ವಿಐಎಸ್ ಎಲ್ ಕಾರ್ಖಾನೆ ಮುಚ್ಚದಂತೆ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ; ಬಿಜೆಪಿ ಕಾರ್ಯಕಾರಿಣಿ ಸಭೆಗೆ ಮುತ್ತಿಗೆಗೆ ಯತ್ನ

Update: 2023-01-30 12:57 GMT

ಶಿವಮೊಗ್ಗ, ಜ.30: ಉಕ್ಕಿನ ನಗರಿ ಭದ್ರಾವತಿಯಲ್ಲಿ ವಿಐಎಸ್ ಎಲ್ ಕಾರ್ಖಾನೆ ಕಾರ್ಮಿಕರ ಹೋರಾಟ ತೀವ್ರಗೊಂಡಿದ್ದು, ಭದ್ರಾವತಿಯ ಬಸವೇಶ್ವರ ಸಮುದಾಯ ಭವನದಲ್ಲಿ ನಡೆಯುತ್ತಿದ್ದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಗೆ ಮುತ್ತಿಗೆ ಹಾಕಲು ಯತ್ನಿಸಿರುವ ಘಟನೆ ನಡೆದಿದೆ. 

ಪ್ರತಿಭಟನಾನಿರತ ಕಾರ್ಮಿಕರನ್ನು ಹೊಸ ಸೇತುವೆ ಬಳಿ ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದಿದ್ದಾರೆ. ಈ ವೇಳೆ ಬ್ಯಾರಿಕೇಡ್ ತಳ್ಳಿ ಬಿಜೆಪಿ ಕಾರ್ಯಕಾರಿಣಿ ನಡೆಯುವ ಸ್ಥಳಕ್ಕೆ ಒಳನುಗ್ಗಲು  ಕಾರ್ಮಿಕರು ಯತ್ನಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ. ಸಂಸದ ರಾಘವೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಕಾರ್ಮಿಕರ ಆಕ್ರೋಶ ವ್ಯಕ್ತಪಡಿಸಿದರು. 

ಇದೇ ವೇಳೆ ಸಭೆಯಲ್ಲಿ ಭಾಗವಹಿಸಿದ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೂ ಮುತ್ತಿಗೆ ಹಾಕಲು ಯತ್ನಿಸಿದರು.

ಪ್ರತಿಭಟನಾಕಾರರ ಮನವೊಲಿಕೆಗೆ ಪ್ರಯತ್ನಿಸಿದ ಸಂಸದ ಬಿವೈ ರಾಘವೇಂದ್ರ ಅವರು, ಇನ್ನೆರಡು ದಿನಗಳಲ್ಲಿ ವಾಪಾಸ್ ಬಂದು ಕಾರ್ಖಾನೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಜೊತೆ ಮಾತನಾಡಲಿದ್ದೇನೆ. ಕಾರ್ಖಾನೆ ಮರುಸ್ಥಾಪನೆಗೆ ಏನು ಸಾಧಕ ಭಾಧಕಗಳಿವೆ ಅದನ್ನು ಚರ್ಚಿಸೋಣವೆಂದು ಭರವಸೆ ನೀಡಿದರು. ಸಂಸದ ಮಾತಿಗೆ ಸೊಪ್ಪು ಹಾಕದ ಪ್ರತಿಭಟನಾಕಾರರು ಘೋಷಣೆಯನ್ನು ಕೂಗಿದ್ದಾರೆ.

Similar News