ಪ್ರವೀಣ್‌ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಫಾಝಿಲ್‌ ಕೊಲೆ: ಬಹಿರಂಗ ಹೇಳಿಕೆ ನೀಡಿದ ಶರಣ್‌ ಪಂಪ್‌ವೆಲ್

Update: 2023-01-29 11:41 GMT

ಮಂಗಳೂರು: ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಕೊಲೆಯನ್ನು ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರ ಎಂದು ಬಜರಂಗದಳ ನಾಯಕ ಶರಣ್ ಪಂಪ್ ವೆಲ್ ಸಮರ್ಥಿಸಿಕೊಂಡಿದ್ದು, ಈ ಕುರಿತ ವೀಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ತುಮಕೂರಿನಲ್ಲಿ ನಡೆದ ಶೌರ್ಯಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಪ್ರವೀಣ್ ನೆಟ್ಟಾರ್ ಹತ್ಯೆಯಲ್ಲಿ ಯಾರು ಮುಸಲ್ಮಾನ ಜಿಹಾದಿಗಳಿದ್ದಾರೆ, ಅವರಿಗೆ ಉತ್ತರವನ್ನು ಕೊಡಬೇಕೆನ್ನುವ ಕಾರಣಕ್ಕೋಸ್ಕರ ಸುರತ್ಕಲ್ ನಲ್ಲಿ ಇದ್ದಂತಹ ಬಿಸಿ ನೆತ್ತರಿನ ಯುವಕರು, ಯಾರು ಇಲ್ಲದ ಸಮಯದಲ್ಲದಲ್ಲ, ಇಡೀ ಮಾರ್ಕೆಟ್ ನಲ್ಲಿದ್ದ ಜನರ ಎದುರೇ ನುಗ್ಗಿ ನುಗ್ಗಿ ಹೊಡೆದು ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತಿಕಾರ ನೀಡ್ತಾರಲ್ವ ಅದು ಹಿಂದೂ ಯುವಕರ ತಾಕತ್ತು" ಎಂದು ಶರಣ್ ಪಂಪ್ ವಲ್ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದಾರೆ.

2022 ರ ಜುಲೈ 26 ರಂದು ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದ ಎರಡು ದಿನದೊಳಗೆ (ಜುಲೈ 28) ಸಾರ್ವಜನಿಕವಾಗಿಯೇ ಕೆಲ ದುಷ್ಕರ್ಮಿಗಳು ಸುರತ್ಕಲ್ ನ ಮುಹಮ್ಮದ್ ಫಾಝಿಲ್‌ ಎಂಬ ಯುವಕನ್ನು ಕೊಲೆಗೈದಿದ್ದರು. ಪ್ರವೀಣ್‌ ನೆಟ್ಟಾರು ಪ್ರಕರಣವನ್ನು NIA ತನಿಖೆಗೆ ವಹಿಸಿದ್ದ ಸರಕಾರ ಎರಡೇ ದಿನದಲ್ಲಿ ನಡೆದ ಫಾಝಿಲ್ ಕೊಲೆಯನ್ನು NIAಗೆ ವಹಿಸಿಲ್ಲ ಮತ್ತು ಫಾಝಿಲ್ ಕೊಲೆಯಲ್ಲಿ ನೇರವಾಗಿ ಭಾಗಿಯಾದ ಆರೋಪಿಗಳನ್ನು ಮಾತ್ರ ಬಂಧಿಸಲಾಗಿದೆ. ಕೊಲೆಗೆ ಷಡ್ಯಂತ್ರ ರೂಪಿಸಿದ ಸೂತ್ರದಾರಿಗಳನ್ನು ಬಂಧಿಸಿಲ್ಲ ಎಂದು ಫಾಝಿಲ್ ನ ತಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಬಹಿರಂಗವಾಗಿಯೇ ಕೊಲೆಗೆ ಪ್ರಚೋದನೆ ನೀಡುವ ಹೇಳಿಕೆ ನೀಡುತ್ತಿರುವ ಶರಣ್‌ ಪಂಪ್‌ವೆಲ್‌ ನನ್ನು ಬಂಧಿಸಿ, ವಿಚಾರಣೆಗೊಳಪಡಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಒತ್ತಾಯಿಸಿದ್ದಾರೆ.

Full View

Similar News