ಕರ್ನಾಟಕದಲ್ಲಿ ಬಿಜೆಪಿ ಪರ ಅಲೆ: ಮುಖ್ಯಮಂತ್ರಿ ಬೊಮ್ಮಾಯಿ

Update: 2023-01-29 13:21 GMT

ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಒಂದು ದಿನದ ಕರ್ನಾಟಕ ಭೇಟಿಯಿಂದ ಕಿತ್ತೂರು ಕರ್ನಾಟಕ ಭಾಗದಲ್ಲಿ ಸಂಚಲನ ಉಂಟು ಮಾಡಿದ್ದು, ಕರ್ನಾಟಕದಲ್ಲಿ ಬಿಜೆಪಿ ಅಲೆ ಎದ್ದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಗಟ್ಟಿ ಹಾಗೂ ಪ್ರಬಲವಾಗಿದೆ. ಅದಕ್ಕೆ ಇನ್ನಷ್ಟು ಶಕ್ತಿ, ಹುರುಪು, ಹುಮ್ಮಸ್ಸನ್ನು ಅಮಿತ್ ಶಾ ನೀಡಿದ್ದಾರೆ. ಸಾರ್ವಜನಿಕರಲ್ಲಿ ಇರುವ ಭಾವನೆಗಳು ಎಲ್ಲ ಸಭೆಗಳಲ್ಲಿ ವ್ಯಕ್ತವಾಗಿದೆ ಎಂದು ತಿಳಿಸಿದರು. 

ಬಿಜೆಪಿ ಗೆಲವು ಖಂಡಿತ: ಕಾಂಗ್ರೆಸ್‍ನವರು ನಾವೇ ಅಧಿಕಾರಕ್ಕೆ ಬಂದೇಬಿಟ್ಟಿದ್ದೇವೆಂದು ಫೋಜ್ ಕೊಡುತ್ತಿದ್ದಾರೆ. ಯಾರು ಏನೇ ಹೇಳಲಿ, ಸತ್ಯ ಬೇರೆಯೇ ಇದೆ. ನಮ್ಮ ನಾಯಕರು ಬಂದ ಸಂದರ್ಭದಲ್ಲಿ ಅದು ಅಭಿವ್ಯಕ್ತವಾಗುತ್ತಿದೆ. ಜನ ದೊಡ್ಡ ಸಂಖ್ಯೆಯಲ್ಲಿ ಬರುವುದಷ್ಟೇ ಅಲ್ಲ, ಹುರುಪು, ಸ್ಫೂರ್ತಿ ವ್ಯಕ್ತವಾಗುತ್ತಿರುವುದರಿಂದ ನಮ್ಮ ಗೆಲವು ಖಂಡಿತ. ಪಕ್ಷದ ಸಂಘಟನೆ ಬೂತ್ ಮಟ್ಟದಿಂದ ಪ್ರಬಲವಾಗಿದೆ. ಅದೆ ನಮ ಆಧಾರ ಮತ್ತು ಶಕ್ತಿ ಎಂದು ನುಡಿದರು. 

ಬೆಳಗಾವಿ ಸಭೆಯಲ್ಲಿ ರಾಜ್ಯದ ನಾಯಕರಿಗೆ ವಿಶೇಷ ಸೂಚನೆ ಕೊಟ್ಟಿಲ್ಲ. ಆದರೆ ರಾಜ್ಯ ಮಟ್ಟದಲ್ಲಿ ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಸೂಚನೆ ಕೊಟ್ಟಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು. 

ಒಂದೂವರೆ ವರ್ಷಗಳಿಂದ ಆರೋಪ-ಪ್ರತ್ಯಾರೋಪವನ್ನು ಮಾಡಿಲ್ಲ. ನನ್ನ ಮೇಲೆ ಹಲವು ಇಲ್ಲಸಲ್ಲದ ಮಾತುಗಳನ್ನಾಡಿದಾಗಲೂ ನಾನು ಅತ್ಯಂತ ಸಂಯಮದಿಂದ ಉತ್ತರ ಕೊಟ್ಟಿದ್ದೇನೆ.  ಕರ್ನಾಟಕದ ರಾಜಕೀಯ ಸಂಸ್ಕೃತಿ ವ್ಯಕ್ತಿ ಆಧಾರಿತವಲ್ಲ ಅಥವಾ ದ್ವೇಷ ಆಧಾರಿತವಲ್ಲ. ವಿಷಯಾಧಾರಿತ ಹಾಗೂ ಅಭಿವೃದ್ಧಿಯಾಧಾರಿತ. ನಾವು ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗಳನ್ನು ಇಟ್ಟುಕೊಂಡೇ ಜನರ ಮುಂದೆ ಹೋಗುತ್ತಿದ್ದೇವೆ ಎಂದು ಹೇಳಿದರು.

ನಾವು ಯಾವುದೇ ಟೀಕೆ ಟಿಪ್ಪಣಿಗಳನ್ನು ಮಾಡದೇ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾಧನೆಗಳನ್ನು ಆಧರಿಸಿಯೇ ಚುನಾವಣೆಗೆ ಹೋಗುತ್ತಿದ್ದೇವೆ. ನಕಾರಾತ್ಮಕ ವಿಚಾರಗಳಿಲ್ಲ. ಕಾಂಗ್ರೆಸ್ ಪಕ್ಷ ವಿಶೇಷವಾಗಿ 

ಬಹಳ ಹತಾಶರಾಗಿದ್ದಾರೆ. ಅವರು ಬಳಸುವ ಭಾಷೆಯಲ್ಲಿ ವ್ಯಕ್ತವಾಗ್ತಿದೆ. ಕರ್ನಾಟಕದ ರಾಜಕಾರಣದಲ್ಲಿ ಎಂದೆಂದೂ ಬಳಸದ ಭಾಷೆ ಬಳಸುವುದನ್ನು ನಾವು ಕಾಣುತ್ತಿದ್ದೇವೆ. ಇದು ಹತಾಶೆಯ ಸಂಕೇತ ಎಂದು ಟೀಕಿಸಿದರು. 

ಬಿ.ಎಲ್.ಸಂತೋಷ್ ಪಕ್ಷದ ಸಂಘಟಾನತ್ಮಕ ವಿಷಯವಾಗಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಮೈಸೂರು, ಮಂಡ್ಯ, ಬಾಗಲಕೋಟೆ, ಬಿಜಾಪುರಕ್ಕೆ ಭೇಟಿ ನೀಡಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ವಿಚಾರವಿದ್ದರೂ ಅಂತಿಮವಾಗಿ ಪಕ್ಷದ ಹಿರಿಯರು ಹೇಳುವುದನ್ನು ಕೇಳುತ್ತೇವೆ. ಬೆಳಗಾವಿಯಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದು ಸ್ಪಷ್ಟಣೆ ನೀಡಿದರು.

ಇದನ್ನು ಓದಿ: ವಿಟ್ಲ: ಬಸ್ ನಿಲ್ದಾಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ


 

Similar News