ಮುರುಘಾಮಠಕ್ಕೆ ಸರಕಾರದಿಂದ ಅನುದಾನ: ಸಂಪೂರ್ಣ ಮಾಹಿತಿ ಒದಗಿಸಲು ಹೈಕೋರ್ಟ್ ನಿರ್ದೇಶನ

Update: 2023-01-30 15:14 GMT

ಬೆಂಗಳೂರು, ಜ.30: ಚಿತ್ರದುರ್ಗದ ಮುರುಘಾ ಮಠದ(ಎಸ್‍ಜೆಎಂ)  ವತಿಯಿಂದ ನಿರ್ಮಿಸಲಾಗುತ್ತಿರುವ ಅತಿ ಎತ್ತರದ ಬಸವೇಶ್ವರ ಪ್ರತಿಮೆ ಹಾಗೂ ಅಲ್ಲಮಪ್ರಭು ಸಂಶೋಧನಾ ಕೇಂದ್ರಕ್ಕೆ ರಾಜ್ಯ ಸರಕಾರ ನೀಡಿರುವ ಕೋಟ್ಯಂತರ ರೂಪಾಯಿಗಳ ಅನುದಾನದ ಸಂಪೂರ್ಣ ಮಾಹಿತಿ ಒದಗಿಸಬೇಕು ಮತ್ತು ಈ ಅನುದಾನ ನೀಡುವಾಗ ಏನಾದರೂ ಷರತ್ತುಗಳನ್ನು ವಿಧಿಸಲಾಗಿತ್ತೇ ಎಂಬುದನ್ನು ತಿಳಿಸಬೇಕು ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರನ್ನು ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಎಸ್‍ಜೆಎಂ ವಿದ್ಯಾಪೀಠದ ಅಧ್ಯಕ್ಷ, ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ನಿರ್ದೆಶನ ನೀಡಿದೆ. 

ಸರಕಾರದ ಪರ ವಾದಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು, ‘ಮುರುಘಾಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಆದರೆ, ಈಗಿನ ಪೀಠಾಧಿಪತಿ ಮುರುಘಾ ಶರಣರು ಪೊಕ್ಸೊ ಕಾಯ್ದೆ ಅಡಿಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಮಠಕ್ಕೆ ಸೇರಿದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಹಾಗೂ ನೂರಾರು ವಿದ್ಯಾಸಂಸ್ಥೆಗಳ ದೈನಂದಿನ ಆಡಳಿತಕ್ಕೆ ವ್ಯತ್ಯಯ ಉಂಟಾಗಬಾರದು ಎಂಬ ಏಕೈಕ ಕಾರಣಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. 

ಮಠದ ವತಿಯಿಂದ ನಿರ್ಮಿಸಲಾಗುತ್ತಿರುವ ಅತಿ ಎತ್ತರದ ಬಸವ ಪ್ರತಿಮೆ ಹಾಗೂ ಅಲ್ಲಮಪ್ರಭು ಸಂಶೋಧನಾ ಕೇಂದ್ರಕ್ಕೆ ಸರಕಾರವು ಕಾಲಕಾಲಕ್ಕೆ ಕೋಟ್ಯಂತರ ರೂಪಾಯಿಗಳ ಅನುದಾನ ನೀಡುತ್ತಾ ಬಂದಿದೆ. ಈ ಕುರಿತ ಎಲ್ಲ ದಾಖಲೆಗಳನ್ನು ಕೋರ್ಟ್‍ಗೆ ಒದಗಿಸಲಾಗುವುದು ಪೀಠಕ್ಕೆ ಹೇಳಿದರು. 

ಆಡಳಿತಾಧಿಕಾರಿ ಪರ ಹಿರಿಯ ವಕೀಲ ಗಂಗಾಧರ ಗುರುಮಠ ಅವರಿಗೆ ಫೆಬ್ರುವರಿ 2ರಂದು ವಾದ ಮಂಡಿಸಲು ಅವಕಾಶ ನೀಡಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

ಮುರುಘಾ ಶರಣರ ವಿರುದ್ಧ ತನಿಖಾಧಿಕಾರಿಗಳು, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ ಅನ್ವಯ ವಿಚಾರಣೆ ಮುಗಿಯುವತನಕ ಶರಣರು ಅಧಿಕಾರ ಚಲಾಯಿಸುವಂತಿಲ್ಲ ಎಂದು ಸೆಷನ್ಸ್ ಕೋರ್ಟ್ ನೀಡಿರುವ ದಾಖಲೆಯನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲ ಸಂದೀಪ್ ಎಸ್.ಪಾಟೀಲ್ ಇದೇ ವೇಳೆ ನ್ಯಾಯಪೀಠಕ್ಕೆ ವಿವರಿಸಿದರು. 

Similar News