ಜನಹಿತ ಮರೆತ ಜೆಡಿಎಸ್-ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರವಿಡಿ: ಅಮಿತ್ ಶಾ

Update: 2023-01-28 16:05 GMT

ಬೆಳಗಾವಿ, ಜ, 28: ‘ಮೂವತ್ತೈದರಿಂದ 40 ಸ್ಥಾನ ಗಳಿಸಿ, ಜನಹಿತ ಮರೆತು ಸ್ವಾರ್ಥಕ್ಕಾಗಿ ಅಧಿಕಾರ ಮಾಡುವ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ದೂರವಿಟ್ಟು ಜಗತ್ತಿನಲ್ಲೇ ಭಾರತವನ್ನು ಗುರುತಿಸುವ ಕೆಲಸ ಮಾಡುವ ಬಿಜೆಪಿಯನ್ನು ಬೆಂಬಲಿಸಬೇಕು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ.

ಶನಿವಾರ ಎಂ.ಕೆ.ಹುಬ್ಬಳ್ಳಿಯಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ‘ಜನಸಂಕಲ್ಪ ಯಾತ್ರೆ’ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಜೆಡಿಎಸ್‍ಗೆ ನೀಡುವ ಮತ ಕಾಂಗ್ರೆಸ್‍ಗೆ ಲಾಭವಾಗಲಿದೆ ಎನ್ನುವುದನ್ನು ಮತದಾರರು ಮರೆಯಬಾರದು. ಸೋನಿಯಾ ಮೇಡಂ, ಮಹದಾಯಿಯಿಂದ ಹನಿ ನೀರು ನೀಡುವುದಿಲ್ಲ ಎಂದು ಹೇಳಿದ್ದರು. ಆದರೆ, ಮೋದಿ ಸರಕಾರ ಎರಡು ರಾಜ್ಯದವರನ್ನು ಸಮಾಧಾನದಿಂದ ಈ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ದೇಶದಲ್ಲಿ ಬಡ ದಲಿತರ ಹಾಗೂ ಸ್ತ್ರೀ ಶಕ್ತಿ ಗುಂಪುಗಳಿಗೆ ನಮ್ಮ ಸರಕಾರ ಉತ್ತೇಜನ ನೀಡಿದೆ. ಜಗತ್ತಿನಲ್ಲಿ ಆರ್ಥಿಕ ಮುಂಚೂಣಿ ದೇಶವಾಗಲು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಶ್ರಮಿಸುತ್ತಿದೆ. ಬಡವರಿಗೆ ವಿದ್ಯುತ್, ಮನೆ ಶೌಚಾಲಯ, ಅಡುಗೆ ಅನಿಲ, 5ಲಕ್ಷ ರೂ.ವರೆಗೆ ಆರೋಗ್ಯ ವಿಮೆ ನೀಡುವ ಕಾರ್ಯ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಕೇಂದ್ರದ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ‘ರಾಜ್ಯದಲ್ಲಿ ಹಲವು ಜನಪರ ಯೋಜನೆಗಳನ್ನು ನೀಡುವ ಮೂಲಕ ಪ್ರತಿ ವಾರದಲ್ಲಿ ಹೊಸ ಯೋಜನೆಗಳನ್ನು ಮೋದಿ ನೀಡಿದ್ದಾರೆ. ನಿಮ್ಮ ಅವಧಿಯಲ್ಲಿ ವಿದ್ಯುತ್ ನೀಡದ ಕಾಂಗ್ರೆಸ್ ಇದೀಗ 200 ಯುನಿಟ್ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದೆ. ಕೇವಲ ಸುಳ್ಳು ಹೇಳುವುದರಲ್ಲೆ ಸಿದ್ದರಾಮಯ್ಯ ಅಧಿಕಾರ ನಡೆಸಿದರು ಎಂದು ದೂರಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಸೇರಿದಂತೆ ಸ್ಥಳೀಯ ಶಾಸಕರು, ಮುಖಂಡರು ಪಾಲ್ಗೊಂಡಿದ್ದರು.

Similar News