ ಸೇನೆಯ ಸುನೀಲ್ ಬಾಬು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಮುಸ್ಲಿಮ್ ಸಮುದಾಯದ ಬಳಿಕ ಅತ್ಯಂತ ನಿರ್ಣಾಯಕ ವಾಗಬಹುದಾದ 65,000 ಮತಗಳಿರುವ ಪರಿಶಿಷ್ಟ ಜಾತಿ ಮತ್ತು ಪಂಗಡ ಮತದಾರರು ಈ ಕ್ಷೇತ್ರದಲ್ಲಿದ್ದಾರೆ. ಈ ಮತಗಳನ್ನು ಹಿಡಿಯುವ-ಒಡೆಯುವ ತಂತ್ರಗಳನ್ನು ಬಿಜೆಪಿ ಮತ್ತು ಜೆಡಿಎಸ್ ಮಾಡುತ್ತಿವೆ. ತಮ್ಮ ಹಿಡಿತಕ್ಕೆ ತೆಗೆದು ಕೊಳ್ಳುವ ಪ್ರಯತ್ನ ಜೆಡಿಎಸ್‌ನದ್ದಾದರೆ, ಒಡೆಯುವುದು ಬಿಜೆಪಿಯ ತಂತ್ರ.

ಹಲವು ಆಟಗಾರರು, ಗೆಲ್ಲುವವರು ಯಾರು?

ಜೆಡಿಎಸ್‌ನಲ್ಲಿ ಗೋವಿಂದರಾಜು ಪ್ರವೇಶದಿಂದ ಟಿಕೆಟ್‌ಗೆ ಸ್ಪರ್ಧೆ ಹೆಚ್ಚಿದಂತಾಗಿದೆ. ಅಲ್ತಾಫ್ ಖಾನ್ ಕೂಡ ಟಿಕೆಟ್‌ನಿರೀಕ್ಷೆಯಲ್ಲಿರುವ ಅಭ್ಯರ್ಥಿ. ಸಿಎಂ ಇಬ್ರಾಹಿಂ, ಕುಮಾರ ಸ್ವಾಮಿ ಮತ್ತು ದೇವೇಗೌಡರ ಸಮ್ಮುಖದಲ್ಲೇ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿರುವ ಗೋವಿಂದರಾಜು ತಾವೇ ಸ್ಪರ್ಧಾಳು ಎಂದು ಬಿಂಬಿಸಿಕೊಂಡಿದ್ದಾರೆ. ಕಳೆದ ಬಾರಿಯೂ ಜೆಡಿಎಸ್ ಅಭ್ಯರ್ಥಿ ಎಂಬ ಉತ್ಸಾಹದಲ್ಲಿದ್ದು ಟಿಕೆಟ್ ವಂಚಿತ ರಾದ ಇಮ್ರಾನ್ ಪಾಷಾ ಕೂಡ ತಮ್ಮದೇ ದಾಳ ಉರುಳಿಸು ವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ.

ಈ ಮೂರು ಪ್ರಮುಖ ಪಕ್ಷಗಳ ಜೊತೆಗೆ ಆಮ್ ಆದ್ಮಿ ಪಕ್ಷವೂ ಈ ಬಾರಿ ಸ್ಪರ್ಧೆಗೆ ತುರುಸಿನ ಸಿದ್ಧತೆ ನಡೆಸಿದೆ. ಜಗದೀಶ್‌ಅವರು ಆಪ್‌ನ ಅಭ್ಯರ್ಥಿಯಾಗಿ ಹೊರಹೊಮ್ಮುವ ಸಾಧ್ಯತೆ ಗಳು ಚರ್ಚೆಯಾಗುತ್ತಿವೆ. ಆದರೆ ಹಲವು ಭಿನ್ನಾ ಭಿಪ್ರಾಯಗಳ ನಡುವೆಯೂ ಜನರ ಹೃದಯದಲ್ಲಿ ಆಳವಾಗಿ ಬೇರುಬಿಟ್ಟಿರುವ ಝಮೀರ್ ಅಹಮದ್ ಖಾನ್ ವರ್ಚಸ್ಸಿಗೆ ಘಾಸಿ ಉಂಟು ಮಾಡಬಹುದಾದ ಪ್ರಭಾವಿ ಅಭ್ಯರ್ಥಿ ಕಾಣಿಸುತ್ತಿಲ್ಲ ಎಂಬುದು ಕ್ಷೇತ್ರದ ರಾಜಕೀಯ ಆಸಕ್ತರ ನಡುವೆ ಚರ್ಚೆಗೆ ಕಾರಣ ವಾಗಿದೆ.

ಹಲವು ಕಾರಣಗಳಿಗೆ ಈ ಕ್ಷೇತ್ರದಲ್ಲಿ ಹಿಡಿತ ಸಾಧಿಸುವುದಕ್ಕೆ ಬಿಜೆಪಿ ಪ್ರಯತ್ನಿಸುತ್ತಲೇ ಇದೆ. ಜೆಡಿಎಸ್ ಈ ಕ್ಷೇತ್ರವನ್ನು ಮತ್ತೆ ತನ್ನದಾಗಿಸಿಕೊಳ್ಳುವುದಕ್ಕೆ ಪಣ ತೊಟ್ಟಿದೆ. ಆದರೆ ಝಮೀರ್ ವರ್ಚಸ್ಸಿನ ಮೇಲೆ ವಿಶ್ವಾಸವಿಟ್ಟಿರುವ ಕಾಂಗ್ರೆಸ್ ನಿರಾತಂಕದಿಂದಿದೆ.

ಕ್ಲಿಕ್ ಮಾಡಿ: ಐದನೇ ಬಾರಿ ಗೆಲ್ಲುವ ವೆಂಕಟಶಿವಾರೆಡ್ಡಿ ಕನಸಿಗೆ ಸಾಥ್ ನೀಡಲಿದೆಯೆ BJP ? 

Full View