ವಿದೇಶಿ ವೈದ್ಯಕೀಯ ಪದವಿಯನ್ನು ರಾಜ್ಯ ಮಾನ್ಯ ಮಾಡಬೇಕಾದ ಅಗತ್ಯವಿಲ್ಲ: ಹೈಕೋರ್ಟ್

Update: 2023-01-27 16:54 GMT

ಬೆಂಗಳೂರು, ಜ.27: ಮಹಾರಾಷ್ಟ್ರದಂತೆ ಕರ್ನಾಟಕದಲ್ಲಿಯೂ ವಿದೇಶದಲ್ಲಿ ಪಡೆದ ವೈದ್ಯಕೀಯ ಪದವಿಗಳನ್ನು ಮಾನ್ಯ ಮಾಡಬೇಕಾದ ಅಗತ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. 

ಚೀನಾದ ಮೆಡಿಕಲ್ ಕಾಲೇಜೊಂದರಲ್ಲಿ ವೈದ್ಯಕೀಯ ಪದವಿ ಪಡೆದಿದ್ದ ಡಾ.ಸತ್ಯಕ್ ಎಂಬುವರು ತಮ್ಮ ಪದವಿ ಅಂಗೀಕರಿಸುವಂತೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಇಲಾಖೆಯು ತಿರಸ್ಕರಿಸಿತ್ತು. 

ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. 

ಅಲ್ಲದೇ, ವಿದೇಶಿ ವಿವಿಗಳು ನೀಡುವ ವೈದ್ಯಕೀಯ ಪದವಿಗಳನ್ನು ಉದ್ಯೋಗಕ್ಕೆ ಮಾನ್ಯ ಮಾಡುವ ಸಂಬಂಧ ಮಹಾರಾಷ್ಟ್ರವು ಅನುಸರಿಸುವ ನೀತಿಯನ್ನೇ ಕರ್ನಾಟಕದಲ್ಲಿ ಕಡ್ಡಾಯವಾಗುವುದಿಲ್ಲ ಎಂದು ರಾಜ್ಯ ಸರಕಾರದ ವಾದವನ್ನು ಹೈಕೋರ್ಟ್ ಮಾನ್ಯ ಮಾಡಿದೆ. 

ಮಹಾರಾಷ್ಟ್ರದಲ್ಲಿ ವಿದೇಶದಲ್ಲಿ ಪಡೆದ ವೈದ್ಯಕೀಯ ಪದವಿ ಮಾನ್ಯ ಮಾಡುವುದಕ್ಕಾಗಿ ಬೇರೆಯದೇ ಆದ  ಮಾನದಂಡಗಳು ಇರಲಿವೆ. ಹೀಗಾಗಿ ವಿದೇಶಿ ವಿಶ್ವವಿದ್ಯಾಲಯಗಳ ವೈದ್ಯಕೀಯ ಪದವಿಯನ್ನು ಮಹಾರಾಷ್ಟ್ರ ಮಾನ್ಯ ಮಾಡಿದೆ. ಅದೊಂದೇ ಕಾರಣಕ್ಕೆ ಕರ್ನಾಟಕ ದಲ್ಲಿಯೂ ವಿದೇಶಿ ವಿವಿಗಳ ವೈದ್ಯಕೀಯ ಪದವಿಗಳನ್ನು ಮಾನ್ಯ ಮಾಡದಿರುವುದು ತಪ್ಪೆಂದು ಹೇಳಲಾಗದು ಎಂದು ನ್ಯಾಯಪೀಠ ತಿಳಿಸಿತು.

ಅರ್ಜಿದಾರರು ನ್ಯಾಯಪೀಠಕ್ಕೆ ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರರು ತಾವೇ ವಿದೇಶಿ ವಿವಿಯಿಂದ ವೈದ್ಯಕೀಯ ಪದವಿ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ, ಆ ಮೂಲಕ ಸಕ್ಷಮ ಪ್ರಾಧಿಕಾರ ನಿಗದಿಪಡಿಸಿದ್ದ ಅರ್ಹತೆಯ ಮಾನದಂಡವನ್ನು ಅದು ಹೊಂದಿಲ್ಲ ಎಂಬುದು ತಿಳಿಯಲಿದೆ. ಅಲ್ಲದೇ, ಸರಕಾರಿ ಹುದ್ದೆಗಳನ್ನು ಭರ್ತಿ ಮಾಡುವಾಗ ಅದಕ್ಕೆ ಹೊಂದುವಂತಹ ಅರ್ಹತೆಗಳನ್ನು ನಿಗದಿಪಡಿಸುವ ಅಧಿಕಾರ ರಾಜ್ಯ ಸರಕಾರಗಳಿಗೆ ಇರಲಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣವೇನು?: 2020ರ ಸೆ.10 ರಂದು ಸಕ್ಷಮ ಪ್ರಾಧಿಕಾರ ವಿವಿಧ ವಿಭಾಗಗಳಲ್ಲಿ ವೈದ್ಯಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿತ್ತು. ಅದರ ಪ್ರಕಾರ ಭಾರತದಲ್ಲಿ ಸ್ಥಾಪನೆಯಾದ ಯಾವುದೇ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ (ಎಂಬಿಬಿಎಸ್) ಪಡೆದಿರಬೇಕು ಎಂಬುದಾಗಿ ಅರ್ಹತೆಗಳನ್ನು ನಿಗದಿಪಡಿಸಿತ್ತು. 

ಅರ್ಜಿದಾರ ಡಾ.ಸತ್ಯಕ್ ಅವರು ವೈದ್ಯಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಾಧಿಕಾರ ವಿದೇಶಿ ವಿವಿಯಲ್ಲಿ ವೈದ್ಯ ಪದವಿ ಪಡೆಯಲಾಗಿದೆ ಎಂಬುದಾಗಿ ಕಾರಣ ನೀಡಿ ಅರ್ಜಿಯನ್ನು ತಿರಸ್ಕರಿಸಿತ್ತು.

ಇದಕ್ಕೆ ಪ್ರತಿಯಾಗಿ ಅರ್ಜಿದಾರರು ತಾನು ಮೊದಲಿಗೆ ಬೀದರ್ ಜಿಲ್ಲೆಯ ಹರ್‍ಕೋರ್ಡ್ ನಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ, ಹುದ್ದೆಗೆ ತಾನು ಎಲ್ಲ ರೀತಿಯಲ್ಲೂ ಅರ್ಹನಾಗಿದ್ದೇನೆ. 

ಮಹಾರಾಷ್ಟ್ರದಲ್ಲಿ ವಿದೇಶಿ ವಿವಿಯ ವೈದ್ಯ ಪದವಿಯನ್ನು ಮಾನ್ಯ ಮಾಡಿದೆ, ಕರ್ನಾಟಕದಲ್ಲೂ ಅದೇ ರೀತಿಯಲ್ಲಿ ಮಾನ್ಯ ಮಾಡಬೇಕು ಎಂದು ಕೋರಿದ್ದರು. ಆ ಮನವಿಯನ್ನು ತಿರಸ್ಕರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಿಂಬರಹ ನೀಡಿ ವಿದೇಶಿ ವಿಶ್ವವಿದ್ಯಾಲಯಗಳ ವೈದ್ಯಕೀಯ ಪದವಿ ಪರಿಗಣಿಸಲಾಗದು ಎಂದು ತಿಳಿಸಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು.

Similar News