ಸೋಲಿನ ಭಯದಿಂದಲೇ ಮೋದಿ, ಶಾರನ್ನು ಪದೇ ಪದೇ ಕರ್ನಾಟಕಕ್ಕೆ ಕರೆತರುತ್ತಿದ್ದಾರೆ: ಸಿದ್ದರಾಮಯ್ಯ ಟೀಕೆ

Update: 2023-01-28 16:35 GMT

ಕಲಬುರಗಿ, ಜ. 28: ‘ರಾಜ್ಯ ಬಿಜೆಪಿ ಸರಕಾರದ ಭ್ರಷ್ಟಾಚಾರ, ಜನ ವಿರೋಧಿ ಆಡಳಿತದಿಂದ ಆ ಪಕ್ಷದ ನಾಯಕರಿಗೆ ಭಯ ಆರಂಭವಾಗಿದೆ. ಹೀಗಾಗಿಯೇ ಮೋದಿ, ಅಮಿತ್ ಶಾ ಹಾಗೂ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಪದೇ ಪದೇ ರಾಜ್ಯಕ್ಕೆ ಕರೆತರುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಮಗೆ ಯಾವುದೇ ಭಯವಿಲ್ಲ. ಬಿಜೆಪಿಯವರಿಗೆ ಭಯ ಕಾಡುತ್ತಿದೆ. ಈ ಸರಕಾರದಲ್ಲಿ ಲಂಚ ನೀಡದೆ ಯಾವುದೇ ಕೆಲಸ ಆಗುವುದಿಲ್ಲ ಎಂದು ರಾಜ್ಯದ ಜನರೆ ಮಾತನಾಡುತ್ತಿದ್ದಾರೆ. ಹೀಗಾಗಿ ಇವರಿಗೆ ಪಾಠ ಕಲಿಸಲು ಜನತೆ ಚುನಾವಣೆಯನ್ನು ಎದುರು ನೋಡುತ್ತಿದ್ದಾರೆ ಎಂದು ನುಡಿದರು.

ಕಾಂಗ್ರೆಸ್ ಪಕ್ಷಕ್ಕೆ ಭಯವಿದ್ದರೆ ಮೋದಿ, ಅಮಿತ್ ಶಾ ಮತ್ತು ನಡ್ಡಾ ಅವರನ್ನು ಪದೇ ಪದೆ ಕರ್ನಾಟಕ ರಾಜ್ಯಕ್ಕೆ ಕರೆಯಿಸಿಕೊಳ್ಳುತ್ತಿರುವುದು ಏಕೆ? ವಾಸ್ತವ ಸ್ಥಿತಿ ಹೀಗಿರುವಾಗ ನಮಗೇಕೆ ಅವರ ಭಯ ಹೇಳಿ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಬಿಜೆಪಿ ಸರಕಾರಕ್ಕೆ ಈವರೆಗೆ ಒಂದೇ ಒಂದು ಮನೆ ಕೊಡಲು ಆಗಲಿಲ್ಲ. ಹೀಗಾಗಿ ಅವರಿಗೆ ಸೋಲಿನ ಭೀತಿ ಆವರಿಸಿದೆ ಎಂದು ದೂರಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಬಗ್ಗೆ ಮಾತನಾಡುವುದಿಲ್ಲ. ಅವರೇನಿದ್ದರೂ ಬರೀ ಸುಳ್ಳುಗಳನ್ನು ಹೇಳುತ್ತಾರೆ. ಇಷ್ಟಕ್ಕೂ ಕಲಬುರಗಿ, ಮುಂಬೈ ಕರ್ನಾಟಕದಲ್ಲಿ ಜೆಡಿಎಸ್ ಎಲ್ಲಿದೆ ಎಂದ ಸಿದ್ದರಾಮಯ್ಯ, ‘ಪ್ರ್ರಜಾಧ್ವ’ ಯಾತ್ರೆಗೆ ಜನರಿಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಸಮುಯದ ಅಭಾವದ ಹಿನ್ನೆಲೆಯಲ್ಲಿ ಪ್ರತ್ಯೇಕ ಗುಂಪುಗಳನ್ನು ರಚನೆ ಮಾಡಿಕೊಂಡು ಯಾತ್ರೆಗೆ ಮಾಡಲಾಗುತ್ತಿದೆ ಎಂದರು.

‘ಸರಕಾರದ ಬೆಂಬಲವಿಲ್ಲದೆ ಹಗರಣಗಳಲ್ಲಿ ಯಾರೂ ಕಿಂಗ್‍ಪಿನ್ ಆಗಲು ಸಾಧ್ಯವಿಲ್ಲ. ಸಿಎಂ, ಗೃಹ ಸಚಿವರು, ಡಿಜಿ ಸೇರಿದಂತೆ ಎಲ್ಲ ಅಧಿಕಾರಗಳ ಆಶೀರ್ವಾದ ಇಲ್ಲದೆ, ಪಿಎಸ್ಸೈ ನೇಮಕಾತಿ ಅಕ್ರಮ ನಡೆಸಲು ಸಾಧ್ಯವಿಲ್ಲ. ಈ ಸರಕಾರ ಎಲ್ಲ ನೇಮಕಾತಿಯಲ್ಲಿ ಅಕ್ರಮ, ಭ್ರಷ್ಟಾಚಾರ ನಡೆಸಿ ಯುವಕರ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದೆ. ಈ ಭ್ರಷ್ಟ-ದುಷ್ಟ ಸರಕಾರವನ್ನು ಹೊರ ಹಾಕುವುದು ಕಾಂಗ್ರೆಸ ಗುರಿ’

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ 

Similar News