ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ: ಯಡಿಯೂರಪ್ಪ

Update: 2023-01-29 13:19 GMT

ಬೆಳಗಾವಿ: ‘ಮುಖ್ಯಮಂತ್ರಿ ಹುದ್ದೆಗೆ ನಾನು ಈಗಾಗಲೇ ರಾಜೀನಾಮೆ ನೀಡಿದ್ದು, ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ನನಗೆ ಈಗಾಗಲೇ 80 ವರ್ಷ ವಯಸ್ಸಾಗಿದ್ದು, ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಪಕ್ಷ ಕಟ್ಟಲು ಶ್ರಮಿಸುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸ್ಪಷ್ಟಣೆ ನೀಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪುತ್ರರಾದ ಬಿ.ವೈ. ರಾಘವೇಂದ್ರ ಸಂಸದರಾಗಿದ್ದು, ಬಿ.ವೈ.ವಿಜಯೇಂದ್ರ ಪಕ್ಷದ ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆಗಾಗಿ ಪ್ರವಾಸ ಮಾಡುತ್ತಿದ್ದಾರೆ. ವಿಜಯೇಂದ್ರ ಜೊತೆಗೆ ನಾನೂ ಓಡಾಡುತ್ತಿದ್ದೇನೆ, ನಾನೇನು ಇನ್ನೂ ನಿವೃತ್ತಿ ಆಗಿಲ್ಲ. ಈ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಓಡಾಡುತ್ತೇನೆ ಎಂದು ನುಡಿದರು.

ದೇವರು ಶಕ್ತಿ ನೀಡಿದರೆ ಮುಂದಿನ ಚುನಾವಣೆವರೆಗೂ ಪಕ್ಷಕ್ಕೆ ದುಡಿಯುತ್ತೇನೆ. ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಪ್ರಯತ್ನಿಸುವೆ. ನಾನೇನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ, ವಾಜಪೇಯಿ ಪ್ರಧಾನಿ ಆಗಿದ್ದ ವೇಳೆ ಅವರು ನನ್ನನ್ನು ಆಹ್ವಾನಿಸಿದ್ದರು. ಪಕ್ಷ ರಾಜ್ಯದಲ್ಲಿ ನನಗೆ ಎಲ್ಲ ಸ್ಥಾನಮಾನ, ಅಧಿಕಾರ, ಗೌರವ ನೀಡಿದೆ. ಅದರ ಋಣ ತೀರಿಸುವ ಜವಾಬ್ದಾರಿ ನನ್ನದು ಎಂದು ಹೇಳಿದರು.

ಮೂರು ತಿಂಗಳಲ್ಲಿ ಚುನಾವಣೆ ಎದುರಿಸಲಿದ್ದೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನಮಗೆ ಮಾರ್ಗದರ್ಶನ ಮಾಡಿದ್ದು, ಬರುವ ಚುನಾವಣೆಯಲ್ಲಿ ನಾವು 140 ಸ್ಥಾನ ಪಡೆಯುತ್ತೇವೆ. ಯಾರೋ ನಾನೇ ಮುಂದಿನ ಮುಖ್ಯಮಂತ್ರಿ ಎಂದು ತಿರುಕನ ಕನಸು ಕಾಣುತ್ತಿದ್ದಾರೆ. ಅದು ನನಸಾಗಲ್ಲ. ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

‘ಬಿಜೆಪಿ ಟಿಕೆಟ್‍ಗಾಗಿ ಬಹುತೇಕ ಕ್ಷೇತ್ರಗಳಲ್ಲಿ ಪೈಪೋಟಿ ಏರ್ಪಟ್ಟಿದ್ದು, ಗೆಲ್ಲುವ ಅಭ್ಯರ್ಥಿಗಳಿದ್ದಾರೆ. ಜತೆಗೆ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆಯೂ ಬಹಳಷ್ಟು ಇರುತ್ತದೆ. ನಾವೆಲ್ಲರೂ ಕುಳಿತು ಚರ್ಚೆ ಮಾಡಿ ನಂತರವೇ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ಒಂದಲ್ಲ, ಎರಡು ಸರ್ವೇ ಮಾಡಿಸಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡುತ್ತೇವೆ’
-ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ

ಇದನ್ನೂ ಓದಿ: ಪ್ರವೀಣ್‌ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಫಾಝಿಲ್‌ ಕೊಲೆ: ಬಹಿರಂಗ ಹೇಳಿಕೆ ನೀಡಿದ ಶರಣ್‌ ಪಂಪ್‌ವೆಲ್

Similar News