ಸರಕಾರಿ ಜಮೀನುಗಳ ತೆರವು | ನೋಟಿಸ್ ನೀಡುವ ಅಧಿಕಾರ ಡಿಸಿಗೆ ಮಾತ್ರ ಇರುತ್ತದೆ: ಹೈಕೋರ್ಟ್

Update: 2023-01-30 15:22 GMT

ಬೆಂಗಳೂರು, ಜ.30: ಸರಕಾರದ ಜಮೀನುಗಳು ಖಾಸಗಿ ವ್ಯಕ್ತಿಗಳಿಂದ ಒತ್ತುವರಿಯಾಗಿದ್ದಲ್ಲಿ ಅದನ್ನು ತೆರವು ಮಾಡುವುದಕ್ಕಾಗಿ ಒತ್ತುವರಿದಾರರಿಗೆ ನೋಟಿಸ್ ನೀಡುವ ಅಧಿಕಾರ ಜಿಲ್ಲಾಧಿಕಾರಿಗೆ  ಮಾತ್ರ ಇರುತ್ತದೆ ಎಂದು ಹೈಕೋರ್ಟ್ ತಿಳಿಸಿದೆ. 

ಸರಕಾರಿ ಜಮೀನು ಒತ್ತುವರಿ ಸಂಬಂಧ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ತಹಶೀಲ್ದಾರ್ ನೀಡಿದ್ದ ನೋಟಿಸ್ ರದ್ದುಪಡಿಸುವಂತೆ ಕೋರಿ ಸ್ಥಳೀಯ ಬಾಲಪ್ಪ ಸೇರಿ ಇತರೆ ಎಂಟು ಮಂದಿ ರೈತರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಒತ್ತುವರಿದಾರರಿಗೆ ನೋಟಿಸ್ ನೀಡುವ ಅಧಿಕಾರ ತಹಶೀಲ್ದಾರ್ ಅವರಿಗೆ ಇಲ್ಲ ಎಂದು ಸ್ಪಷ್ಟಪಡಿಸಿದೆ. 

ಈ ಕೇಸ್‍ನಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಸೆಕ್ಷನ್ 94(3) ಮತ್ತು 39(1) ಅಡಿಯಲ್ಲಿ ಅರ್ಜಿದಾರರಿಗೆ ತಹಶೀಲ್ದಾರ್ ನೋಟಿಸ್ ಜಾರಿ ಮಾಡಿದ್ದಾರೆ. 

ಆದರೆ, ಸೆಕ್ಷನ್ 39ರ ಪ್ರಕಾರ ಸರಕಾರಿ ಜಮೀನನ್ನು ಯಾರಾದರೂ ಒತ್ತುವರಿ ಮಾಡಿದ್ದರೆ, ಅದನ್ನು ತೆರವು ಮಾಡಬೇಕಾದರೆ ಜಿಲ್ಲಾಧಿಕಾರಿಗೆ ಅಧಿಕಾರವಿದೆ. ಹೀಗಾಗಿ, ತೆರವು ಕಾರ್ಯಾಚರಣೆ ಜಿಲ್ಲಾಧಿಕಾರಿ ಮಾತ್ರ ಮಾಡಬೇಕು. ಅದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯೇ ಆದೇಶ ನೀಡಬೇಕು ಎಂದು ನ್ಯಾಯಪೀಠವು ತಿಳಿಸಿದೆ. 

ತೆರವು ಕಾರ್ಯಾಚರಣೆಗೂ ಮುನ್ನ ಒತ್ತುವರಿದಾರರಿಗೆ ನೋಟಿಸ್ ಜಾರಿಗೊಳಿಸಬೇಕು. ಅದನ್ನು ಸ್ವೀಕರಿಸಿದ ನಂತರ ಜಾಗದ ತೆರವಿಗೆ ಕಾಲಾವಕಾಶ ನೀಡಿ ಮುಂದಿನ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲ ಲಕ್ಷ್ಮಣ್ ಟಿ.ಮಂಟಗು ಅವರು, ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಸೆಕ್ಷನ್ 39 ಪ್ರಕಾರ ನೋಟಿಸ್ ಜಾರಿ ಮಾಡಲು ತಹಶೀಲ್ದಾರ್ ಅವರಿಗೆ ಸಕ್ಷಮ ಪ್ರಾಧಿಕಾರವಲ್ಲ. ಹೀಗಾಗಿ, ಅವರ ನೋಟಿಸ್ ರದ್ದುಪಡಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದ್ದರು. ಅದನ್ನು ಆಕ್ಷೇಪಿಸಿದ್ದ ಸರಕಾರಿ ವಕೀಲರು, ತಹಶೀಲ್ದಾರ್ ನೋಟಿಸ್ ಜಾರಿ ಮಾಡಿರುವುದು ನ್ಯಾಯಸಮ್ಮತವಾಗಿದೆ ಎಂದು ತಿಳಿಸಿ ಅರ್ಜಿ ವಜಾಗೊಳಿಸುವಂತೆ ಮನವಿ ಮಾಡಿದ್ದರು. 

Similar News