'ಪಾಕಿಸ್ತಾನ್ ಝಿಂದಾಬಾದ್' ವಿಡಿಯೋ ಪೋಸ್ಟ್: ಆರೋಪಿಯ ವಿರುದ್ಧದ ಪ್ರಕರಣ ಹೈಕೋರ್ಟ್ ನಿಂದ ರದ್ದು

Update: 2023-01-28 15:59 GMT

ಬೆಂಗಳೂರು, ಜ.28: ಫೇಸ್‍ಬುಕ್ ಖಾತೆಯಲ್ಲಿ ‘ಪಾಕಿಸ್ತಾನ್ ಝಿಂದಾಬಾದ್ ’ ಎಂಬ ಸಂದೇಶವುಳ್ಳ ಪೋಸ್ಟ್ ಮಾಡಿದ್ದ ರಾಯಚೂರಿನ ವ್ಯಕ್ತಿಯೊಬ್ಬರ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. 

ರಾಯಚೂರು ಜಿಲ್ಲೆಯ ಮಾನ್ವಿಯ ಕೆ.ಎಂ.ಭಾಷಾ ತನ್ನ ವಿರುದ್ಧದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. 

ಐಪಿಸಿ ಸೆಕ್ಷನ್ 505 ರಡಿ ದಾಖಲಾಗಿದ್ದ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಕಾಗ್ನಿಜೆನ್ಸ್ ತೆಗೆದುಕೊಳ್ಳುವುದಕ್ಕೂ ಮುನ್ನ ಅಪರಾಧ ದಂಡ ಸಂಹಿತೆ ಸೆಕ್ಷನ್ 196(1)(ಎ) ಅಡಿ ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮವಿದೆ. ಆದರೆ, ತನಿಖಾಧಿಕಾರಿಗಳು ಈ ನಿಯಮವನ್ನು ಪಾಲಿಸಿಲ್ಲ. ಅಲ್ಲದೆ, ಐಪಿಸಿ ಸೆಕ್ಷನ್ 505ರಡಿ ಕಾಗ್ನಿಜೆನ್ಸ್ ತೆಗೆದುಕೊಂಡು ವಿಚಾರಣೆ ಮುಂದುವರಿಸಿದ್ದ ಮತ್ತು ಆರೋಪಪಟ್ಟಿ ಸಲ್ಲಿಸಿದ್ದನ್ನು ರದ್ದುಗೊಳಿಸಲಾಗುವುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ಪ್ರಕರಣ ಸಂಬಂಧ ಹೊಸದಾಗಿ ನಡೆಸುವ ತನಿಖೆಯಲ್ಲಿ ಆರೋಪಗಳನ್ನು ಪುಷ್ಠೀಕರಿಸುವ ಸಾಕಷ್ಟು ದಾಖಲೆಗಳು ದೊರತರೆ, ತನಿಖಾ ಸಂಸ್ಥೆ ಕಾನೂನು ಪ್ರಕಾರ ಅಗತ್ಯ ರೀತಿಯಲ್ಲಿ ಆರೋಪ ಪಟ್ಟಿ ಸಲ್ಲಿಸಲು ಮತ್ತು ಕಾನೂನು ಪ್ರಕ್ರಿಯೆ ಮುಂದುವರಿಸಲು ಎಲ್ಲ ರೀತಿಯ ಸ್ವಾತಂತ್ರ್ಯ ಹೊಂದಿದೆ ಎಂದೂ ನ್ಯಾಯಪೀಠ ಹೇಳಿದೆ.

ಪ್ರಕರಣವೇನು?: ಅರ್ಜಿದಾರ ಭಾಷಾ ಅಕ್ಟೋಬರ್ 2020ರಲ್ಲಿ ತಮ್ಮ ಫೇಸ್‍ಬುಕ್ ಪುಟದಲ್ಲಿ ಪಾಕಿಸ್ತಾನದ ಯೋಧನೊಬ್ಬ ಮಹಿಳೆಯೊಂದಿಗೆ ಮಾತನಾಡುತ್ತಾ ‘ಹರ್ ದಿಲ್ ಕಾ ಆವಾಜ್ ಪಾಕಿಸ್ತಾನ ಝಿಂದಾಬಾದ್’ ಎಂದು ಹೇಳುವ ದೃಶ್ಯಗಳನ್ನು ತಮ್ಮ ಫೇಸ್ ಬುಕ್ ಪೊಸ್ಟ್ ನಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಅದನ್ನು ಇತರ ಗೆಳೆಯರಿಗೆ ಶೇರ್ ಮಾಡಿದ್ದರು. ಆ ಕುರಿತು ಮಾಹಿತಿ ಸ್ವೀಕರಿಸಿದ ಮಾನ್ವಿ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ ತಹಸೀಲ್ದಾರ್ ಕಚೇರಿಗೆ ಹಾಜರು ಪಡಿಸಿದರು. ಅಲ್ಲಿದ್ದ ವ್ಯಕ್ತಿಯನ್ನು ವಿಚಾರಣೆ ನಡೆಸಿದರು. ಆತ ತನ್ನ ಹೆಸರು ಭಾಷೆ ಎಂದು ಹೇಳಿ ಫೇಸ್ ಬುಕ್‍ನಲ್ಲಿ ಪಾಕಿಸ್ತಾನ ಝಿಂದಾಬಾದ್ ಪೋಸ್ಟ್ ಹಂಚಿಕೊಂಡಿರುವುದನ್ನು ಒಪ್ಪಿಕೊಂಡಿದ್ದನು.

ನಂತರ ಪೊಲೀಸರು, ಇಂತಹ ಪೋಸ್ಟ್ ಮೂಲಕ ದೇಶದ ಯೋಧರಿಗೆ ಅಗೌರವ ತೋರಲಾಗುತ್ತಿದೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೇ, ಇದರಿಂದ ಸಮಾಜದಲ್ಲಿನ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ ಎಂಬುದಾಗಿ ಹೇಳಿ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.

Similar News