ಬಿಹಾರದ ಪುರ್ನಿಯಾದಲ್ಲಿ ಪಾಕ್ ಧ್ವಜ ಹಾರಿಸಲಾಗಿತ್ತೇ?: ಪ್ರಮುಖ ಮಾಧ್ಯಮಗಳ ವರದಿಯ ಸತ್ಯಾಂಶ ಇಲ್ಲಿದೆ

Update: 2023-01-28 10:41 GMT

ಹೊಸದಿಲ್ಲಿ: ಬಿಹಾರದ ಪುರ್ನಿಯಾದಲ್ಲಿಯ ಮನೆಯೊಂದರ ಮೇಲೆ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಗಿದೆ ಎಂಬ ‘ಸ್ಫೋಟಕ’ ಸುದ್ದಿಯನ್ನು ಜ.26ರಂದು ಪ್ರಮುಖ ಮಾಧ್ಯಮಗಳು ಪ್ರಕಟಿಸಿದ್ದವು. ಅದು ಪಾಕಿಸ್ತಾನದ ಧ್ವಜವಾಗಿರಲಿಲ್ಲ, ಬದಲಿಗೆ ಧಾರ್ಮಿಕ ಧ್ವಜವಾಗಿತ್ತು ಹಾಗೂ ಮಾಧ್ಯಮಗಳ ವರದಿ ಸಂಪೂರ್ಣ ತಪ್ಪಾಗಿತ್ತು ಎನ್ನುವುದನ್ನು ಸುದ್ದಿ ಜಾಲತಾಣ (AltNews) ಬಯಲಿಗೆಳೆದಿದೆ. ಪೊಲೀಸರೂ ಇದನ್ನು ಸ್ಪಷ್ಟಪಡಿಸಿದ್ದಾರೆ.

"ಪುರ್ನಿಯಾದ ಮಧುಬನಿ ಸಿಪಾಹಿ ಟೋಲಾ ಪ್ರದೇಶದ ಸ್ಥಳೀಯ ಮಸೀದಿ ಸಮೀಪದ ಮುಹಮ್ಮದ್ ಮುಬಾರಕುದ್ದೀನ್ ನಿವಾಸದ ಮೇಲೆ ಪಾಕಿಸ್ತಾನಿ ಧ್ವಜವನ್ನು ಹಾರಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಅದನ್ನು ತೆಗೆದಿದ್ದಾರೆ ಮತ್ತು ಪೊಲೀಸ್ ಠಾಣಾಧಿಕಾರಿಗಳು ಈ ಬಗ್ಗೆ ಮುಂದಿನ ಕ್ರಮವನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ" ಎಂದು ಎಎನ್‌ಎನ್, ಸಿಎನ್‌ಎನ್ ನ್ಯೂಸ್, ಟೈಮ್ಸ್ ನೌ ನವಭಾರತ, ನ್ಯೂಸ್ 18 ಬಿಹಾರ, ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಹಲವು ಮಾಧ್ಯಮಗಳು ವರದಿಯನ್ನು ಪ್ರಕಟಿಸಿದ್ದವು. ವರದಿಗಳು ‘ತಥಾಕಥಿತ’ ಪಾಕ್ ಧ್ವಜದ ಚಿತ್ರಗಳನ್ನೂ ಒಳಗೊಂಡಿದ್ದವು.

ಹಲವಾರು ಬಿಜೆಪಿ ನಾಯಕರು ಮಾಧ್ಯಮಗಳ ವರದಿಗಳನ್ನು ಟ್ವೀಟಿಸಿ, ಬಿಹಾರದಲ್ಲಿ ಪಾಕ್ ಧ್ವಜವನ್ನು ಹಾರಿಸಿರುವುದು ನಾಚಿಕೆಗೇಡಿನ ಕೃತ್ಯವಾಗಿದೆ ಮತ್ತು ಖಂಡನೆಗೂ ಮೀರಿದ್ದಾಗಿದೆ ಎಂದು ಬಣ್ಣಿಸಿದ್ದರು.

ಧ್ವಜದ ಕೆಳಗಿನ ಕೋನದಿಂದ ಚಿತ್ರೀಕರಿಸಲಾಗಿದ್ದ ವೀಡಿಯೊವನ್ನು ಮಾಧ್ಯಮಗಳು ತಮ್ಮ ವರದಿಗಾರಿಕೆಯಲ್ಲಿ ಬಳಸಿದ್ದವು ಎನ್ನುವುದನ್ನು ಓದುಗರು ಗಮನಿಸಬೇಕು. ಧ್ವಜವನ್ನು ಸೂಕ್ಷ್ಮವಾಗಿ ನೋಡಿದರೆ ಕಂಬದ ಬದಿಯಲ್ಲಿನ ಧ್ವಜದ ಭಾಗಗಳು ಹಸಿರು ಬಣ್ಣದ್ದಲ್ಲ ಎನ್ನುವುದು ಗಮನಕ್ಕೆ ಬರುತ್ತದೆ. ಧ್ವಜದಲ್ಲಿ ನೀಲಿ ಬಣ್ಣದ ಸಣ್ಣ ಜಾಗ ಹಾಗೂ ನಂತರ ಕಪ್ಪು ಮತ್ತು ಬಿಳಿ ಬಣ್ಣಗಳ ಭಾಗವಿದೆ.

ಈ ಮಾದರಿಯು ಪಾಕಿಸ್ತಾನದ ರಾಷ್ಟ್ರಧ್ವಜದಲ್ಲಿಲ್ಲ. ಅದು ಎಡಭಾಗದಲ್ಲಿ ಲಂಬವಾದ ಬಿಳಿಯ ಪಟ್ಟಿ ಹಾಗೂ ಹಸಿರು ಬಣ್ಣದ ಹಿನ್ನೆಲೆಯಲ್ಲಿ ಅರ್ಧಚಂದ್ರಾಕೃತಿ ಮತ್ತು ನಕ್ಷತ್ರವನ್ನು ಹೊಂದಿದೆ. ಮಾದರಿಯಲ್ಲಿ ಎದ್ದು ಕಾಣುವ ವ್ಯತ್ಯಾಸಗಳ ಆಧಾರದಲ್ಲಿ ಮುಬಾರಕುದ್ದೀನ್ ನಿವಾಸ ಮೇಲೆ ಹಾರಿಸಿದ್ದು ಪಾಕ್ ಧ್ವಜವಾಗಿರಲಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ಅಲ್ಲದೆ ಪುರ್ನಿಯಾ ಪೊಲೀಸರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಹೇಳಿಕೆಯಂತೆ, ಅದು ಪಾಕ್ ಧ್ವಜವಾಗಿರಲಿಲ್ಲ, ಒಂದು ತಿಂಗಳ ಹಿಂದೆ ಹಾರಿಸಲಾಗಿದ್ದ ಧಾರ್ಮಿಕ ಧ್ವಜವಾಗಿತ್ತು ಎನ್ನುವುದು ತನಿಖೆಯಿಂದ ದೃಢಪಟ್ಟಿದೆ. ಅದು ಪಾಕ್ ಧ್ವಜ ಎಂಬ ವದಂತಿಗಳನ್ನು ಹರಡಿದ್ದ ವ್ಯಕ್ತಿಗಳನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಸದರ್ ಎಸ್‌ಡಿಪಿಒ ಸುರೇಂದ್ರ ಕುಮಾರ್ ಅವರು ಅದೇ ದಿನ ತಿಳಿಸಿದ್ದರು.

AltNewsನ ಕೋರಿಕೆಯ ಮೇರೆಗೆ ಪುರ್ನಿಯಾ ಎಸ್‌ಪಿ ಅಮೀರ್ ಜಾವೇದ್ ಅವರು ಪೊಲೀಸರು ಕೆಳಗಿಳಿಸಿದ್ದ ಧ್ವಜದ ಚಿತ್ರವನ್ನು ಕಳುಹಿಸಿದ್ದಾರೆ. ಧ್ವಜದಲ್ಲಿ ಕಪ್ಪು-ಬಿಳಿ ಭಾಗ ಮತ್ತು ಅದರ ಮೇಲೆ ನೀಲಿ ಪಟ್ಟಿಯ ಮುದ್ರಣವು ಸ್ಪಷ್ಟವಾಗಿದೆ. (AltNews)  ನೊಂದಿಗೆ ಮಾತನಾಡಿದ ಆಲ್‌ಇಂಡಿಯಾ ಮುಸ್ಲಿಮ್ ಜಮಾಅತ್‌ನ ವಕ್ತಾರ ಡಾ.ಅನ್ವರ್ ರಝಾ ಕಾದ್ರಿ ಅವರು ಇಸ್ಲಾಮ್‌ನಲ್ಲಿಯ ಧ್ವಜದ ಮೇಲೆ ಕಂಡು ಬರುವ ವಿನ್ಯಾಸಗಳ ಮಹತ್ವವನ್ನು ವಿವರಿಸಿದರು. ನೀಲಿ ಪಟ್ಟಿಯು ಘೌಸ್-ಎ-ಅಝಂ ಎಂದೂ ಕರೆಯಲಾಗುವ ಬಾಗ್ದಾದ್ ಶರೀಫ್ ಮಸೀದಿಯ ಗುಮ್ಮಟದ ಮೇಲಿನ ವಿನ್ಯಾಸದಿಂದ ಮತ್ತು ಕಪ್ಪುಬಣ್ಣದ ಅಂಕುಡೊಂಕು ಪಟ್ಟಿಗಳುಳ್ಳ ಬಿಳಿಯ ಭಾಗವು ಬರೇಲಿಯಲ್ಲಿನ ದರ್ಗಾ ಎ ಅಲ್‌ಹಝರತ್‌ನ ಗುಮ್ಮಟದಿಂದ ಪ್ರೇರಿತಗೊಂಡಿವೆ ಎಂದು ಅವರು ತಿಳಿಸಿದರು.

ಹಿಂದೆಯೂ ಭಾರತದಲ್ಲಿ ಹಲವಾರು ಸಂದರ್ಭಗಳಲ್ಲಿ, ವಿಶೇಷವಾಗಿ ಈದ್ ಮಿಲಾದ್-ಉನ್-ನಬಿ ಆಚರಣೆಯಲ್ಲಿ ಈ ಧ್ವಜವನ್ನು ಹಾರಿಸಲಾಗಿದೆ. ಮುಂಬೈ, ಅಹ್ಮದಾಬಾದ್, ವಾರಣಾಸಿ ಮತ್ತು ದಿಲ್ಲಿಯಂತಹ ನಗರಗಳಲ್ಲಿ ಈ ಧ್ವಜ ಕಂಡು ಬಂದಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ ಪುರ್ನಿಯಾದ ಮನೆಯೊಂದರ ಮೇಲೆ ಹಾರಿಸಲಾಗಿದ್ದ ಧಾರ್ಮಿಕ ಧ್ವಜವನ್ನು ಗಣರಾಜ್ಯೋತ್ಸವದ ದಿನ ಹಾರಿಸಲಾದ ಪಾಕಿಸ್ತಾನದ ರಾಷ್ಟ್ರಧ್ವಜ ಎಂದು ವಿವಿಧ ಮಾಧ್ಯಮಗಳು ತಪ್ಪಾಗಿ ಬಿಂಬಿಸಿದ್ದವು.

ಇದನ್ನೂ ಓದಿ: NDTV ತೊರೆದ ಹಿರಿಯ ಪತ್ರಕರ್ತ ಶ್ರೀನಿವಾಸನ್‌ ಜೈನ್‌

Similar News