ಬೇಲೂರು | ಕಾಫಿ ಕಳ್ಳತನದ ಆರೋಪ: ಮರಕ್ಕೆ ಕಟ್ಟಿ ದಲಿತ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ; ಐವರ ಬಂಧನ

ನಾಯಿ ಛೂ ಬಿಟ್ಟು ಕಚ್ಚಿಸಿದ ಆರೋಪಿಗಳು

Update: 2023-01-28 05:35 GMT

ಬೇಲೂರು: ಜ, 27: ಕಾಫಿ ಕಳ್ಳತನ ಆರೋಪದಡಿ ದಲಿತ ವ್ಯಕ್ತಿಯೊರ್ವನಿಗೆ ಮರಕ್ಕೆ ಕಟ್ಟಿ ಮಾರಾಣಾಂತಿಕ ಹಲ್ಲೆ ನಡೆಸಿದ್ದಲ್ಲದೇ, ನಾಯಿ ಛೂ ಬಿಟ್ಟು ಕಚ್ಚಿಸಿರುವ ಅಮಾನವೀಯ ಘಟನೆಯೊಂದು ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ಬೆಳ್ಳಾವರ ಗ್ರಾಮದಲ್ಲಿ ವರದಿಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಕಿತ್ತಾವರ ಗ್ರಾಮದ ಮಂಜುನಾಥ್ ಹಲ್ಲೆಗೊಳಗಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಈತ ಬೆಳ್ಳಾವರ ಗ್ರಾಮದಲ್ಲಿ ಕಾಫಿ ಕಳ್ಳತನ ಮಾಡುತ್ತಿದ್ದ ಎಂದು ಆರೋಪಿಸಿ ತೋಟದ ಮಾಲಕ ಪಾಪಣ್ಣ ಮತ್ತು ಆತನ ಸ್ನೇಹಿತರು ಹಿಗ್ಗಾಮಗ್ಗಾ ಥಳಿಸಿದ್ದಾರೆನ್ನಲಾಗಿದ್ದು, ಹಲ್ಲೆಯಿಂದ ತೀವ್ರ ಗಾಯಗೊಂಡಿರುವ ಮಂಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. 

ಪ್ರಕರಣಕ್ಕೆ ಸಂಬಂಧಿಸಿ ಮಂಜು ಸಂಬಂಧಿಕರು ನೀಡಿರುವ ದೂರಿನನ್ವಯ ಐವರು ಆರೋಪಿಗಳನ್ನ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ. 

ಬಂಧನ: ಹಲ್ಲೆ ನಡೆಸಿದ ಬೆಳ್ಳಾವರ ಗ್ರಾಮದ ಕೆ.ಪಿ ರಾಘವೇಂದ್ರ (40 ) ಉಮೇಶ್ (36), ಮಲ್ಲಿಗಾನೂರು ಗ್ರಾಮದ ಕೀರ್ತಿ (31), ಡೋಲನ ಮನೆಯ ಶಾಮ್ರಲ್ (43), ಕಿತ್ತಾವರ ಗ್ರಾಮದ ನವೀನ್ ರಾಜ್ (36) ಎಂಬುವರನ್ನು ಬಂಧಿಸಲಾಗಿದೆ ಎಂದು ಎಸ್ ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

''ಮಂಜು ಅವರಿಗೆ ಐದು ಮಂದಿ ಸೇರಿ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬೆಳಿಗ್ಗೆಯಿಂದ ಹರಿದಾಡುತ್ತಿದ್ದು, ಈ ಸಂಬಂಧ ತನಿಖೆ ನಡೆಸಿ, ಐವರ ವಿರುದ್ಧ ಎಸ್ ಸಿ ಎಸ್ ಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ''

- ಹರಿರಾಮ್ ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Similar News