ವಿಚ್ಛೇದನ ಬಳಿಕ ನೋಡಲು ಬಾರದ ತಂದೆ: ವಿದೇಶದಲ್ಲಿ ಮಗುವಿನೊಂದಿಗೆ ನೆಲೆಸಲು ತಾಯಿಗೆ ಅನುಮತಿಸಿದ ಹೈಕೋರ್ಟ್

Update: 2023-01-28 14:45 GMT

ಬೆಂಗಳೂರು, ಜ.28: ವಿಚ್ಛೇದನದ ಬಳಿಕ ಎಂಟು ವರ್ಷ ಕಳೆದರೂ ತಂದೆಯಾದವರು ಮಗುವನ್ನು ಭೇಟಿ ಮಾಡಲು ಮುಂದಾಗದ ಹಾಗೂ ಪ್ರಕರಣದ ವಿಚಾರವಾಗಿ ಕೋರ್ಟ್‍ಗೂ ಹಾಜರಾಗದ ಕಾರಣ ಮಗುವಿನೊಂದಿಗೆ ತಾಯಿ ಆಸ್ಟ್ರೇಲಿಯಾದಲ್ಲಿ ನೆಲೆಸಲು ಹೈಕೋರ್ಟ್ ಅವಕಾಶ ಕಲ್ಪಿಸಿದೆ. 

ವಿಚ್ಛೇದನದ ಬಳಿಕ ಎರಡನೆ ವಿವಾಹವಾಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದು, ತಾನು ಮತ್ತು ತನ್ನ ಮಗುವಿಗೆ ಅಲ್ಲಿಯೇ ನೆಲೆಸಲು ಶಾಶ್ವತ ವೀಸಾ ಪಡೆಯಲು ಅನಮತಿಸುವಂತೆ ಕೋರಿ ರೇಖಾ ಸಲ್ಲಿಸಿದ್ದ ಅರ್ಜಿಯನ್ನು ಮದ್ದೂರಿನ ಸಿವಿಲ್ ನ್ಯಾಯಾಲಯ ವಜಾಗೊಳಿಸಿತ್ತು.

ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಅರ್ಜಿಯನ್ನು ಪುರಸ್ಕರಿಸಿದ್ದು, ಮಗುವಿನೊಂದಿಗೆ ತಾಯಿ ಆಸ್ಟ್ರೇಲಿಯಾದಲ್ಲಿ ನೆಲೆಸುವುದಕ್ಕಾಗಿ ಅವಕಾಶ ಕಲ್ಪಿಸಿದೆ. 

ಅಲ್ಲದೆ, ಮಗುವನ್ನು ವಿದೇಶಕ್ಕೆ ಕರೆದೊಯ್ಯಲು ಅನುಮತಿಸಲು ಮತ್ತೊಂದು ಅರ್ಜಿ ಸಲ್ಲಿಸುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನೂ ರದ್ದುಪಡಿಸಿ ಆದೇಶಿಸಿದೆ.

ಪ್ರಕರಣವೇನು?: ಮದ್ದೂರಿನ ರೇಖಾ ಮತ್ತು ಕುಣಿಗಲ್‍ನ ಹರೀಶ್(ಎಲ್ಲರ ಹೆಸರುಗಳನ್ನು ಬದಲಾಯಿಸಲಾಗಿದೆ) 2006ರಲ್ಲಿ ವಿವಾಹವಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದಾದ ಕೆಲ ದಿನಗಳ ಬಳಿಕ ಇಬ್ಬರ ನಡುವಿನ ವಿವಾದದಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. 

ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅಪ್ರಾಪ್ತ ವಯಸ್ಸಿನ ಮಗನನ್ನು ತಾಯಿಯ ಆರೈಕೆಯಲ್ಲಿರಲು ಅವಕಾಶ ನೀಡಿತ್ತು. ಜತೆಗೆ, ತಿಂಗಳಿಗೆ ಒಮ್ಮೆ ಮಗುವನ್ನು ಭೇಟಿ ಮಾಡಲು ತಂದೆಗೆ ಅವಕಾಶ ನೀಡಿ ವಿಚ್ಛೇದನ ಮಂಜೂರು ಮಾಡಿತ್ತು. ಆದರೆ, ವಿಚ್ಛೇದನದ ಬಳಿಕ ಪತಿ ಒಮ್ಮೆಯೂ ಮಗನನ್ನು ಭೇಟಿ ಮಾಡಲು ಆಗಮಿಸಿರಲಿಲ್ಲ. ಇದಾದ ಬಳಿಕ ರೇಖಾ ಮತ್ತೊಂದು ವಿವಾಹವಾಗಿದ್ದು ಪ್ರವಾಸಿ ವೀಸಾ ಪಡೆದು ಮಗುವಿನೊಂದಿಗೆ ತನ್ನ ಎರಡನೆ ಪತಿಯ ಜತೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು. 

Similar News