ಸ್ಯಾಂಟ್ರೊ ರವಿ ಆತ್ಮಹತ್ಯೆಗೆ ಯತ್ನ; ಕಾಂಗ್ರೆಸ್ ಗಂಭೀರ ಆರೋಪ

Update: 2023-01-27 17:55 GMT

ಬೆಂಗಳೂರು, ಜ.27: ಜಾತಿ ನಿಂದನೆ, ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಕೆ.ಎಸ್.ಮಂಜುನಾಥ್ ಯಾನೆ ಸ್ಯಾಂಟ್ರೊ ರವಿ, ನಿಗದಿತ ಮಾತ್ರೆಗಳಿಂದ ಅಧಿಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಗಂಭೀರ ಆರೋಪ ಕೇಳಿಬಂದಿದೆ.

ಜ.30ರವರೆಗೂ ನ್ಯಾಯಾಂಗ ಬಂಧನಕ್ಕೆ ಆದೇಶಿರುವ ಹಿನ್ನೆಲೆ ಆರೋಪಿ ರವಿ ಅನ್ನು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ. ಆದರೆ, ಕಳೆದ ರಾತ್ರಿ ಮಧುಮೇಹ ರೋಗಗಕ್ಕೆ ಸಂಬಂಧಿಸಿದಂತೆ ನಿಗದಿತ ಮಾತ್ರೆಗಳಿಗಿಂತ ಹೆಚ್ಚಾಗಿ ಸೇವಿಸಿ ಅಸ್ವಸ್ಥತವಾಗಿ ಬಿದ್ದಿದ್ದ.ಇದರಿಂದ ಆತಂಕಗೊಂಡ ಕಾರಾಗೃಹ ಸಿಬ್ಬಂದಿಗಳು ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ನಾಲ್ಕೈದು ದಿನಗಳಿಂದ ರವಿ ಕಡಿಮೆ ಊಟ ಸೇವಿಸುತ್ತಿದ್ದ.ಆದರೆ, ಮಾತ್ರೆಗಳನ್ನು ಮಾತ್ರ ಸರಿಯಾದ ಸಮಯಕ್ಕೆ ಸೇವನೆ ಮಾಡುತ್ತಿದ್ದ. ಹೀಗಾಗಿ, ಆತನ ಆರೋಗ್ಯದಲ್ಲಿ ಏರುಪೇರಾಗಿದೆ. ಇದೀಗ ಚಿಕಿತ್ಸೆ ನೀಡಲಾಗಿದ್ದು, ಶೀಘ್ರದಲ್ಲಿಯೇ ಪುನಃ ಕಾರಾಗೃಹಕ್ಕೆ ಕರೆದೊಯ್ಯಲಾಗುವುದು ಎಂದು ಹಿರಿಯ ಪೊಲೀಸ ಅಧಿಕಾರಿವೊಬ್ಬರು ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್ ಆರೋಪವೇನು?: ಸ್ಯಾಂಟ್ರೊ ರವಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲು ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆ ಬಳಿ ಭದ್ರತೆ ಹೆಚ್ಚಿಸಿದ್ದಾರೆ. ಇನ್ನೂ, ಈ ಘಟನೆ ಕುರಿತು ಟೀಕಿಸಿರುವ ಕಾಂಗ್ರೆಸ್, ಸ್ಯಾಂಟ್ರೊ ರವಿಯೊಳಗೆ ಅಡಗಿದ್ದ ಬಿಜೆಪಿಗರ ಭಯಂಕರ ಸತ್ಯಗಳನ್ನು ಸಮಾಧಿ ಮಾಡಲು ಹೊರಟಿದೆಯೇ ಸರಕಾರ?. ಇದು ಆತ್ಮಹತ್ಯೆ ಯತ್ನವೋ, ಕೊಲೆ ಯತ್ನವೋ?. ಸ್ಯಾಂಟ್ರೋ ರವಿಯನ್ನು ಮುಗಿಸುವ ಮೂಲಕ ಸರಕಾರದ ರಹಸ್ಯಗಳನ್ನೂ ಮುಗಿಸುವ ಹುನ್ನಾರ ನಡೆದಿದೆಯೇ ಎಂದು ಟ್ವಿಟ್ ಮೂಲಕ ಆರೋಪಿಸಿದೆ.

Similar News