ಆಂಬ್ಯುಲೆನ್ಸ್ ಅಪಘಾತದಿಂದ ರೋಗಿ ಸಾವು ಪ್ರಕರಣ: ಪರಿಹಾರ ನೀಡಲು ಹೈಕೋರ್ಟ್ ಆದೇಶ

Update: 2023-01-27 15:14 GMT

ಬೆಂಗಳೂರು, ಜ.27: ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್ ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ಗಾಯಗೊಂಡು ರೋಗಿ ಸಾವನ್ನಪ್ಪಿದ ಪ್ರಕರಣದಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ಪಾವತಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.

ವಿಮಾ ಕಂಪೆನಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. ಪ್ರಕರಣ ಸಂಬಂಧದ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ರವಿ ಎಂಬುವರ ಸಾವು ಜಾಂಡಿಸ್‍ನಿಂದ ಸಂಭವಿಸಿರುವುದಾಗಿ ಉಲ್ಲೇಖವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗುತ್ತಿತ್ತು. ಅಲ್ಲಿ ಚಿಕಿತ್ಸೆ ಕಲ್ಪಿಸಿದ್ದರೆ ಆತ ಗುಣಮುಖರಾಗುತ್ತಿದ್ದರು. 

ಆದರೆ, ಜಾಂಡಿಸ್ ಮಾರಣಾಂತಿಕವಲ್ಲ. ರೋಗಿಯನ್ನು ಕರೆದೊಯ್ಯುತ್ತಿರುವ ಬಗ್ಗೆ ತಿಳುವಳಿಕೆಯಿದ್ದರೂ ಚಾಲಕ ಆಂಬ್ಯುಲೆನ್ಸ್ ಅನ್ನು ಅಜಾಗರೂಕತೆಯಿಂದ ಚಲಾಯಿಸಿ ಅಪಘಾತಕ್ಕೆ ಕಾರಣನಾಗಿದ್ದಾನೆ. ಘಟನೆಯಲ್ಲಿ ತೀವ್ರ ಗಾಯಗಳಾಗಿ ಕಾಯಿಲೆಯೂ ಉಲ್ಭಣಗೊಂಡು ರವಿ ಮೃತಪಟ್ಟಿದ್ದಾರೆ

ಹೀಗಾಗಿ, ಆತನ ಸಾವಿಗೂ ಮತ್ತು ಅಪಘಾತಕ್ಕೂ ಸಂಬಂಧವಿದೆ ಎಂದು ಹೈಕೋರ್ಟ್ ತೀರ್ಮಾನಿಸಿತು. ಮೃತ ರವಿ ಮಾಸಿಕವಾಗಿ ದುಡಿಯುತ್ತಿದ್ದ ವೇತನದ ಅಂದಾಜು ಆಧರಿಸಿ ನ್ಯಾಯಾಧೀಕರಣ ಪ್ರಕಟಿಸಿದ್ದ 5.5 ಲಕ್ಷ ರೂ ಪರಿಹಾರವನ್ನು 4.62 ಲಕ್ಷ ರೂ. ಇಳಿಸಿದ ಹೈಕೋರ್ಟ್, ಆ ಮೊತ್ತವನ್ನು ಎಂಟು ವಾರದಲ್ಲಿ ಮೃತನ ಕುಟುಂಬದವರಿಗೆ ಪಾವತಿಸುವಂತೆ ವಿಮಾ ಕಂಪೆನಿಗೆ ನಿರ್ದೇಶಿಸಿದೆ.

Similar News