ನಮ್ಮಲ್ಲಿ ಯಾರ ಗೇಟನ್ನೂ ಕಾಯಬೇಕಿಲ್ಲ, ಭವಾನಿ ರೇವಣ್ಣ ಬಿಜೆಪಿಗೆ ಬಂದರೆ ಸ್ವಾಗತ: ಸಚಿವ ಅಶ್ವತ್ಥ ನಾರಾಯಣ

Update: 2023-01-28 17:28 GMT

ಮೈಸೂರು,ಜ.28: ನಮ್ಮ ಪಕ್ಷದಲ್ಲಿ ಯಾರ ಮನೆಯನ್ನೂ ಕಾಯಬೇಕಿಲ್ಲ, ಯಾರ ಗೇಟನ್ನೂ ಕಾಯಬೇಕಿಲ್ಲ, ಬಿಜೆಪಿಯಲ್ಲಿ ಮುಕ್ತವಾಗಿ ಬೆಳೆಯುವ ಅವಕಾಶವಿದೆ. ಹೀಗಾಗಿ ಜೆಡಿಎಸ್​ ನ ಭವಾನಿ ರೇವಣ್ಣ ಅವರು ಬಿಜೆಪಿಗೆ ಬಂದರೆ ಹೃದಯಪೂರ್ವಕ ಸ್ವಾಗತ ಎಂದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಹೇಳಿದ್ದಾರೆ. 

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಕುವೆಂಪುನಗರದಲ್ಲಿರುವ ನಿವಾಸಕ್ಕೆ ಶನಿವಾರ ಆಗಮಿಸಿ ಅವರಿಗೆ ಅಭಿನಂದನೆ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

''ಕಾಂಗ್ರೆಸ್ ನವರು ಪುರುಸೊತ್ತಾಗಿದ್ದಾರೆ. ಹಾಗಾಗಿ ಪ್ರಜಾಧ್ವನಿ ಯಾತ್ರೆ ನಡೆಸಿ  ಮೋದಿ, ಅಮಿತ್ ಶಾ ಕುರಿತು ವ್ಯಂಗ್ಯವಾಡುವ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಆದರೆ ಇವರು ಎಷ್ಟೇ ಪ್ರಚಾರ ಮಾಡಿದರೂ ಪ್ರಜಾಧ್ವನಿ ಯಾತ್ರೆಯಲ್ಲಿರುವ ಬಸ್ ನ ಸೀಟಿನಷ್ಟೇ ಸ್ಥಾನ ಗೆಲ್ಲಲು ಸಾಧ್ಯ'' ಎಂದು ವ್ಯಂಗ್ಯವಾಡಿದರು.

ಪ್ರಜಾಧ್ವನಿ ಯಾತ್ರೆ ಮೂಲಕ ಮೋದಿ, ಅಮಿತ್ ಶಾ ಕುರಿತು ಕಾಂಗ್ರೆಸ್ ನವರು ವ್ಯಂಗ್ಯವಾಡುತ್ತಿರುವ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ನವರು ಪುರಸೊತ್ತಾಗಿದ್ದಾರೆ. ಹಾಗಾಗಿ ಅವರು ಜನರಿಗೆ ಮನರಂಜನೆ ಕೊಡುತ್ತಿದ್ದಾರೆ. ಇವರು ಎಷ್ಟೇ ನಾಟಕ ಮಾಡಿದರು ಇವರ ಪ್ರಜಾಧ್ವನಿ ಬಸ್ ನ ಸೀಟಿನಲ್ಲಿರುವ 50-52 ಸೀಟಿನಷ್ಟೇ ಸ್ಥಾನ ಗೆಲ್ಲುವುದು ಎಂದು ಹೇಳಿದರು.

ಸಿದ್ಧರಾಮಯ್ಯ ಆಡಳಿತದ ಅವಧಿಯಲ್ಲಿ ನಡೆದಿರುವಷ್ಟು ಭ್ರಷ್ಟಾಚಾರ ಯಾವ ಕಾಲದಲ್ಲೂ ನಡೆದಿಲ್ಲ, ಇವರ ಅವಧಿಯಲ್ಲಿ ರೀಡೂ, ಅರ್ಕಾವತಿ ಢಿನೋಟಿಫೈ, ಮರಳು ದಂಧೆ,  ಅರ್ಜಿ ಹಾಕದೇ ಇರುವ ಶಿಕ್ಷಕರ ನೇಮಕ ಸೇರಿದಂತೆ ಹಲವಾರು ಭ್ರಷ್ಟಾಚಾರಗಳು ನಡೆದಿವೆ. ನಾವು ಎಸಿಬಿಯಲ್ಲಿ ಮರೆಮಾಚಿದ್ದನ್ನು ಹೊರತೆಗೆಯಲು ಇಷ್ಟು ದಿನ ಹಿಡಿಯಿತು. ಈಗ ಇವರ ಆಡಳಿತದ ಕುರಿತು ತನಿಖೆ ನಡೆಸಲಿದ್ದೇವೆ ಎಂದು ಹೇಳಿದರು.

ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಒಂದೇ ಸೀಟಿನಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದಾರೆ. ಇಬ್ಬರ ಬೆನ್ನ ಹಿಂದೆ ಒಬ್ಬರು ಚೂರಿ ಹಿಡಿದುಕೊಂಡಿದ್ದಾರೆ. ಯಾರು ಯಾರಿಗೆ ಚುಚ್ಚುತ್ತಾರೊ ನೋಡಬೇಕಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಇಬ್ಬರೂ ಕಿತ್ತಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೆ ಎಂದು ಹೇಳಿದರು.

Similar News