ಸುಧಾಕರ್ ಆರೋಗ್ಯ ಇಲಾಖೆಗೆ ಗ್ರಹಣವಿದ್ದಂತೆ, ಕಮಿಷನ್ ಒಂದೇ ಅವರ ಧ್ಯೇಯ: ಕಾಂಗ್ರೆಸ್ ಟೀಕೆ

Update: 2023-01-29 13:25 GMT

ಬೆಂಗಳೂರು: ‘ಇತ್ತೀಚಿಗೆ ನಡೆದ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ ಕಾರಣ ಗರ್ಭಿಣಿ, ಮಗುವಿನ ಸಾವಿನ ಪ್ರಕರಣ ರಾಜ್ಯದ ಆರೋಗ್ಯ ಇಲಾಖೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿ. ಕೊರೋನ ಸಮಯದಲ್ಲಿನ ಸವಾಲುಗಳಿಂದ ಪಾಠ ಕಲಿಯದ, ಸುಧಾರಣಾ ಕ್ರಮ ಕೈಗೊಳ್ಳದ ಸಚಿವ ಡಾ.ಸುಧಾಕರ್ ಅವರು ಆರೋಗ್ಯ ಇಲಾಖೆಗೆ ಹಿಡಿದ ಗ್ರಹಣವಿದ್ದಂತೆ. ಕಮಿಷನ್ ಒಂದೇ ಅವರ ಧ್ಯೇಯ!’ ಎಂದು ಕಾಂಗ್ರೆಸ್ ಟೀಕಿಸಿದೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘108 ಆಂಬುಲೆನ್ಸ್ ಅವ್ಯವಸ್ಥೆಗಳು, ವೆಂಟಿಲೇಟರ್ ಅವ್ಯವಸ್ಥೆಯಿಂದ ಬಳ್ಳಾರಿ ವಿಮ್ಸ್ ನಲ್ಲಿನ ಸಾವುಗಳು, ಹಾಸನದಲ್ಲಿ ಚಿಕಿತ್ಸೆ ನಿರಾಕರಿಸಿ ಗರ್ಭಿಣಿಯ ಸಾವು, ಚಾಮರಾಜನಗರ ಆಕ್ಸಿಜನ್ ದುರಂತ, ಕಾರ್ಯನಿರ್ವಹಿಸದ ಡಯಾಲಿಸಿಸ್ ಕೇಂದ್ರಗಳು, ಒಂದೇ ಬೆಡ್‍ನಲ್ಲಿ 3 ರೋಗಿಗಳು, ಇದಕ್ಕೆ ಆರೋಗ್ಯ ಇಲಾಖೆಗೆ ಹಿಡಿದ ‘ಸುಧಾಕರ್' ಎಂಬ ಗ್ರಹಣವೇ ಕಾರಣ’ ಎಂದು ದೂರಿದೆ.

‘ನಮ್ಮ ದೇಶ ಹಾಗೂ ನಮ್ಮ ರಾಜ್ಯ ರೂಪುಗೊಂಡಿದ್ದೇ ಚಳವಳಿ, ಪ್ರತಿಭಟನೆ, ಸತ್ಯಾಗ್ರಹಗಳ ಮೂಲಕ. ಪ್ರತಿಭಟನೆ ಎನ್ನುವುದು ದೇಶವಾಸಿಗಳ ಬಹುಮುಖ್ಯ ಹಕ್ಕು. ಜನಧ್ವನಿಯ ಬಗ್ಗೆ ಗೌರವವಿಲ್ಲದ ಬಿಜೆಪಿ ಪ್ರತಿಭಟನಾ ಸ್ಥಳವಾದ ಫ್ರಿಡಂಪಾರ್ಕ್‍ನಲ್ಲಿ ಶೌಚಾಲಯ, ಕುಡಿಯುವ ನೀರಿನಂತಹ ಮೂಲಸೌಕರ್ಯ ಒದಗಿಸದೆ ಜನರ ದನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ: ಯಡಿಯೂರಪ್ಪ

Similar News