ಸೀಡಿ ತಯಾರಿಸಿ ಬ್ಲ್ಯಾಕ್‌ ಮೇಲ್, ಡಿಕೆಶಿ ವಿರುದ್ಧ ಸಿಬಿಐ ತನಿಖೆಯಾಗಲಿ​: ರಮೇಶ್ ಜಾರಕಿಹೊಳಿ

Update: 2023-01-30 13:15 GMT

ಬೆಳಗಾವಿ, ಜ. 30: ‘ನಾನು ಮುಂದಿನ ವಿಧಾನಸಭೆ ಚುನಾವಣೆಗೆ ನಿಲ್ಲುತ್ತಿರಲಿಲ್ಲ. ಆದರೆ, ಆ ‘ಮಹಾನಾಯಕ’ನಿಗೆ ಸವಾಲು ಹಾಕುವ ಉದ್ದೇಶದಿಂದಲೇ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ’ ಎಂದು ಮಾಜಿ ಸಚಿವ ಹಾಗೂ ಗೋಕಾಕ್ ಕ್ಷೇತ್ರದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಸೋಮವಾರ ಜಿಲ್ಲೆಯ ಗೋಕಾಕ್ ತಾಲೂಕಿನ ಕೊನ್ನೂರಿನಲ್ಲಿ ಏರ್ಪಡಿಸಿದ್ದ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಏನೇ ತ್ಯಾಗ ಮಾಡಿಯಾದರೂ 2023ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಮುಖ್ಯಮಂತ್ರಿ ಮಾಡಿಯೇ ಮಾಡುತ್ತೇನೆ’ ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು.

ಈಗಾಗಲೇ ಏಳು ಬಾರಿ ಶಾಸಕನಾಗಿದ್ದು, 8ನೆ ಬಾರಿಯೂ ಶಾಸಕನಾಗುವ ತೀಮಾನ ಮಾಡಿದ್ದು, ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದೇನೆ. ಮುಂದಿನ ಬಾರಿ ಶಾಸಕನಾದ ಮೇಲೆ ನಾನು ರಾಜಕೀಯದಿಂದ ನಿವೃತ್ತಿ ಆಗಬೇಕೆಂದಿದ್ದೇನೆ. ಆದರೆ, ಆ ಮಹಾನಾಯಕನನ್ನು ಮೂಲೆಗೆ ತಳ್ಳುವ ಉದ್ದೇಶದಿಂದಲೇ ಸ್ಪರ್ಧೆಗೆ ಇಳಿದಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಗುಡುಗಿದರು.

ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ಮಾಡಿ ರಾಜಕೀಯ ಮಾಡುತ್ತಿದ್ದಾನೆ ಆ ಮಹಾನಾಯಕ. ಆತನನ್ನು ನಾನು ಪೂರ್ಣ ಪ್ರಮಾಣದಲ್ಲಿ ಮನೆಗೆ ಕಳುಹಿಸುವ ವರೆಗೂ ನಾನು ರಾಜಕೀಯದಿಂದ ನಿವೃತ್ತಿ ಆಗುವುದಿಲ್ಲ. ಏನೇ ಆದರೂ 2023ಕ್ಕೆ ಮತ್ತೊಮ್ಮೆ ಬಿಜೆಪಿಯ ಮುಖ್ಯಮಂತ್ರಿ ಆಗಲೇಬೇಕು ಎಂದು ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ರಾಜಕಾರಣಿ ಅನ್ನುವ ಯೋಗ್ಯತೆಯೂ ಇಲ್ಲ: ಶಿವಕುಮಾರ್ ರಾಜಕಾರಣಿ ಅನ್ನುವುದಕ್ಕೂ ಯೋಗ್ಯತೆ ಇಲ್ಲ. ರಾಜಕಾರಣದಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದ ನಾಲಾಯಕ್. ಒಂದು ವರ್ಷದಿಂದ ಸುಮ್ಮನೆ ಕೂತಿದ್ದೆ. ನಾನು ವೈಯಕ್ತಿಕ ಯಾರನ್ನು ದ್ವೇಷ ಮಾಡುವುದಿಲ. ನಾನು ಯಾವುದೇ ಸಿಡಿ ಬಿಡುಗಡೆ ಮಾಡುವುದಿಲ್ಲ. ಜಾರಕಿಹೊಳಿ ಯಾವುದೇ ಗಾಳಿಯಲ್ಲಿ ಗುಂಡು ಹಾರಿಸುವುದಿಲ್ಲ. ಆದರೆ, ಶಿವಕುಮಾರ್ ಒಬ್ಬ ಮಹಿಳೆ ಮುಖಾಂತರ ನನ್ನ ಜೀವನ ಹಾಳು ಮಾಡಿದ್ದಾರೆ ಎಂದು ರಮೇಶ್ ದೂರಿದರು.

ಶಿವಕುಮಾರ್ ಸಾವಿರಾರು ಕೋಟಿ ರೂ.ಮಾಲಕ. ಸಿಡಿ ಲೇಡಿ ಹಾಗೂ ಅವರಿಗೆ ಸಹಕರಿಸಿದ ಎಲ್ಲರನ್ನು ಸಿಬಿಐ ತಂಡ ಆದಷ್ಟು ಬೇಗ ಬಂಧಿಸಬೇಕೆಂದು ಆಗ್ರಹಿಸಿದ ಅವರು, ಡಿ.ಕೆ.ಶಿವಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ನಾನು ನೋಡಲು ಹೋಗಿದ್ದೆ. ಆಗ ಡಿಕೆಶಿ ಪತ್ನಿ ಉಷಾ ಅವರು ಕಾಂಗ್ರೆಸ್ ಬಿಡದಂತೆ ಬೇಡಿಕೊಂಡಿದ್ದರು. ನಾನು ಮಾತನಾಡಿರುವ ಒಂದು ಅವಾಚ್ಯ ಶಬ್ದವನ್ನು ಎಡಿಟ್ ಮಾಡಿ ರಾಣಿ ಚೆನ್ನಮ್ಮರಿಗೆ ಹೋಲಿಸಿ ಜಾತಿ ಮಧ್ಯ ಜಗಳ ಹಚ್ಚುವ ಷಡ್ಯಂತ್ರ ಮಾಡಿದ್ದಾರೆಂದು ಆರೋಪಿಸಿದರು.

ಸಿಡಿಗಳನ್ನು ಮಾಡಿ ಶಿವಕುಮಾರ್ ಹಲವು ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಅವರ ಬ್ಲಾಕ್ ಮನಿ ಬಗ್ಗೆ ಸಿಬಿಐ ಮೂಲಕ ತನಿಖೆ ನಡೆಸಬೇಕು. ನನ್ನ ಬಳಿ 120ಕ್ಕೂ ಹೆಚ್ಚು ದಾಖಲೆಗಳಿವೆ. ಆದರೆ, ಅವುಗಳನ್ನು ಈಗ ಬಿಡುಗಡೆ ಮಾಡುವುದಿಲ್ಲ. ಸಿಡಿ ವಿಚಾರ ಈಗ ಬಹಿರಂಗ ಪಡಿಸಲ್ಲ. ಸಿಡಿ ಸಂಬಂಧ ಎಲ್ಲ ದಾಖಲಾತಿಗಳನ್ನು ಸಿಬಿಐಗೆ ನೀಡುತ್ತೇನೆ. ಆದರೆ, ಸಿಡಿಯಲ್ಲಿ ಆಡಿಯೋ ಬಿಡುಗಡೆ ಮಾಡುತ್ತೇನೆ. ಸಿಡಿ ಲೇಡಿ, ಸುರೇಶ ಮತ್ತು ನರೇಶ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಶಾಸಕಿಯೊಬ್ಬರ ಸಂಬಂಧ ರಾಜ್ಯದಲ್ಲಿ ಕಾಂಗ್ರೆಸ್ ಹಾಳಾಗಿದೆ. ಇಡೀ ರಾಜಕಾರಣ ಮುಂದೆಯೂ ಹಾಳಾಗುತ್ತದೆ. ಇದರಲ್ಲಿ ಬಹಳ ಜನ ಟ್ರ್ಯಾಪ್ ಆಗಿದ್ದಾರೆ. ಗಂಭೀರವಾದ ಪ್ರಕರಣವನ್ನು ಸರಕಾರ ಸಿಬಿಐಗೆ ವಹಿಸಬೇಕು ಎಂದ ಅವರು, ತನಿಖೆ ನಡೆಸಿದರೆ ಎಲ್ಲವೂ ಬೆಳಕಿಗೆ ಬರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


‘ಡಿ.ಕೆ.ಶಿವಕುಮಾರ್ ಆಗರ್ಭ ಶ್ರೀಮಂತನೇನಲ್ಲ. ಹರಿದ ಚಪ್ಪಲಿ ಹಾಕಿಕೊಂಡು ಓಡಾಡುತ್ತಿದ್ದ. 1985ರಲ್ಲಿ ತಾವು ಮತ್ತು ಡಿಕೆಶಿ ಒಟ್ಟಿಗೆ ಚುನಾವಣೆ ಎದುರಿಸಿದ್ದೆವು. ನಾನು ಉದ್ಯಮ ನಡೆಸಿ ಈ ಹಂತಕ್ಕೆ ಬಂದಿದ್ದೇನೆ. ಆದರೆ, ಶಿವಕುಮಾರ್ ಲೂಟಿ ಮಾಡಿ ಶ್ರೀಮಂತನಾಗಿದ್ದಾನೆ. ದುಬೈ, ಲಂಡನ್‌ನಲ್ಲಿ ಮನೆಯಿದೆ. ತಮ್ಮ ಬಳಿ ಸಾವಿರಾರು ಕೋಟಿ ರೂ.ಹಣವಿದೆ ಎಂಬ ಹೇಳಿಕೆಯ ಆಡಿಯೋ ಸಾಕ್ಷಿ ತಮ್ಮ ಬಳಿ ಇದೆ’
-ರಮೇಶ್ ಜಾರಕಿಹೊಳಿ ಮಾಜಿ ಸಚಿವ

 

Similar News