ಅವಮಾನಿಸುವ ಉದ್ದೇಶವಿಲ್ಲದೇ ಜಾತಿ ಹೆಸರಿನಲ್ಲಿ ನಿಂದಿಸಿದಲ್ಲಿ ಎಸ್‍ಸಿ, ಎಸ್‍ಟಿ ಕಾಯ್ದೆಯಡಿ ಅಪರಾಧವಲ್ಲ: ಹೈಕೋರ್ಟ್

Update: 2023-01-30 16:56 GMT

ಬೆಂಗಳೂರು, ಜ.30: ಅವಮಾನಿಸುವ ಮತ್ತು ಟೀಕಿಸುವ ಉದ್ದೇಶವಿಲ್ಲದೆ ಜಾತಿ ಹೆಸರನ್ನು ಪ್ರಸ್ತಾಪಿಸಿ ನಿಂದಿಸಿದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. 

ಅನೇಕಲ್‍ನ ಸೂರ್ಯನಗರದ ನಿವಾಸಿ ವಿ.ಶೈಲೇಶ್‍ಕುಮಾರ್ ತಮ್ಮ ವಿರುದ್ಧದ ಎಸ್ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಅಂಗೀಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.

ನ್ಯಾಯಾಲಯ ಅರ್ಜಿದಾರರ ವಿರುದ್ಧದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯ್ದೆ ಸೆಕ್ಷನ್ 3(1)(ಆರ್) ಮತ್ತು (ಎಸ್) ಅಡಿ ಆರೋಪಗಳನ್ನು ರದ್ದುಗೊಳಿಸಿದೆ. ಆದರೆ, ಐಪಿಸಿ ಅಡಿ ಪ್ರಕರಣ ಮುಂದುವರಿಕೆಗೆ ಅನುಮತಿ ನೀಡಿದೆ. ಸಂತ್ರಸ್ತನ ಜಾತಿ ಹೆಸರನ್ನು ಉಲ್ಲೇಖಿಸಿದರೆ ಅದು ಅಪರಾಧವಾಗುವುದಿಲ್ಲ, ಆ ಜಾತಿಯ ಹೆಸರನ್ನು ಆತನನ್ನು ನಿಂದಿಸುವ ಉದ್ದೇಶಕ್ಕೆ ಬಳಸಿದಾಗ ಮಾತ್ರ ಅದು ಅಪರಾಧವಾಗಲಿದೆ. ಈ ಪ್ರಕರಣದಲ್ಲಿ ಘಟನೆ ನಡೆದ ತಕ್ಷಣ ನೀಡಿದ ದೂರಿನಲ್ಲಿ ಜಾತಿ ನಿಂದನೆ ವಿಚಾರ ಪ್ರಸ್ತಾಪವೇ ಆಗಿಲ್ಲ ಮತ್ತು ದೂರುದಾರರೂ ಸಹ ದೂರಿನಲ್ಲಿ ಅದನ್ನು ಹೇಳಿಲ್ಲ. ಆರೋಪ ಮಾಡಿರುವುದು ಜೀವ ಬೆದರಿಕೆ ಅಷ್ಟೇ ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೇ, ಜಾತಿ ನಿಂದನೆ ಆರೋಪಗಳಿಗೆ ಸಂಬಂಧಿಸಿದಂತೆ ಜಗಳ ನಡೆದಾಗ ಎರಡೂ ಕಡೆಯವರ ನಡುವೆ ಮಾತಿಗೆ ಮಾತು ನಡೆದಿವೆ. ಆರೋಪಿ ಅವರ ಜಾತಿಯ ಹೆಸರು ಬಳಸಿದ್ದಾರೆಂದು ಹೇಳಲಾಗಿದೆ. ಆದರೆ ಆತ ಉದ್ದೇಶಪೂರ್ವಕವಾಗಿ ಅಥವಾ ಅಪಮಾನ ಮಾಡಲೆಂದೇ ಜಾತಿ ನಿಂದನೆ ಮಾಡಿದ್ದಾನೆ ಎನ್ನುವುದಕ್ಕೆ ಯಾವುದೇ ವಿವರಗಳಿಲ್ಲ. ಜತೆಗೆ ಕಾಯಿದೆಯ ಉದ್ದೇಶ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಅಪಮಾನಿಸಿ ಉದ್ದೇಶಪೂರ್ವಕವಾಗಿ ಆತನ ಜಾತಿ ಹಿಡಿದು ನಿಂದಿಸಿದರೆ ಆಗ ಮಾತ್ರ ಕಾಯಿದೆಯ ಅನ್ವಯ ಕ್ರಮ ಕೈಗೊಳ್ಳಬಹುದಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಆದರೆ, ಈ ಪ್ರಕರಣದಲ್ಲಿ ಆರೋಪ ಪಟ್ಟಿ ಮತ್ತು ಸಾಕ್ಷಿಗಳ ಹೇಳಿಕೆಯಲ್ಲಿ ಎಲ್ಲೂ ಏಕೆ ಜಾತಿ ನಿಂದನೆ ಮಾಡಲಾಯಿತು, ಹೇಗೆ ಮಾಡಲಾಯಿತು ಎಂಬ ಬಗ್ಗೆ ಉಲ್ಲೇಖಿಸಿಲ್ಲ. ಜತೆಗೆ ಉದ್ದೇಶ ಪೂರ್ವಕವಾಗಿ ನಿಂದನೆ ಮಾಡಲೇಬೇಕೆಂದು ನಿಂದನೆ ಮಾಡಿರುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಹೀಗಾಗಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿಯ ಪ್ರಕರಣ ಊರ್ಜಿತವಾಗದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

Similar News