ಪಕ್ಷ ಯಾರನ್ನೇ ಅಭ್ಯರ್ಥಿ ಮಾಡಿದರೂ ಗೆಲ್ಲಿಸಿ: ಡಿ.ಕೆ.ಶಿವಕುಮಾರ್ ಕರೆ

''‘ಬಿಜೆಪಿ ಪಾಪದ ಪುರಾಣ’ ಪುಸ್ತಕವನ್ನ ಮನೆ ಮನೆಗೆ ತಲುಪಿಸಿ'' ►ಯಾದಗಿರಿಯಲ್ಲಿ ‘ಪ್ರಜಾಧ್ವನಿ ಯಾತ್ರೆ’

Update: 2023-01-28 13:31 GMT

ಯಾದಗಿರಿ, ಜ. 28: ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ನಮಗೆ ನಂಬಿಕೆ ಇದೆ. ಈ ಭಾಗದ 40 ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸುವ ಮೂಲಕ ಅಧಿಕಾರಕ್ಕೆ ತರಬೇಕು. ಪಕ್ಷ ಯಾರನ್ನೇ ಅಭ್ಯರ್ಥಿ ಮಾಡಿದರೂ ನೀವೆಲ್ಲರೂ ಅವರನ್ನು ಗೆಲ್ಲಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.

ಶನಿವಾರ ಯಾದಗಿರಿ ಪಕ್ಷದಿಂದ ಏರ್ಪಡಿಸಿದ್ದ ‘ಪ್ರಜಾಧ್ವನಿ ಯಾತ್ರೆ’ ಸಮಾವೇಶದಲ್ಲಿ ಮಾತನಾಡಿದ ಅವರು, ‘ಟಿಕೆಟ್ ಸಿಗದವರಿಗೆ ಪಕ್ಷ ಮುಂದಿನ ದಿನಗಳಲ್ಲಿ ಎಂಎಲ್ಸಿ, ನಿಗಮ ಮಂಡಳಿ ಮುಖ್ಯಸ್ಥರನ್ನಾಗಿ ಮಾಡಿ ಅಧಿಕಾರ ನೀಡಲಾಗುವುದು. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಈ ವಿಚಾರವಾಗಿ ನೀವೆಲ್ಲರೂ ಪ್ರತಿಜ್ಞೆ ಮಾಡಬೇಕು’ ಎಂದು ಸಲಹೆ ಮಾಡಿದರು.

‘ಬಿಜೆಪಿ ಸರಕಾರದ 3 ವರ್ಷಗಳ ದುರಾಡಳಿತ, ಅಕ್ರಮ, ಹಗರಣ, ಭ್ರಷ್ಟಾಚಾರದ ಬಗ್ಗೆ ‘ಬಿಜೆಪಿ ಪಾಪದ ಪುರಾಣ’ ಎಂಬ ಪುಸ್ತಕ ಬಿಡುಗಡೆ ಮಾಡಿದ್ದೇವೆ. ಇದನ್ನು ಪ್ರತಿ ಮನೆಗೆ ತಲುಪಿಸಿ ಜನರಲ್ಲಿ ಅರಿವು ಮೂಡಿಸಬೇಕು. ನಾನು ಹಾಗೂ ಸಿದ್ದರಾಮಯ್ಯ ನಿಮ್ಮ ತಾಲೂಕುಗಳಿಗೆ ಆಗಮಿಸುತ್ತೇವೆ. ನಾವೆಲ್ಲರೂ ಸೇರಿ ಪಕ್ಷವನ್ನು ಗೆಲ್ಲಿಸೋಣ ಎಂದು ಅವರು ಮನವಿ ಮಾಡಿದರು.

ನಾವು ಅಧಿಕಾರಕ್ಕೆ ಬಹುರುವುದು, ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇವೆಂಬುದಕ್ಕಿಂತ, ಅಧಿಕಾರ ಇದ್ದಾಗ ಜನರ ಬದುಕಿನಲ್ಲಿ ಯಾವ ಬದಲಾವಣೆ ತಂದಿದ್ದಾರೆಂಬುದು ಮುಖ್ಯ. ಇತ್ತೀಚೆಗೆ ಮೋದಿ ಈ ಭಾಗಕ್ಕೆ ಬಂದು, ಈ ಭಾಗ ಅಭಿವೃದ್ಧಿಯಾಗಿಲ್ಲವೆಂದು ಹೇಳಿದ್ದಾರೆ. ಮೋದಿ ಅವರಿಗೆ ಒಂದು ಮಾತು ಹೇಳಬಯಸುತ್ತೇನೆ. ಹೈ.ಕ. ಭಾಗ ಬಿಸಿಲು ನಾಡಾಗಿದ್ದು, ನೀವು ಅಧಿಕಾರದಲ್ಲಿದ್ದೀರಿ. ನಿಮ್ಮ ಅಧಿಕಾರ ಅವಧಿಯಲ್ಲಿ ಈ ಕ್ಷೇತ್ರಕ್ಕೆ ಯಾವುದಾದರೂ ಕಾರ್ಯಕ್ರಮ ಕೊಟ್ಟಿದ್ದರೆ ಹೇಳಿದರೂ ಕೇಳುತ್ತೇವೆ ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಕೊಡುಗೆ ಏನು?: ‘ಜಾತಿ ಜಾತಿಗಳ ನಡುವೆ ದ್ವೇಷವೆಂಬ ವಿಷ, ಧರ್ಮಗಳ ನಡುವೆ ದ್ವೇಷ ಬಿತ್ತಿದರು. ಅವರು ಹಿಂದೂಗಳು ಮಾತ್ರ ಮುಂದು ಎನ್ನುತ್ತಾರೆ. ಆದರೆ ಕಾಂಗ್ರೆಸ್ ಪಕ್ಷ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ದಲಿತ, ಲಿಂಗಾಯತ, ಒಕ್ಕಲಿಗ ಎಲ್ಲರೂ ಒಂದು ಎನ್ನುತ್ತದೆ. ಇದು ಕಾಂಗ್ರೆಸ್ ಹಾಗೂ ಬಿಜೆಪಿಗೂ ಇರುವ ವ್ಯತ್ಯಾಸ’

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Similar News