ಸೂರ್ಯನ ಅಧ್ಯಯನ ಯೋಜನೆ ಜೂನ್-ಜುಲೈಯಲ್ಲಿ ಆರಂಭ: ಇಸ್ರೊ

Update: 2023-01-27 16:11 GMT

ಬೆಂಗಳೂರು, ಜ. 27: ಸೂರ್ಯನನ್ನು ಅಧ್ಯಯನ ನಡೆಸಲು ಭಾರತದ ಮೊದಲ ವೈಜ್ಞಾನಿಕ ಯೋಜನೆಯಾಗಿರುವ ಆದಿತ್ಯ-ಎಲ್1(Aditya-L1) ಬಾಹ್ಯಾಕಾಶ ನೌಕೆಯಲ್ಲಿ ಅಳವಡಿಸಲಾಗುವ ವಿಸಿಬಲ್ ಲೈನ್ ಎಮಿಷನ್ ಕೊರೋನಾಗ್ರಾಫ್ (VELC) ಅನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಪಿಸಿಕ್ಸ್ (IIA) ಗುರುವಾರ ಇಸ್ರೋಗೆ ಹಸ್ತಾಂತರಿಸಿದ್ದು, ಆದಿತ್ಯ-ಎಲ್1 ನೌಕೆ ಜೂನ್ ಅಥವಾ ಜುಲೈಯಲ್ಲಿ ಉಡಾವಣೆಗೊಳ್ಳಲಿದೆ.

ಇಲ್ಲಿಗೆ ಸಮೀಪದ ಐಐಎಯ ಸೆಂಟರ್ ಫಾರ್ ರಿಸರ್ಚ್ ಆ್ಯಂಡ್ ಎಜುಕೇಶನ್ ಇನ್ ಸಯನ್ಸ್ ಆ್ಯಂಡ್ ಟೆಕ್ನಾಲಜಿ (CREST) ಕ್ಯಾಂಪಸ್ ನಲ್ಲಿ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್(S. Somanath) ಉಪಸ್ಥಿತಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ಹಸ್ತಾಂತರ ಮಾಡಲಾಗಿದೆ. ಆದಿತ್ಯ-ಎಲ್1ನಲ್ಲಿ ಇರಿಸಲಾಗುವ 7 ಪ್ಲೇಲೋಡ್/ಟೆಲಿಸ್ಕೋಪ್ ಗಳಲ್ಲಿ ಹೆಚ್ಚು ತಾಂತ್ರಿಕ ಸವಾಲನ್ನು ಒಳಗೊಂಡಿರುವುದರಲ್ಲಿ ಒಂದಾಗಿರುವ ಹಾಗೂ ಅತಿ ದೊಡ್ಡದಾಗಿರುವ ವಿಇಎಲ್ಸಿಯ ಜೋಡಿಸುವಿಕೆ, ಪರೀಕ್ಷೆ ಹಾಗೂ ಕ್ಯಾಲಿಬರೇಟಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಐಐಎ ತಿಳಿಸಿದೆ.

ಇಸ್ರೋ ಈಗ ವಿಇಎಲ್ಸಿಯ ಮುಂದಿನ ಪರೀಕ್ಷೆ ಹಾಗೂ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯೊಂದಿಗೆ ಅಂತಿಮ ಸಂಯೋಜನೆ ನಡೆಸಲಿದೆ ಎಂದು ಅದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ವಿಇಎಲ್ಸಿ ತಂಡವನ್ನು ಅಭಿನಂದಿಸಿದ ಸೋಮನಾಥ್, ಆದಿತ್ಯ-ಎಲ್1 ಜೂನ್ ಅಥವಾ ಜುಲೈಯಲ್ಲಿ ಉಡಾವಣೆಗೊಳ್ಳುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

Similar News