15 ಸಾವಿರ ಶಿಕ್ಷಕರ ನೇಮಕಾತಿ ಆಯ್ಕೆಪಟ್ಟಿ ರದ್ದುಗೊಳಿಸಿದ ಹೈಕೋರ್ಟ್

Update: 2023-01-30 15:55 GMT

ಬೆಂಗಳೂರು, ಜ.30: ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಇತ್ತೀಚೆಗೆ ಅಧಿಸೂಚಿಸಿ ನೇಮಕಾತಿ ಪ್ರಕ್ರಿಯೆ ನಡೆಸಿದ್ದ 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ನೇಮಕಾತಿಗೆ ಸಂಬಂಧಿಸಿದಂತೆ 1:1 ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ.

ಶಿಕ್ಷಕರ ನೇಮಕಾತಿಯಲ್ಲಿ 1:2 ಆಯ್ಕೆಪಟ್ಟಿಯಲ್ಲಿ ಅರ್ಹತೆ ಇದ್ದರೂ ಮೀಸಲಾತಿ ಗೊಂದಲದಿಂದ ತಾತ್ಕಾಲಿಕ ಆಯ್ಕೆಪಟ್ಟಿ 1:1ರಲ್ಲಿ ಹೆಸರು ಪ್ರಕಟವಾಗದ ಉಡುಪಿಯ ಎಡತಾಡಿ ಗ್ರಾಮದ ಅನಿತಾ ಸೇರಿ 40ಕ್ಕೂ ಅಧಿಕ ಆಕಾಂಕ್ಷಿಗಳು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಹದಿನೈದು ಸಾವಿರ ಶಿಕ್ಷಕರ ನೇಮಕಾತಿ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿ ಆದೇಶಿಸಿದೆ. 

ಅಭ್ಯರ್ಥಿಗಳ ಆಯ್ಕೆ ವೇಳೆ ಶಿಕ್ಷಣ ಇಲಾಖೆ, ಮಹಿಳಾ ಅಭ್ಯರ್ಥಿಗಳ ಪತಿಯ ಜಾತಿ, ಆದಾಯ ಪ್ರಮಾಣಪತ್ರ ಪರಿಗಣಿಸಿದ್ದು, ಇದರಿಂದ ಹಲವು ಅಭ್ಯರ್ಥಿಗಳ ಹೆಸರುಗಳು ಆಯ್ಕೆಪಟ್ಟಿಯಲ್ಲಿ ಬಂದಿಲ್ಲ. ಇದನ್ನು ಪ್ರಶ್ನಿಸಿ ನೂರಾರು ಅಭ್ಯರ್ಥಿಗಳು ರಿಟ್ ಅರ್ಜಿ ಸಲ್ಲಿಸಿದ್ದರು ಮತ್ತು ತಂದೆಯ ಜಾತಿ, ಆದಾಯ ಪ್ರಮಾಣಪತ್ರ ಪರಿಗಣಿಸಬೇಕು ಎಂದು ಮನವಿ ಮಾಡಿದ್ದರು. 

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು ಈಗ ಪ್ರಕಟಿಸಲಾಗಿರುವ ಆಯ್ಕೆ ಪಟ್ಟಿಯನ್ನು ರದ್ದುಪಡಿಸಿದ್ದು, ಅಭ್ಯರ್ಥಿ ತಂದೆಯ ಜಾತಿ, ಆದಾಯ ಪ್ರಮಾಣಪತ್ರ ಆಧರಿಸಿ ಹೊಸದಾಗಿ ಆಯ್ಕೆ ಪಟ್ಟಿ ಪ್ರಕಟಿಸುವಂತೆ ಶಿಕ್ಷಣ ಇಲಾಖೆಗೆ ಆದೇಶಿಸಿದೆ.

ಇನ್ನು ಅಭ್ಯರ್ಥಿಗಳು ದಾಖಲಿಸಿದ್ದ ರಿಟ್ ಅರ್ಜಿಯ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಶಶಿಕಿರಣ್ ಶೆಟ್ಟಿ ಅವರು, ಶಿಕ್ಷಣ ಇಲಾಖೆಯ ನಿಯಮ ಕಾನೂನುಬಾಹಿರವೆಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಜೊತೆಗೆ, ಈಗ ಸರಕಾರ ಬಿಡುಗಡೆ ಮಾಡಿರುವ ತಾತ್ಕಾಲಿಕ ಆಯ್ಕೆಪಟ್ಟಿ ಕಾನೂನು ಬಾಹಿರವಾಗಿದೆ ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. 

ತಾತ್ಕಾಲಿಕ ಪಟ್ಟಿಗೆ ತಕರಾರು ಏಕೆ?: ತಕರಾರು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಹಿಂದೆ ಪದವೀಧರರ ಪ್ರಾಥಮಿಕ ಶಾಲಾ ಶಿಕ್ಷಕರ (6-8 ತರಗತಿ) ನೇಮಕಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಲಿಖಿತ ಪರೀಕ್ಷೆಗೆ ಹಾಜರಾಗಿ ಉತ್ತಮ ರ್ಯಾಂಕ್ ಗಳಿಸಿದ್ದರು. ಅಲ್ಲದೆ, 1:2 ಅನುಪಾತದ ತಾತ್ಕಾಲಿಕ ಪಟ್ಟಿಯಲ್ಲಿ ದಾಖಲೆಗಳ ಪರಿಶೀಲನೆಗೆ ಅರ್ಹರಾಗಿದ್ದರು. ಆದರೆ, ದಾಖಲೆಗಳನ್ನು ಪರಿಶೀಲಿಸಿದ್ದ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. 2022ರ ನ.18ರಂದು 1:1 ತಾತ್ಕಾಲಿಕ ಆಯ್ಕೆ ಪಟ್ಟಿಪ್ರಕಟಿಸಿದ್ದು, ಅರ್ಜಿದಾರರು ಅದರಲ್ಲಿ ಸ್ಥಾನ ಪಡೆದಿರಲಿಲ್ಲ. ಇದರಿಂದ ಅರ್ಜಿದಾರರು ತಾತ್ಕಾಲಿಕ ಪಟ್ಟಿಯನ್ನು ಪ್ರಶ್ನಿಸಿದ್ದರು. 

Similar News