ಕೊಟ್ಟ ಮಾತು ತಪ್ಪಿದರೆ ರಾಜಕೀಯಕ್ಕೆ ಗುಡ್ ಬೈ: ಸಿದ್ದರಾಮಯ್ಯ

Update: 2023-01-27 13:43 GMT

ಮಂಡ್ಯ, ಜ.27: ನಾವು ಬಿಜೆಪಿಯವರ ರೀತಿ ವಚನ ಭ್ರಷ್ಟರಲ್ಲ. ಕೊಟ್ಟ ಮಾತು ಯಾವತ್ತೂ ತಪ್ಪುವುದಿಲ್ಲ. ಮಾತು ತಪ್ಪಿದರೆ ರಾಜಕೀಯದಲ್ಲೇ ಇರುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ನಗರದ ಮಂಡ್ಯ ವಿವಿ ಮೈದಾನದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‍ನ ಪ್ರಜಾಧ್ವನಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಸರಕಾರ ನುಡಿದಂತೆ ನಡೆದುಕೊಂಡಿದೆ. ಮುಂದೆಯೂ ಹಾಗೆಯೇ ನಡೆದುಕೊಳ್ಳಲಿದೆ ಎಂದರು.

ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್, ಮನೆ ಯಜಮಾನಿಗೆ ಮಾಸಿಕ 2 ಸಾವಿರ ರೂ., ತಲಾ 10 ಕೆ.ಜಿ. ಪಡಿತರ ಅಕ್ಕಿ ವಿತರಣೆ, ಲೀಟರ್ ಹಾಲಿಗೆ 6 ರೂ. ಪ್ರೋತ್ಸಾಹ ಧನ ಭರವಸೆಯನ್ನು  ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ಜಾರಿ ಮಾಡಲಿದ್ದೇವೆ ಎಂದು ಅವರು ಘೋಷಿಸಿದರು.

ನಮ್ಮ ಭರವಸೆ ನೋಡಿ ಬಿಜೆಪಿ, ಜೆಡಿಎಸ್‍ನವರಿಗೆ ನಡುಕ, ಭಯ ಶುರವಾಗಿದೆ. ಇದಕ್ಕೆಲ್ಲಾ ಹಣ ಎಲ್ಲಿ ತರುತ್ತಾರೆಂದು 2013ರಲ್ಲೂ ಹೀಗೆಯೇ ಪ್ರಶ್ನಿಸಿದ್ದರು. ಆದರೆ, ನಾವು ನುಡಿದಂತೆ ನಡೆದುಕೊಂಡೆವು. ಉಚಿತ ಪಡಿತರ ನೀಡಿದರೆ ಸೋಮಾರಿಗಳು ಆಗುವುದಿಲ್ಲ. ಯಾರೂ ಹಸಿವಿನಿಂದ ಇರಬಾರದು ಎಂಬುದು ಉದ್ದೇಶ ಎಂದು ಅವರು ಹೇಳಿದರು.

ಹಣ ಲೂಟಿ ಹೊಡೆಯುವುದೇ ಬಿಜೆಪಿಯವರ ಕೆಲಸ. ಜನಸಾಮಾನ್ಯರ ಸಮಸ್ಯೆ ಅವರಿಗೆ ಬೇಕಿಲ್ಲ. ಹಾಲು, ಬೆಣ್ಣೆ, ಪುಸ್ತಕ, ಪೆಟ್ರೋಲ್, ಗ್ಯಾಸ್, ಕಬ್ಬಿಣ, ಅಡುಗೆ ಎಣ್ಣೆ, ಗೊಬ್ಬರ ಎಲ್ಲದಕ್ಕೂ ಜಿಎಸ್‍ಟಿ ವಿಧಿಸಿದ್ದಾರೆ. ಇಂತಹ ಜನವಿರೋಧಿ ಸರಕಾರ ಬೇಕೆ? ಎಂಬುದನ್ನು ಜನತೆ ಯೋಚಿಸಬೇಕು ಎಂದು ಅವರು ಕರೆ ನೀಡಿದರು.

ಇದನ್ನೂ ಓದಿಅನುದಾನ, ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಿದ ಕಾಗಿನೆಲೆ ಈಶ್ವರಾನಂದ ಸ್ವಾಮೀಜಿಯಿಂದ ಮೈಕ್ ಕಸಿದುಕೊಂಡ ಬೊಮ್ಮಾಯಿ!

ನಾವು ಮೈಷುಗರ್ ಗೆ ಸಾಕಷ್ಟು ಅನುದಾನ ನೀಡಿ ಆರಂಭಿಸಿದ್ದೆವು. ಜೆಡಿಎಸ್ ಸರಕಾರ ಬಂದ ನಂತರ ನಿಂತು ಹೋಯಿತು. ಹೋರಾಟದ ಪರಿಣಾಮ ಬಿಜೆಪಿ ಸರಕಾರ ಕಾರ್ಖಾನೆ ಆರಂಭಿಸಿದೆ. ಎಥನಾಲ್, ಡಿಸ್ಟಲರಿ ಘಟಕ ಪ್ರಾರಂಭಿಸಿಲ್ಲ. ಇದುವರೆಗೆ 9 ಸಾವಿರ ಮೆಟ್ರಿಕ್ ಟನ್ ಕಬ್ಬು ಮಾತ್ರ ಅರೆಯಲಾಗಿದೆ. ಕಬ್ಬು ಸಂಪೂರ್ಣ ನುರಿಯಲು ನಮ್ಮ ಸರಕಾರ ಕಾರ್ಖಾನೆಯನ್ನು ಸಜ್ಜುಗೊಳಿಸಲಿದೆ ಎಂದು ಅವರು ಭರವಸೆ ನೀಡಿದರು.

ಕೋಮುವಾದಿ ಸರಕಾರ ದೂರವಿಡಲು ಜೆಡಿಎಸ್‍ಗೆ ಬೆಂಬಲ ಕೊಟ್ಟೆವು. ಆದರೆ, ಉಳಿಸಿಕೊಳ್ಳಲಿಲ್ಲ. ವೃಥಾ ನಮ್ಮ ಮೇಲೆ ಆರೋಪ ಮಾಡುತ್ತಾರೆ. ಹಾಗಾದರೆ ಅವರ ಶಾಸಕರನ್ನು ಬಿಜೆಪಿಗೆ ಕಳುಹಿಸಿದವರು ಯಾರು? ವೆಸ್ಟ್‍ ಎಂಡ್ ಹೊಟೇಲ್‍ನಲ್ಲಿ ಕುಳಿತು ಆಡಳಿತ ನಡೆಸಿದರೆ ಇನ್ನೇನಾಗುತ್ತೆ? ಎಂದು ಅವರು ತಿರುಗೇಟು ನೀಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಪೂರ್ವದಲ್ಲಿ ಸೂರ್ಯ ಹುಟ್ಟುವಷ್ಟೇ ಸತ್ಯ. ಈ ಬಾರಿ ಮಂಡ್ಯದ ಜನತೆ 5-6 ಸ್ಥಾನ ನಮಗೆ ಕೊಡಿ, ಜತೆಗಿದ್ದು ನಿಮ್ಮ ಕಷ್ಟ ಬಗೆಹರಿಸುತ್ತೇವೆ. ಭ್ರಷ್ಟ, ಲೂಟಿಕೋರ ಸರಕಾರವನ್ನು ಕಿತ್ತೊಗೆಯಲು ಕೈಜೋಡಿಸಿ ಎಂದು ಅವರು ಜಿಲ್ಲೆ ಜನತೆಯಲ್ಲಿ ಮನವಿ ಮಾಡಿದರು.

‘ಪರಿಶುದ್ಧ ಆಡಳಿತಕ್ಕೆ ಪ್ರಜಾಧ್ವನಿ ಯಾತ್ರೆ’

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ರೈತರ ಆದಾಯ ದ್ವಿಗುಣ, ಯುವಕರಿಗೆ ಉದ್ಯೋಗ ಸೇರಿದಂತೆ ಬಿಜೆಪಿ ನೀಡಿದ್ದ ಒಂದು ಭರವಸೆಯನ್ನೂ ಈಡೇರಿಸಿಲ್ಲ. ನಮ್ಮಗಳ ವಿರುದ್ಧ ಪ್ರಕರಣ ದಾಖಲಿಸುವುದೇ ಅವರೇ ಕೆಲಸ. ಬಿಜೆಪಿ ದುರಾಡಳಿತ ಕೊನೆಗಾಣಿಸಿ ಪರಿಶುದ್ಧ ಆಡಳಿತ ಕೊಡುವುದಕ್ಕಾಗಿ ಪ್ರಜಾಧ್ವನಿ ಯಾತ್ರೆ ಕೈಗೊಂಡಿದ್ದೇವೆ. ಜನತೆ ಆಶೀರ್ವದಿಸಬೇಕು ಎಂದರು.

ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ಹೈವೆ ಯೋಜನೆ ಆರಂಭಿಸಿದ್ದು ಮನಮೋಹನ್‍ಸಿಂಗ್ ನೇತೃತ್ವದ ನಮ್ಮ ಸರಕಾರ. ಆದರೆ, ಅದು ತಮ್ಮ ಸಾಧನೆ ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಿದ್ದಾರೆ. ಇಂತಹ ಸುಳ್ಳು ಪಕ್ಷವನ್ನು ನಂಬೇಡಿ. ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸಿ ಎಂದು ಅವರು ಮನವಿ ಮಾಡಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೆವಾಲಾ, ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಸಂಸದ ಡಿ.ಕೆ.ಸುರೇಶ್, ಮಾಜಿ ಸಂಸದ ರೆಹಮಾನ್ ಖಾನ್, ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಡಾ.ಕೃಷ್ಣ ಭೈರೇಗೌಡ ಸಮಾವೇಶನ್ನುದ್ದೇಶಿಸಿ ಮಾತನಾಡಿದರು.

ಇದೇ ವೇಳೆ ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್, ನಗರಸಭೆ ಮಾಜಿ ಉಪಾಧ್ಯಕ್ಷೆ ನಸ್ರೀನ್ ತಾಜ್ ಹಾಗೂ ಜಾಕೀರ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್, ವಿಧಾನಪರಿಷತ್ ಸದಸ್ಯರಾದ ಮಧು ಮಾದೇಗೌಡ, ದಿನೇಶ್ ಗೂಳಿಗೌಡ, ಮಾಜಿ ಶಾಸಕರಾದ ರಮೇಶ್‍ಬಾಬು, ಮಲ್ಲಾಜಮ್ಮ, ಕೆ.ಬಿ.ಚಂದ್ರಶೇಖರ್, ಕೇರಳ ಶಾಸಕ ರೋಜರಿ ಜಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Similar News