ಮಕ್ಕಳನ್ನು ಹಾಸ್ಟೆಲ್‍ನಿಂದ ಹೊರ ಹಾಕಿದ್ದು ಕಾನೂನು ಬಾಹಿರ: ನಿರಂಜನಾರಾಧ್ಯ ವಿ.ಪಿ.

Update: 2023-01-28 16:40 GMT

ಬೆಂಗಳೂರು, ಜ. 28: ‘ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ-2013ರ ಭಾಗವಾಗಿ ತಮ್ಮ ಆಹಾರದ ಹಕ್ಕನ್ನು ಕೊಡಮಾಡಿ ಕಾಯಿದೆ ಜಾರಿಗೊಳಿಸಬೇಕಾದ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮುಂದೆ ಮಕ್ಕಳು ತಮ್ಮ ಅಹವಾಲನ್ನು ಹೇಳಿಕೊಂಡರೆ, ಅದನ್ನು ತಕ್ಷಣ ಬಗೆಹರಿಸಿ ನ್ಯಾಯ ಒದಗಿಸಬೇಕಿದ್ದ ಜಿಲ್ಲಾಧಿಕಾರಿ ಮಕ್ಕಳನ್ನೇ ಹಾಸ್ಟೆಲ್‍ನಿಂದ ಹೊರದಬ್ಬಿದ್ದು, ಅತ್ಯಂತ ಖಂಡನೀಯ ಹಾಗು ಕಾನೂನು ಬಾಹಿರ ಎಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ-ಕರ್ನಾಟಕ ಆಕ್ರೋಶ ವ್ಯಕ್ತಪಡಿಸಿದೆ.

ಶನಿವಾರ ಈ ಸಂಬಂಧ ಸಮನ್ವಯ-ಕರ್ನಾಟಕದ ಪ್ರಧಾನ ಸಂಚಾಲಕ ಡಾ.ನಿರಂಜನಾರಾಧ್ಯ ವಿ.ಪಿ. ಪ್ರಕಟನೆ ನೀಡಿದ್ದು, ‘ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೇಲುಸ್ತುವಾರಿಯನ್ನು ಜಿಲ್ಲಾಧಿಕಾರಿ ಹಾಗು ಜಿಲ್ಲಾ ದಂಡಾಧಿಕಾರಿಯ ಪ್ರಮುಖ ಜವಾಬ್ದಾರಿ ಹಾಗು ಕರ್ತವ್ಯ. ತನ್ನ ಕರ್ತವ್ಯವನ್ನು ಪಾಲಿಸಬೇಕಾದ ಜಿಲ್ಲಾಧಿಕಾರಿ ಮಕ್ಕಳನ್ನು ಹಾಸ್ಟೆಲ್‍ನಿಂದ ಹೊರಹಾಕಿರುವುದು, ರಕ್ಷಣೆ ನೀಡಬೇಕಾದವರೇ ದೌರ್ಜನ್ಯ ನಡೆಸಿದಂತಾಗಿದೆ’ ಎಂದು ತಿಳಿಸಿದ್ದಾರೆ.

‘ಜಿಲ್ಲಾಧಿಕಾರಿಗಳನ್ನು ಒಳಗೊಂಡಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ವಿಚಾರಣೆ ನಡೆಸಬೇಕು. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ಅನ್ವಯ ಎಲ್ಲ ಮಕ್ಕಳು, ತಮ್ಮ ಹಕ್ಕುಗಳಿಗೆ ಸಂಬಂಧಿಸಿದಂತೆ ಮುಕ್ತವಾಗಿ ಅಭಿಪ್ರಾಯ ತಿಳಿಸುವ ಹಕ್ಕನ್ನು ಹೊಂದಿದ್ದಾರೆ. ಅವರ ಹಕ್ಕನ್ನೆ ಕಸಿಯುವ ಅಧಿಕಾರಿಗಳ ಧೋರಣೆ ಮತ್ತು ಕ್ರಮ ಮಕ್ಕಳ ಹಕ್ಕುಗಳ ಒಡಂಬಡಿಕೆ ಉಲ್ಲಂಘನೆಯಾಗಿದ್ದು, ಅಧಿಕಾರಿಯ ಈ ಕ್ರಮವನ್ನು ಮುಖ್ಯ ಕಾರ್ಯದರ್ಶಿಯವರು ಗಂಭೀರವಾಗಿ ಪರಿಗಣಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

Similar News