ಮಡಿಕೇರಿ: ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಸೌಹಾರ್ದತೆಯ ಸಂಕಲ್ಪ ಜಾಥಾ

Update: 2023-01-27 10:10 GMT

ಮಡಿಕೇರಿ, ಜ.27: ಗಣರಾಜ್ಯೋತ್ಸವ ಪ್ರಯುಕ್ತ ಕೊಡಗು ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಎಂಬ ಘೋಷವಾಕ್ಯದಲ್ಲಿ ಮಾನವ ಸರಪಳಿ ಹಾಗೂ ಸೌಹಾರ್ದಾ ಜಾಥಾ ನಡೆಯಿತು.

ನಗರದ ಗಣಪತಿ ಬೀದಿಯ ಬದ್ರಿಯ ಮಸೀದಿಯಿಂದ ಮಹದೇವಪೇಟೆ ಮಾರ್ಗವಾಗಿ, ಜನರಲ್ ತಿಮ್ಮಯ್ಯ ವೃತ್ತದ ತನಕ ಸಾಗಿ ಕಾವೇರಿ ಕಲಾಕ್ಷೇತ್ರದಲ್ಲಿ ಜಾಥಾ ಮುಕ್ತಾಯಗೊಂಡಿತು.

ಮೆರವಣಿಗೆಯಲ್ಲಿ ಜಿಲ್ಲೆಯ ವಿವಿಧೆಡೆಯ ಸಂಘಟನೆ ಕಾರ್ಯಕರ್ತರು, ವಿದ್ಯಾರ್ಥಿಗಳು ಕೋಮು ಸಾಮರಸ್ಯ ಮೂಡಿಸುವ ಘೋಷಣೆಗಳನ್ನು ಕೂಗಿ, ಸೌಹಾರ್ದ ರಾಷ್ಟ್ರ ನಿರ್ಮಾಣ ಮಾಡುವ ಸಂದೇಶ ಸಾರುವ ಜೊತೆಗೆ ಉಗ್ರವಾದ, ಕೋಮುಗಲಭೆ ಕೊನೆಗೊಂಡು ಸಹೋದರತ್ವದಿಂದ ಕೂಡಿದ ಭಾರತ ನಿರ್ಮಾಣವಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.

ಜಾಥಕ್ಕೆ ಕ್ರೈಸ್ತಧರ್ಮಗುರು ಫ್ರಾನ್ಸಿಸ್ ಚರಕಲ್, ಜಿಲ್ಲಾ ಉಪಖಾಝಿ ಅಬ್ದುಲ್ಲ ಫೈಝಿ ಪ್ರಾರ್ಥನೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಜಾಥಾ ನಡೆದ ಬಳಿಕ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸೌಹಾರ್ದ ಸಮ್ಮೇಳನ ನಡೆಯಿತು.

Similar News