ನಾನೇಕೆ ಹೊಸಪಕ್ಷ ಕಟ್ಟಲಿ: ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು

Update: 2023-01-29 17:57 GMT

ರಾಮನಗರ: ‘ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು ಎಂದು ನಾನೇಕೆ ಹೊಸ ಪಕ್ಷ ಕಟ್ಟಲಿ. ಅವರು ಹೇಳಿದರೂ ಅಂತ ನಾನು ಹೊಸ ಪಕ್ಷ ಕಟ್ಟಲು ಹೋಗುತ್ತೇನೆಯೇ? ಈ ಹೇಳಿಕೆ ಅವರ ಹತಾಶೆ ಮನೋಭಾವದ ಪ್ರತೀಕ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ತಿರುಗೇಟು ನೀಡಿದ್ದಾರೆ.

ರವಿವಾರ ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ಶಾದಿಮಹಲ್ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ‘ಜೆಡಿಎಸ್ ಪಕ್ಷಕ್ಕೆ ಯಾವುದೇ ತತ್ವ, ಸಿದ್ಧಾಂತಗಳಿಲ್ಲ. ಹೀಗಾಗಿಯೇ ಆ ಜೆಡಿಎಸ್, ನಮ್ಮ ಮತಗಳನ್ನು ಒಡೆದು ಬಿಜೆಪಿಗೆ ಅನುಕೂಲ ಮಾಡಿಕೊಡಲು ಹೊರಟಿದೆ. ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ’ ಎಂದು ಹೇಳಿದರು.

10 ಸಾವಿರ ಕೋಟಿ ರೂ.ಅನುದಾನ: ‘ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರಿಗೆ ಹಾಲಿನ ದರ ಹೆಚ್ಚಿಸುತ್ತೇವೆ. ಅಲ್ಪಸಂಖ್ಯಾತರಿಗೆ 10ಸಾವಿರ ಕೋಟಿ ರೂ.ಅನುದಾನ ಕೊಡುತ್ತೇವೆ’ ಎಂದ ಅವರು, ‘ನಾವೇನು ನಮ್ಮ ಅಪ್ಪನ ಮನೆಯಿಂದ ಹಣವನ್ನು ತಂದು ಕೊಡುವುದಿಲ್ಲ. ಜನತೆ ತೆರಿಗೆ ಹಣವನ್ನು ಜನರಿಗೆ ಕೊಡುತ್ತೇವೆ’ ಎಂದು ಹೇಳಿದರು.

‘ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಯಾವುದೇ ಜಾತಿ ನೋಡಿಡುತ್ತಿರಲಿಲ್ಲ. ಹಸಿವು ಒಂದೊಂದು ಜಾತಿಗೆ ಒಂದೊಂದು ರೀತಿ ಇರುವುದಿಲ್ಲ. ಹೀಗಾಗಿಯೇ ನಾನು ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ಕೂಡಲೇ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದೆ. ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುತ್ತೇವೆ’ ಎಂದು ಅವರು ಭರವಸೆ ನೀಡಿದರು.

Similar News