ನೆಲಮಂಗಲ: ಪ್ರವಾಸಿ ಮಂದಿರದಲ್ಲಿ PWD ಅಧಿಕಾರಿ ಆತ್ಮಹತ್ಯೆ
Update: 2023-01-27 21:11 IST
ಬೆಂಗಳೂರು: ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿಯ ವ್ಯವಸ್ಥಾಪಕರೊಬ್ಬರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಶಿವಗಂಗಾ ಪ್ರವಾಸಿ ಮಂದಿರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ವರದಿಯಾಗಿದೆ.
ತುಮಕೂರು ಜಿಲ್ಲೆ ಮಧುಗಿರಿಯ ಲಕ್ಷ್ಮೀನರಸಿಂಹಯ್ಯ(56) ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿ ಎಂದು ಗುರುತಿಸಲಾಗಿದೆ.
ಕಚೇರಿಗೆ ಸಂಬಂಧಪಟ್ಟ ದಾಖಲಾತಿ ಪುಸ್ತಕ ಕಳೆದು ಹೋಗಿದ್ದು, ಇದರಿಂದ ತೀವ್ರ ಮನನೊಂದಿದ್ದರು ಎನ್ನಲಾಗಿದೆ.
ಗುರುವಾರ ರಾತ್ರಿ ನೆಲಮಂಗಲ ಸಮೀಪದ ಶಿವಗಂಗೆ ಪ್ರವಾಸಿ ಮಂದಿರಕ್ಕೆ ತೆರಳಿ ಕೊಠಡಿ ಪಡೆದುಕೊಂಡಿದ್ದಾರೆ. ಶುಕ್ರವಾರ ಕೊಠಡಿಯ ಶೌಚಾಲಯದಲ್ಲಿ ಮುಂಜಾನೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುದ್ದಾರೆಂದು ಹೇಳಲಾಗಿದೆ.
ಡಾಬಸ್ ಪೇಟೆಯ ಪೊಲೀಸರು ಶಿವಗಂಗಾ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.