ಗದಗ | ವಿವಾಹ ಪೂರ್ವ ಆಚರಣೆಗಾಗಿ ದೇವಸ್ಥಾನಕ್ಕೆ ತೆರಳಿದ್ದ ದಲಿತ ಕುಟುಂಬಕ್ಕೆ ಪ್ರವೇಶ ನಿರಾಕರಣೆ: ಆರೋಪ

► ಗ್ರಾಮದ ಅಂಗಡಿಗಳನ್ನು ಬಂದ್ ಮಾಡಿ ಅಸ್ಪೃಶ್ಯತೆ ಆಚರಣೆ ► "ದಲಿತ ಕುಟುಂಬಕ್ಕೆ ಬೆಂಬಲ ನೀಡಿದರೆ 2,500 ರೂ. ದಂಡ, ಬೆದರಿಕೆ"

Update: 2023-01-27 08:41 GMT

ಗದಗ: ವಿವಾಹ ಪೂರ್ವ ಆಚರಣೆಗಾಗಿ ತೆರಳಿದ್ದ ದಲಿತ ಕುಟುಂಬಕ್ಕೆ ದೇವಸ್ಥಾನ ಪ್ರವೇಶ ನಿರಾಕರಿಸಿ, ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡಿ ಅಸ್ಪೃಶ್ಯತೆ ಆಚರಿಸಿರುವ ಘಟನೆ ಗದಗ ಜಿಲ್ಲೆಯ ಶ್ಯಾಗೋಟಿ ಗ್ರಾಮದಲ್ಲಿ ಜ.24ರಂದು ನಡೆದಿರುವುದಾಗಿ ವರದಿಯಾಗಿದೆ.

ಶ್ಯಾಗೋಟಿ ಗ್ರಾಮದ ರೈತ ಶರಣು ಮಾದರ ಕುಟುಂಬಕ್ಕೆ ದೇವಸ್ಥಾನ ಪ್ರವೇಶ ನಿರಾಕರಿಸಿರುವುದಾಗಿ ತಿಳಿದುಬಂದಿದೆ. ಶರಣು ಮಾದರ ಎಂಬವರಿಗೆ ಮದುವೆ ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರದಂದು ಮದುಮಗ ಶರಣು ಮಾದರ ಹಾಗೂ ಅವರ ಕುಟುಂಬಸ್ಥರು ವಿವಾಹ ಪೂರ್ವ ಆಚರಣೆಗಾಗಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಮೇಲ್ಜಾತಿಗೆ ಸೇರಿದ ಕೆಲವರ ಆದೇಶದ ಮೇರೆಗೆ ಅಂಗಡಿಗಳು ಮತ್ತು ದೇವಸ್ಥಾನದ ಬಾಗಿಲನ್ನು ಮುಚ್ಚಿ ಅಸ್ಪೃಶ್ಯತೆ ಆಚರಿಸಿರುವುದಾಗಿ ತಿಳಿದುಬಂದಿದೆ.

"ವಿವಾಹ ಪೂರ್ವ ಆಚರಣೆಗಾಗಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ದಾರಿಯುದ್ದಕ್ಕೂ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ಅಲ್ಲದೆ, ದ್ಯಾಮವ್ವ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗಿತ್ತು. ನಮಗೆ ಬೆಂಬಲ ನೀಡಿದವರಿಗೆ 2,500 ರೂ. ದಂಡ ವಸೂಲಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ" ಎಂದು ಶರಣು ಮಾದರ ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಬಗ್ಗೆ ಸಂತ್ರಸ್ತರ ಕುಟುಂಬವು ತಹಶೀಲ್ದಾರ್‌ಗೆ ದೂರು ನೀಡಿದೆ. ಈ ಸಂಬಂಧ ಗ್ರಾಮದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

Similar News